ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಲಕ್ಷ್ಮೀ ನಗರದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಅಂಬಿಗರ ಚೌಡಯ್ಯ ವೃತ್ತದ ಹತ್ತಿರದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ನಿವೇಶನವನ್ನು ಸೋಮವಾರ ರಾಜ್ಯಸಭಾ ಸದಸ್ಯೆ, ಇನ್ಫೋಸಿಸ್ ಸಹಸಂಸ್ಥಾಪಕಿ ಸುಧಾಮೂರ್ತಿ ವೀಕ್ಷಿಸಿ ಅಧಿಕಾರಿಗಳಿಂದ ನಿವೇಶನದ ಕುರಿತು ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು ಗ್ರಂಥಾಲಯಕ್ಕಾಗಿ ಮೀಸಲಿಟ್ಟಿರುವ ಜಾಗದಲ್ಲಿ ನಮ್ಮ ಸಂಸ್ಥೆಯಿಂದ ಎರಡು ಅಂತಸ್ತಿನ ಸುಸಜ್ಜಿತ ಗ್ರಂಥಾಲಯವನ್ನು ನಿರ್ಮಾಣ ಮಾಡಿಕೊಡಲಾಗುವುದು. ಕೆಳ ಮಹಡಿಯಲ್ಲಿ ಹಿರಿಯ ನಾಗರಿಕರು, ಚಿಕ್ಕಮಕ್ಕಳು, ಇತರರು ಸೇರಿದಂತೆ ಎಲ್ಲ ಓದುಗರಿಗೆ ಓದಲು ಅನುಕೂಲವಾಗುವಂತೆ ಹಾಗೂ ಒಂದನೇ ಮಹಡಿಯಲ್ಲಿ ವಿದ್ಯಾರ್ಥಿಗಳು, ಸ್ಪರ್ಧಾರ್ಥಿಗಳು ಓದಲು ಅನುಕೂಲವಾಗುವಂತೆ ಗ್ರಂಥಾಲಯ ನಿರ್ಮಿಸಲಾಗುವುದು. ಗ್ರಂಥಾಲಯ ಕಟ್ಟಡದಲ್ಲಿ ಅಗತ್ಯ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇರುವಂತೆ ಗಮನ ಹರಿಸಲಾಗುವುದು. ಮಾದರಿ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಆಡಳಿತದವರು, ಜನರು ಸಹಕಾರ ನೀಡಬೇಕು. ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಮಾದರಿ ಗ್ರಂಥಾಲಯ ಕಟ್ಟಡದ ವಿನ್ಯಾಸ ಮಾಡುವಂತೆ ಸೂಚಿಸಿದ ಅವರು ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಮಣ್ಣು ತೆಗೆದುಕೊಂಡು ಪರೀಕ್ಷೆ ಮಾಡುವಂತೆ ಸಲಹೆ ನೀಡಿದರು.ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಗ್ರಂಥಾಲಯಕ್ಕೆ ನಿಗದಿ ಪಡಿಸಿದ ನಿವೇಶನದ ಕುರಿತ ಸಮಗ್ರ ಮಾಹಿತಿ ನೀಡಿದರು.ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಗ್ರಂಥಪಾಲಕ ಎಂ.ಜಿ.ಉಮರ್ಜಿ ಅವರು ಸಧ್ಯ ಪುರಸಭೆಯ ಹಳೆಯ ಕಟ್ಟಡದಲ್ಲಿ ಬಾಡಿಗೆಯ ಆಧಾರದ ಮೇಲೆ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಗ್ರಂಥಾಲಯದಲ್ಲಿ ೩೭ ಸಾವಿರ ಗ್ರಂಥಗಳಿವೆ. ಗ್ರಂಥಗಳನ್ನು ಇಡಲು ಸ್ಥಳವಕಾಶವಿಲ್ಲದ ಕಾರಣದಿಂದಾಗಿ ಗ್ರಂಥಗಳನ್ನು ಕಟ್ಟಿ ಇಡಲಾಗಿದೆ. ಗ್ರಂಥಾಲಯದ ನಿವೇಶನದ ಅಳತೆ, ಜಾಗೆಯು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಸುಧಾಮೂರ್ತಿ ಅವರಿಗೆ ತೋರಿಸಿದರು. ಸ್ಥಳದಲ್ಲಿ ಹಾಜರಿದ್ದ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ, ಸಾಹಿತಿ ಪ್ರಭಾಕರ ಖೇಡದ ಅವರು ಸುಧಾಮೂರ್ತಿ ಅವರಿಗೆ ತಮ್ಮ ನಲ್ವತ್ತರ ಬಾಲಕಿ ಕಥಾಸಂಕಲನವನ್ನು ಸುಧಾಮೂರ್ತಿ ಅವರಿಗೆ ನೀಡಿ ಈಗಿರುವ ಗ್ರಂಥಾಲಯವು ಇಕ್ಕಟಾದ ಜಾಗೆಯಲ್ಲಿದೆ. ಪುಸ್ತಕಗಳನ್ನು ಇಡಲು ಸಹ ಜಾಗ ಇಲ್ಲದಂತಾಗಿದೆ. ಇಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣವಾದರೇ ವಿದ್ಯಾರ್ಥಿಗಳಿಗೆ, ಸ್ಪರ್ಧಾರ್ಥಿಗಳಿಗೆ, ಓದುಗರಿಗೆ ತುಂಬಾ ಅನುಕೂಲವಾಗಲಿದೆ. ಈ ದಿಶೆಯಲ್ಲಿ ತಮ್ಮ ಸಂಸ್ಥೆಯಿಂದ ಗ್ರಂಥಾಲಯ ನಿರ್ಮಾಣವಾಗುತ್ತಿರುವುದು ನಮಗೆ ಹರ್ಷ ತಂದಿದೆ ಎಂದರು. ಈ ಸಂದರ್ಭದಲ್ಲಿ ವಿಡಿಸಿಸಿ ಬ್ಯಾಂಕಿನ ನಿರ್ದೇಶಕಿ ಸಂಯುಕ್ತಾ ಪಾಟೀಲ ಅವರು ಗ್ರಂಥಾಲಯ ನಿರ್ಮಾಣಕ್ಕೆ ಮತಕ್ಷೇತ್ರದ ಶಾಸಕ ನಮ್ಮ ತಂದೆ ಸಚಿವ ಶಿವಾನಂದ ಪಾಟೀಲ ಅವರಿಂದ ಅಗತ್ಯ ಸಹಕಾರ ನೀಡುವರು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ, ಪಿಐ ವಿಜಯ ಮುರಗುಂಡಿ, ಮಹಾನಗರ ಪಾಲಿಕೆ ಉಪಆಯುಕ್ತ ಮಹಾವೀರ ಬೊರನ್ನವರ, ವಿವೇಕ ಬ್ರಿಗೇಡ್‌ದ ವಿನೂತ ಕಲ್ಲೂರ, ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ರವಿಗೌಡ ಚಿಕ್ಕೊಂಡ, ಮಣಿಕಂಠ ಚಿಕ್ಕೊಂಡ, ಪ್ರಶಾಂತ ಮುಂಜಾನಿ, ಶ್ರೀಕಾಂತ ಪಟ್ಟಣಶೆಟ್ಟಿ, ಸಂಜೀವ ಬಿರಾದಾರ, ಕುಶಾಲ ಕೊಟ್ರಶೆಟ್ಟಿ ಇತರರು ಇದ್ದರು. ಇದೇ ಸಂದರ್ಭದಲ್ಲಿ ಪುರಸಭೆ, ರಾಷ್ಟ್ರೀಯ ಬಸವಸೈನ್ಯ, ವಿವೇಕ ಬ್ರಿಗೇಡದಿಂದ ಸುಧಾಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ವಚನ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಈ ಕೇಂದ್ರದ ಮೂಲಕ ವಚನ ಸಾಹಿತ್ಯ ಅಧ್ಯಯನವಾಗುವ ಜೊತೆಗೆ ಪ್ರಚಾರವಾಗಬೇಕು. ಜಗತ್ತಿನ ಮೂಲೆಮೂಲೆಗೆ ಬಸವೇಶ್ವರರ ತತ್ವ ಪ್ರಸಾರವಾಗಬೇಕು. ವಚನ ಕಂಠಪಾಠ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಕಾರ್ಯ ನಿರಂತರವಾಗಿ ನಡೆಯುವಂತಾದರೆ ವಚನ ಸಾಹಿತ್ಯ ಪ್ರಸಾರಕ್ಕೆ ಪೂರಕವಾಗುತ್ತದೆ.-ಸುಧಾಮೂರ್ತಿ,
ರಾಜ್ಯಸಭಾ ಸದಸ್ಯೆ.