ಸಾರಾಂಶ
- ಎಸ್ಎಸ್ ಜನರಲ್ ಆಸ್ಪತ್ರೆಯಲ್ಲಿ 4 ಡಯಾಲಿಸಿಸ್ ಯಂತ್ರ ಉದ್ಘಾಟಿಸಿ ಶಾಸಕ ಶಾಮನೂರು ಘೋಷಣೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ನಗರದ ಕೆ.ಆರ್. ರಸ್ತೆಯಲ್ಲಿ ದಾವಣಗೆರೆ ಹಳೇ ಭಾಗದ ಜನರನ್ನು ಗಮನದಲ್ಲಿಟ್ಟುಕೊಂಡು ಬಾಪೂಜಿ ವಿದ್ಯಾ ಸಂಸ್ಥೆಯಿಂದ ಅತ್ಯಾಧುನಿಕ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲಾಗುವುದು. ಇದಕ್ಕಾಗಿ ಜಾಗವನ್ನೂ ಖರೀದಿಸಲಾಗಿದೆ ಎಂದು ಶಾಸಕ, ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.ನಗರದ ಕೆ.ಆರ್. ರಸ್ತೆಯ ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ 4 ಡಯಾಲಿಸಿಸ್ ಯಂತ್ರ ಉದ್ಘಾಟಿಸಿ ಮಾತನಾಡಿದ ಅವರು, ಈ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇರಿದಂತೆ ಅನೇಕ ಚಿಕಿತ್ಸೆಗಳನ್ನು ಜನರಿಗೆ ಉಚಿತವಾಗಿ ನೀಡುತ್ತಿದ್ದೇವೆ ಎಂದರು.
ಆಸ್ಪತ್ರೆ ಹಿಂಭಾಗದ ಜಾಗವನ್ನೂ ಬಾಪೂಜಿ ಸಂಸ್ಥೆ ಖರೀದಿಸಿದೆ. ಇಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸುವ ಉದ್ದೇಶವಿದೆ. ಬಹುತೇಕ ಬಡವರೇ ಈ ಭಾಗದಲ್ಲಿ ಹೆಚ್ಚಾಗಿದ್ದು, ಅಂತಹ ಜನರಿಗಾಗಿ 2019ರಲ್ಲೇ 4 ಡಯಾಲಿಸಿಸ್ ಯುನಿಟ್‌ನಿಂದ ಆರಂಭವಾಗಿದ್ದು, ಇದೀಗ 16 ಯೂನಿಟ್ ಅಳವಡಿಸಲಾಗಿದೆ. ಡಯಾಲಿಸಿಸ್‌ಗಾಗಿ ಯಾರೂ ಸಹ 1 ರುಪಾಯಿಯೂ ನೀಡಬೇಕಿಲ್ಲ. ಯಾರಿಂದಲೂ ಶಿಫಾರಸು ಪತ್ರವನ್ನೂ ತರಬೇಕಿಲ್ಲ. ವೈದ್ಯರು ಸಹ ಸಂಸ್ಥೆ ಕಾರ್ಯದರ್ಶಿ ಸೇರಿದಂತೆ ಯಾರದ್ದೇ ಸಹಿ ಮಾಡಿಸಿಕೊಂಡು ಬರುವಂತೆ ರೋಗಿಗಳಿಗೆ ಹೇಳಬಾರದು. ಆಸ್ಪತ್ರೆಗೆ ಬಂದ ರೋಗಿಗಳಿಗೆ ಸರಿಯಾಗಿ ಮಾತನಾಡಿಸಿ, ಸೂಕ್ತ ಚಿಕಿತ್ಸೆ ನೀಡಬೇಕು. ಡಯಾಲಿಸಿಸ್ ಮೂಲಕ ಸಂಸ್ಥೆ ಜನರ ಪ್ರಾಣ ಉಳಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.ನೂತನ ಸಂಸದೆ, ಎಸ್.ಎಸ್. ಕೇರ್ ಟ್ರಸ್ಟ್‌ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, 2019ರಲ್ಲಿ ಎಸ್.ಎಸ್. ಕೇರ್ ಟ್ರಸ್ಟ್ ಆರಂಭಿಸಲಾಗಿದೆ. ಈಗ 16 ಡಯಾಲಿಸಿಸ್ ಯಂತ್ರಗಳಿವೆ. ಈವರೆಗೂ 16 ಸಾವಿರ ಜನರಿಗೆ ಉಚಿತ ಡಯಾಲಿಸಿಸ್ ಮಾಡಲಾಗಿದೆ. ಪ್ರತಿ ತಿಂಗಳು 500 ಜನರಿಗೆ ಉಚಿತ ಡಯಾಲಿಸಿಸ್ ಮಾಡಲಾಗುತ್ತಿದೆ. ಕಕ್ಕರಗೊಳ್ಳ, ಅರಸಾಪುರ ಗ್ರಾಮಗಳನ್ನು ದತ್ತು ಪಡೆಯಲಾಗಿದೆ ಎಂದರು.
ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಕಿರುವಾಡಿ ಗಿರಿಜಮ್ಮ, ಸಂಪನ್ನ ಮುತಾಲಿಕ್, ಬಾಪೂಜಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಕುಮಾರ, ಜೆಜೆಎಂ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಶುಕ್ಲಾ ಶೆಟ್ಟಿ, ಆಡಳಿತ ವಿಭಾಗದ ಡಾ.ಸತ್ಯನಾರಾಯಣ, ಡಾ. ಸಿ.ನಿರಂಜನ, ಶಿವ ಎಂ. ಶಾಮನೂರು, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ ಇತರರು ಇದ್ದರು.- - -ಟಾಪ್ ಕೋಟ್ ಹೆಲ್ತ್ ಆನ್ ವ್ಹೀಲ್ ಕಲ್ಪನೆಯಡಿ ಆರೋಗ್ಯ ಸೇವೆಯನ್ನು ಹಳ್ಳಿಗಳಿಗೆ ಕೊಂಡೊಯ್ಯಲಾಗಿದೆ. ಬಡವರು ಇಲ್ಲಿ ಸಂಪೂರ್ಣವಾಗಿ ಉಚಿತ ಡಯಾಲಿಸಿಸ್ ಮಾಡಿಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಕಿಡ್ನಿ, ಹೃದಯ ಮತ್ತು ಬೊಜ್ಜು ಸಮಸ್ಯೆ ಇರುವವರಿಗೆ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗುವುದು
- ಡಾ. ಪ್ರಭಾ ಮಲ್ಲಿಕಾರ್ಜುನ, ಸಂಸದೆ, ಟ್ರಸ್ಟಿ- - -
-14ಕೆಡಿವಿಜಿ3, 4:ದಾವಣಗೆರೆ ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೂತನ ಡಯಾಲಿಸಿಸ್ ಯಂತ್ರಗಳನ್ನು ಉದ್ಘಾಟಿಸಿದರು.