ಹಳಗುಣಕಿ ಗ್ರಾಮದಲ್ಲಿ ಕಾರ್ಮಿಕ ಮಕ್ಕಳ ವಸತಿ ಶಾಲೆ ಮಂಜೂರು ಮಾಡಿಸಲಾಗಿದೆ. ಸುಮಾರು ₹65 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣವಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಜಿಟಿಟಿಸಿ ಕಾಲೇಜು ಹಾಗೂ ಮಹಾರಾಷ್ಟ್ರ, ಗೋವಾ ಇತರೆ ರಾಜ್ಯಗಳಿಗೆ ದುಡಿಯಲು ಗೂಳೆ ಹೋಗುವ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಕಾರ್ಮಿಕ ಮಕ್ಕಳ ವಸತಿ ಶಾಲೆ ಮಂಜೂರು ಮಾಡಿಸಲಾಗಿದೆ. ಸುಮಾರು ₹65 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣವಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ವೀರಭಾರತಿ ವಿದ್ಯಾಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಿಂದ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಜಿಲ್ಲೆಯಾಗುವ ಕನಸು ಹೊಂದಲಾಗಿದೆ. ಜಿಲ್ಲೆಯಲ್ಲಿರಬೇಕಾದ ಎಲ್ಲಾ ಸೌಲಭ್ಯಗಳು ಇಂಡಿಯಲ್ಲಿ ದೊರೆಯುವಂತೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ಅರ್ಹತೆಯ ವಾತಾವರಣ ಸೃಷ್ಠಿ ಮಾಡಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಇಂಡಿ ಮತಕ್ಷೇತ್ರಕ್ಕೆ ಐತಿಹಾಸಿಕ ಯೋಜನೆಗಳು ಲಭಿಸಲಿವೆ. ಹೇಳಿ ಮಾಡುವ ರಾಜಕಾರಣ ಮಾಡುವುದಕ್ಕಿಂತ ಮಾಡಿ ತೋರಿಸುವ ರಾಜಕಾರಣ ಮಾಡಿದ್ದೇನೆ. ತಾಲೂಕು ಅಭಿವೃದ್ಧಿಯಾಗಬೇಕಾದ ಎಲ್ಲವುಗಳನ್ನು ಗಮನದಲ್ಲಿ ಇಟ್ಟುಕೊಂಡು ದೂರದೃಷ್ಠಿಯ ರಾಜಕಾರಣ ಮಾಡಿದ್ದೇನೆ ಎಂದು ಹೇಳಿದರು.

ಜನಸಂಖ್ಯೆ ಗಣತಿ ಮುಗಿದ ಮೇಲೆ ಇಂಡಿ ನಗರಸಭೆ ಆಗಬೇಕಿತ್ತು. ಆದರೆ 2011ರ ಜನಗಣತಿಯ ಅಂಕಿ-ಅಂಶಗಳನ್ನು ಒಳಗೊಂಡು ಸದ್ಯ ನಗರದ ಜನಸಂಖ್ಯೆಯ ಆಧಾರದ ಮೇಲೆ ಸರ್ಕಾರದ ಮೇಲೆ ಒತ್ತಡ ಹೇರಿ ಇಂಡಿ ನಗರಸಭೆಯನ್ನಾಗಿ ಮಾಡಿದ್ದೇನೆ. ಇಂಡಿ ಅಭಿವೃದ್ಧಿ ಪ್ರಾಧಿಕಾರ, ಮಾಸ್ಟರ್‌ ಪ್ಲ್ಯಾನ್‌, ಶಿಕ್ಷಣ ಹಬ್ಬ ಸೇರಿದಂತೆ ಇಂಡಿ ನಗರದ ಅಭಿವೃದ್ಧಿಗೆ ಎಲ್ಲವೂ ಮಾಡಲಾಗಿದೆ. ಬದ್ಧತೆ, ಪ್ರಾಮಾಣಿಕತೆಯಿಂದ ರಾಜಕಾರಣ ಮಾಡುತ್ತಿದ್ದೇನೆ. ಅಪರಾಧ ಹಿನ್ನೆಲೆ ಹೊಂದಿರುವ ಈ ತಾಲೂಕನ್ನು ನಿಂಬೆಯ ನಾಡನ್ನಾಗಿ ಬದಲಾಯಿಸಲು ಶ್ರಮಿಸಲಾಗಿದೆ. ತಾಲೂಕಿನ ರಸ್ತೆಗಳು ಹಾಳಾಗಿದ್ದು ಒಪ್ಪಿಕೊಳ್ಳುತ್ತೇನೆ. ಇದು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಮುಂಬರುವ ದಿನದಲ್ಲಿ ಇಂಡಿ ಮಾದರಿ ತಾಲೂಕು, ಅಭಿವೃದ್ಧಿ ಹೊಂದಿದ ತಾಲೂಕು, ಜಿಲ್ಲೆಯ ಎಲ್ಲ ಲಕ್ಷಣಗಳನ್ನು ಹೊಂದುವ ಹಾಗೆ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹೇಳಿದರು.

ಮಕ್ಕಳಲ್ಲಿ ಹಲವು ಪ್ರತಿಭೆಗಳು ಅಡಗಿರುತ್ತವೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಪ್ರತಿಭಾ ಕಾರಂಜಿ ಹಮ್ಮಿಕೊಂಡಿದ್ದು ಸಂತಸದ ಸಂಗತಿ. ದೇಸಿ ಕಲೆಗಳನ್ನು ಜೀವಂತವಾಗಿಡಲು, ವಿದ್ಯಾರ್ಥಿಗಳಿಗೆ ಗ್ರಾಮೀಣ ಕಲೆಗಳನ್ನು ಪರಿಚಯಿಸಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದರು.

ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ಸಿಕ್ಕ ಉತ್ತಮ ವೇದಿಕೆ ಪ್ರತಿಭಾ ಕಾರಂಜಿ. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಪ್ರೋತ್ಸಾಹಿಸಿ ಅವರಿಗೆ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವಂತಹ ವೇದಿಕೆ ಇದಾಗಿದೆ ಎಂದು ಹೇಳಿದರು.ಮಕ್ಕಳು ಜಿಲ್ಲಾ ಮಟ್ಟದ ಸ್ಪರ್ಧೆಯಿಂದ ರಾಜ್ಯಮಟ್ಟಕ್ಕೆ ಹೋಗಲಿ ಎಂದು ಹಾರೈಸಿದರು.

ಬಿಇಒ ಎಸ್.ಎಸ್‌. ಮುಜಾವರ, ಕ್ಷೇತ್ರಸಮನ್ವಯಾಧಿಕಾರಿ ಎಸ್.ಆರ್.ನಡಗಡ್ಡಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ವೀರಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಅಭಿನಂದನ ಕಿರಣಗಿ, ನಿಜಣ್ಣ ಕಾಳೆ, ಶಂಕರ ಕೊಳೆಕರ, ಎ.ಎಸ್‌. ಬಿರಾದಾರ, ಸಿಪಿಐ ಪ್ರದೀಪ ಭಿಸೆ, ಇಒ ಡಾ.ಭೀಮಾಶಂಕರ ಕನ್ನೂರ, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಸುಜಾತಾ ಪೂಜಾರಿ, ಎ.ಸಿ.ಹುಣಸಗಿ, ಹಣಮಂತ ಮಾಳಗೊಂಡ, ಬಸವರಾಜ ಗೊರನಾಳ ಮೊದಲಾದವರು ಇದ್ದರು.