ಸಾರಾಂಶ
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ತುಳುಕೂಟ ಉದ್ಘಾಟನೆಗೊಂಡಿತು. ಉಡುಪಿ ತುಳು ಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ ಭಾಷೆಯ ಉಳಿವಿನ ಬಗ್ಗೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರಾಚೀನ ಮತ್ತು ಆಧುನಿಕ ಹಾಗೂ ಆಧುನಿಕೋತ್ತರ ಸಂಗಮ ಕಾಲದಲ್ಲಿರುವ ನಾವು ಭವ್ಯ ಇತಿಹಾಸ, ಪರಂಪರೆ ಹಾಗೂ ವೈವಿಧ್ಯಮಯ ಹಿನ್ನೆಲೆ ಹೊಂದಿರುವ ತುಳುವ ನಾಡಿನಲ್ಲಿ ವಾಸಿಸುತ್ತಿದ್ದೇವೆ. ತುಳುನಾಡಿನ ನಂಬಿಕೆ, ನಡವಳಿಕೆಗಳು, ಆಚಾರ-ವಿಚಾರಗಳು, ಸಂದಿ-ಪಾಡ್ದನಗಳು, ತಾಳ ಮದ್ದಳೆ, ಯಕ್ಷಗಾನ, ಜಾನಪದ, ಕಲೆಗಳು, ಬಲೀಂದ್ರ ಪೂಜೆ, ಭೂತಾರಾಧನೆ, ಕೃಷಿ - ಸಂಸ್ಕೃತಿ ನಮ್ಮ ಸಾರ್ಥಕ ಬದುಕಿಗೆ ಪ್ರೇರಕವಾಗಿದೆ ಎಂದು ಬಡಗುಬೆಟ್ಟು ಕೋ-ಆಪರೇಟಿವ್ ಸಹಕಾರಿ ಸಂಘ ಹಾಗೂ ಉಡುಪಿ ತುಳು ಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.ಅವರು ಇತ್ತೀಚೆಗೆ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ತುಳುಕೂಟ ಉದ್ಘಾಟಿಸಿ ಮಾತನಾಡಿದರು.
ತುಳುಭಾಷೆ ನಮ್ಮ ಮನೆಯ ಮಾತಾಗಬೇಕು, ನಿತ್ಯವೂ ಆಡು ಭಾಷೆಯಾಗಬೇಕು ಎಂದ ಅವರು, ಈ ಕಾಲೇಜಿನಲ್ಲಿ ತುಳುಕೂಟದ ಉದ್ಘಾಟನೆ ಮಾಡಿದ ಪ್ರೊ. ಸುರೇಶ್ ರೈಗಳ ಕ್ರಮವನ್ನು ಶ್ಪಾಘಿಸಿದರು.ಹೆಸರಾಂತ ನಾಟಕ ಕರ್ತೃ, ತುಳುಕೂಟದ ಸದಸ್ಯ ಗಂಗಾಧರ ಕಿದಿಯೂರು ದಿಕ್ಸೂಚಿ ಭಾಷಣ ಮಾಡಿ, ತುಳುಭಾಷೆ ಮತ್ತು ಸಂಸ್ಕೃತಿ ಅನನ್ಯವಾದುದು. ಅದರ ಒಳ ತತ್ತ್ವವನ್ನು ಕುರಿತು ಅಳವಡಿಸಿಕೊಂಡು ಬದುಕಿದಾಗ ಮಾತ್ರ ಯಾವುದೇ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ಜೀವಂತವಾಗಿ ಉಳಿಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ., ಕಾಲದೊಂದಿಗೆ ಕೊಚ್ಚಿ ಹೋಗುವ ನಮ್ಮತನವನ್ನು ಅಳಿದು ಹೋಗದಂತೆ ಭದ್ರವಾಗಿ ರಕ್ಷಿಸುವ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಕರ್ತವ್ಯವನ್ನು ನಾವು ಎಂದೂ ಮರೆಯಬಾರದು ಎಂದರು.ವೇದಿಕೆಯಲ್ಲಿ ತುಳುಕೂಟದ ಆಟಕೂಟದ ಸಂಚಾಲಕಿ ವಿದ್ಯಾಸರಸ್ವತಿ, ಪ್ರಾಧ್ಯಾಪಕರಾದ ನಿತ್ಯಾನಂದ ಗಾಂವ್ಕರ್, ಡಾ. ಪ್ರಸಾದ್ ರಾವ್ ಎಂ., ಶ್ರೀ ಕೃಷ್ಣ ಸಾಸ್ತಾನ ಉಪಸ್ಥಿತರಿದ್ದರು.
ಕಾಲೇಜಿನ ತುಳುಕೂಟದ ಸಂಚಾಲಕಿ ರತ್ನಮಾಲ ಸ್ವಾಗತಿಸಿದರು. ಶರಣ್ಯಾ ನಿರ್ವಹಿಸಿದರು. ಶಿಲ್ಪಾ ವಂದಿಸಿದರು.ಸುಮಾರು ೩೦೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.