ವಾರದೊಳಗೆ ಎಲ್ಲ ಸ್ವಚ್ಛಗೊಳಿಸಿ: ಜಿಪಂ ಸಿಇಒ ಸೋಮಶೇಖರ್

| Published : Jun 15 2024, 01:08 AM IST

ವಾರದೊಳಗೆ ಎಲ್ಲ ಸ್ವಚ್ಛಗೊಳಿಸಿ: ಜಿಪಂ ಸಿಇಒ ಸೋಮಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕಾರಣದಿಂದ ಕಲುಷಿತ ನೀರು ಕುಡಿಯುವ ನೀರಿನೊಂದಿಗೆ ಸೇರದಂತೆ ಕ್ರಮವಹಿಸಬೇಕು. ಕಲುಷಿತ ನೀರಿನ ಸೇವನೆಯಿಂದ ಸಾವುಂಟಾಗುವ ಪ್ರಕರಣ ಜರುಗಬಾರದು

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಂತಹ ಯಾವುದೇ ಅಹಿತಕರ ಅವಘಡ ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಹಿಸುವುದು ಅಗತ್ಯವಾಗಿದ್ದು, ವಾರದೊಳಗೆ ಗ್ರಾಮೀಣ ಪ್ರದೇಶದಲ್ಲಿ ಬರುವ ಎಲ್ಲ ಓವರ್ ಹೆಡ್ ಟ್ಯಾಂಕ್ ಸ್ವಚ್ಚಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಬಿಗಿ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಂಬಂಧದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ, ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯಡಿ ಬರುವ ಎಲ್ಲಾ ಪೈಪ್‍ಲೈನ್‍ಗಳನ್ನು ಪ್ರತಿದಿನವೂ ಕಣ್ಗಾವಲು ನಡೆಸಿ, ಹಾನಿಯಾಗಿರುವುದು ಕಂಡುಬಂದರೆ ಕೂಡಲೇ ದುರಸ್ಥಿ ಕಾರ್ಯ ಕೈಗೊಳ್ಳಬೇಕು. ಯಾವುದೇ ಕಾರಣದಿಂದ ಕಲುಷಿತ ನೀರು ಕುಡಿಯುವ ನೀರಿನೊಂದಿಗೆ ಸೇರದಂತೆ ಕ್ರಮವಹಿಸಬೇಕು. ಕಲುಷಿತ ನೀರಿನ ಸೇವನೆಯಿಂದ ಸಾವುಂಟಾಗುವ ಪ್ರಕರಣ ಜರುಗಬಾರದು ಎಂದರು.

ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ ಎಲ್ಲಾ ನೀರು ಶೇಖರಣಾ ಘಟಕಗಳನ್ನು ಕಾಲ-ಕಾಲಕ್ಕೆ ಸ್ವಚ್ಛಗೊಳಿಸಿ ಪ್ರತಿ ಹಂತದಲ್ಲಿಯೂ ಕ್ಲೋರಿನೇಷನ್ ಮಾಡಬೇಕು. ನೀರಿನ ಮೂಲಗಳಾದ ಕೊಳವೆಬಾವಿಗಳ ಸುತ್ತಮುತ್ತಲೂ ಯಾವುದೇ ಕಲುಷಿತ ನೀರು ಅಥವಾ ಚರಂಡಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೊಳಚೆ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಕೈಗೊಂಡು ಆ ನೀರಿನ ಮೂಲದ ಸುತ್ತಲೂ ಕಾಂಕ್ರಿಟ್‍ನಿಂದ ಕಟ್ಟೆ ಕಟ್ಟಬೇಕು ಎಂದು ತಿಳಿಸಿದರು.

ಜಿಲ್ಲಾ ಮತ್ತು ತಾಲೂಕು ಪ್ರಯೋಗಾಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕುಡಿಯುವ ನೀರಿನ ಮೂಲಗಳ ಗುಣಮಟ್ಟದ ಪರೀಕ್ಷೆಗಳನ್ನು ಮಳೆಗಾಲದ ಮುನ್ನ ಮತ್ತು ಮಳೆಗಾಲದ ನಂತರ ಕಡ್ಡಾಯವಾಗಿ ಕೈಗೊಳ್ಳಬೇಕು. ಕಲುಷಿತ ಎಂದು ಕಂಡುಬರುವ ನೀರಿನ ಮೂಲಗಳಿಗೆ ಪರ್ಯಾಯವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳ ಪ್ರಗತಿ ಪರಿಶೀಲನೆಯನ್ನು ಮಾಸಿಕವಾಗಿ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿ ಕುಡಿಯುವ ನೀರಿನ ಸರಬರಾಜು ವಿತರಣೆ ವ್ಯವಸ್ಥೆ ಸಂಪೂರ್ಣ ತಪಾಸಣೆ ಹಾಗೂ ಪರಿಶೀಲನೆ ಮಾಡುವುದು ಹಾಗೂ ನೀರು ಕಲುಷಿತಗೊಳ್ಳುವ ಮೂಲಗಳ ಬಿಂದು ಗುರುತಿಸಬೇಕು. ಗ್ರಾಮ ಪಂಚಾಯಿತಿಗಳು ಬ್ಲೀಚಿಂಗ್ ಪೌಡರ್ ಸಾಕಷ್ಟು ದಾಸ್ತಾನು ಇರಿಸಿಕೊಳ್ಳಬೇಕು ಮತ್ತು ಬಳಸುವಿಕೆ ವಿಧಾನಗಳಿಗನುಸಾರ ಉಪಯೋಗಿಸಬೇಕು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಗ್ರಾಮ ಪಂಚಾಯಿತಿಗಳಲ್ಲಿ ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿಗಳ ಪಂಪ್ ಆಪರೇಟರ್ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸುರಕ್ಷಿತ ಕುಡಿಯುವ ನೀರು ಬಳಕೆ ಕುರಿತಂತೆ ಈಗಾಗಲೇ ಜೂನ್ 11ರಿಂದ ಸ್ವಚ್ಛತಾ ಅಭಿಯಾನ ಪ್ರಾರಂಭವಾಗಿದ್ದು, ಒಂದು ವಾರಗಳ ಕಾಲ ನಡೆಯುವ ಸ್ವಚ್ಛತಾ ಅಭಿಯಾನ ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ ನೀಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಛಾಯಾಚಿತ್ರಗಳೊಂದಿಗೆ ವರದಿಯನ್ನು ಜೂ.21ರೊಳಗೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವಂತೆ ತಿಳಿಸಿದರು.

ಮಹಾತ್ಮಾ ಗಾಂಧಿ ನರೇಗಾ ಯೋಜನೆ ಪ್ರಗತಿ ಪರಿಶೀಲನೆಯನ್ನು ಇದೇ ಸಂದರ್ಭದಲ್ಲಿ ನಡೆಸಲಾಯಿತು. ಉದ್ಯೋಗದಲ್ಲಿ ಮಾನವ ದಿನಗಳ ಸೃಜನೆ, ಸಂಚಿತ ಮತ್ತು ವಾರ್ಷಿಕ ಗುರಿಗೆ ಶೇಕಡವಾರು ಸಾಧನೆ, ಎಚ್‍ಎಚ್‍ಜಿ ಶೆಡ್ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲಾಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಪಾಟೀಲ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್ ಸೇರಿದಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಇದ್ದರು.