ಕೇಂದ್ರ ಸಚಿವ ಜೋಶಿಗೆ ಅದ್ಧೂರಿ ಸ್ವಾಗತ

| Published : Jun 15 2024, 01:08 AM IST

ಸಾರಾಂಶ

ವಿಮಾನ ನಿಲ್ದಾಣದ ಮುಖ್ಯದ್ವಾರದ ಬಳಿ ಸೇರಿದ್ದ ನೂರಾರು ಜನ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸೇಬು ಹಣ್ಣಿನ ಬೃಹತ್‌ ಹಾರ ಹಾಕಿ ಅಭಿಮಾನ ಮೆರೆದರು.

ಹುಬ್ಬಳ್ಳಿ:

ಕೇಂದ್ರ ಸರ್ಕಾರದಲ್ಲಿ ಸತತ ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿ ಪ್ರಥಮ ಬಾರಿಗೆ ನ​ಗ​ರ​ಕ್ಕೆ ಆಗಮಿಸಿದ ಪ್ರಹ್ಲಾದ ಜೋಶಿ ಅವರನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಶುಕ್ರವಾರ ಅದ್ಧೂರಿಯಾಗಿ ಸ್ವಾಗತಿಸಿದರು.

ಇಲ್ಲಿನ ವಿಮಾನ ನಿಲ್ದಾಣದಿಂದ ಕೇಂದ್ರ ಸಚಿವ ಜೋಶಿ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಜೈ ಶ್ರೀರಾಮ, ಜೈ ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು. ಅಲ್ಲದೇ, ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳು ಅವರಿಗೆ ಶಾಲು ಹೊದಿಸಿ, ಮಾಲೆ ಹಾಕಿ ಸನ್ಮಾನಿಸಿದರು. ಕೆಲವರು ಹೂಗುಚ್ಛ ನೀಡಿ ಸ್ವಾಗತಿಸಿದರು. ​​ಈ ವೇಳೆ ಕೇಂದ್ರ ಸಚಿವ ಜೋಶಿ ಜನರತ್ತ ಕೈ ಬಿಸಿ ನಮಿಸಿದರು.

ವಿಮಾನ ನಿಲ್ದಾಣದ ಮುಖ್ಯದ್ವಾರದ ಬಳಿ ಸೇರಿದ್ದ ನೂರಾರು ಜನ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸೇಬು ಹಣ್ಣಿನ ಬೃಹತ್‌ ಹಾರ ಹಾಕಿ ಅಭಿಮಾನ ಮೆರೆದರು. ಅಲ್ಲಿಂದ ತೆರೆದ ವಾಹನದಲ್ಲಿ ಹೊರಟ ಮೆರವಣಿ ವೇಳೆ ಬೈಕ್‌ ರ್‍ಯಾಲಿಯಲ್ಲಿ ನೂರಾರು ಯುವಕರು ಪ್ರಧಾನಿ ನರೆಂದ್ರ ಮೋದಿ ಹಾಗೂ ಕೇಂದ್ರ ಸಚಿವರ ಪರ ಘೋಷಣೆ ಹಾಕಿದರು. ಈ ವೇಳೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ಮೆರವಣಿಗೆ ಗೋಕುಲ್‌ ರಸ್ತೆ ಮಾರ್ಗವಾಗಿ ಅಕ್ಷಯ ಪಾರ್ಕ್, ವಾಣಿ ವಿಲಾಸ ಸರ್ಕಲ್‌, ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸರ್ವೋದಯ ಸರ್ಕಲ್‌ಗೆ ಬರುತ್ತಿದ್ದಂತೆ​ಯೇ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪುತ್ಥಳಿಗೆ ಮಾಲಾರ್ಪಣೆ:

ಮಾರ್ಗ ಮಧ್ಯದಲ್ಲಿಯೇ ಕೇಂದ್ರ ಸಚಿವ ಜೋಶಿ ಅವರು ಸಿಂಧೂರ ಲಕ್ಷ್ಮಣ, ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್‌. ಅಂಬೇಡ್ಕರ್‌ ಹಾಗೂ ಸರ್ವೋದಯ ಸರ್ಕಲ್‌ನಲ್ಲಿರುವ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಮನೆಯತ್ತ ತೆರಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಸೇರಿದಂತೆ ಪಕ್ಷದ ಮುಖಂಡರು ಮೆರವಣಿಗೆಗೆ ಸಾಥ್‌ ನೀಡಿದರು.