ದೆಹಲಿ ಸ್ವಾತಂತ್ರ್ಯೋತ್ಸವಕ್ಕೆ ನಾಲ್ಯಪದವು ಶಾಲೆಗೆ ಆಹ್ವಾನ

| Published : Aug 14 2024, 12:46 AM IST

ಸಾರಾಂಶ

ಶೈಕ್ಷಣಿಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಾಲೆ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು ದೆಹಲಿಯಲ್ಲಿ ನಡೆಯಲಿರುವ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಪಿಎಂಶ್ರೀ ಶಾಲೆಗಳ ಪೈಕಿ ಮಂಗಳೂರಿನ ಶಕ್ತಿನಗರ ನಾಲ್ಯಪದವಿನ ಪಿಎಂಶ್ರೀ ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆಹ್ವಾನ ಬಂದಿದೆ. ಶೈಕ್ಷಣಿಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಾಲೆ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಈ ಶಾಲೆಯ ಸಹ ಶಿಕ್ಷಕಿ ಶ್ವೇತಾ ಕೆ. ಹಾಗೂ 8ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರಿಬ್ಬರು ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಇದೇ ಶಾಲೆ ಏಕೆ?:

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಪಿಎಂಶ್ರೀ ಯೋಜನೆಯಡಿ ರಾಜ್ಯದೆಲ್ಲೆಡೆ ವಿವಿಧ ಶಾಲೆಗಳನ್ನು ಆಯ್ಕೆ ಮಾಡಲಾಗಿತ್ತು. ಪ್ರಥಮ ಹಂತದಲ್ಲಿ ಆಯ್ಕೆಯಾದ ದ.ಕ. ಜಿಲ್ಲೆಯ 8 ಶಾಲೆಗಳ ಪೈಕಿ ನಾಲ್ಯಪದವು ಶಾಲೆಯೂ ಒಂದು. ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ, ಮಕ್ಕಳಿಗೆ ಯೋಜನೆಯ ಸಂಪೂರ್ಣ ಸೌಲಭ್ಯ ಸಿಗುವಂತೆ ಮಾಡಿ ಈ ಶಾಲೆ ಗಮನ ಸೆಳೆದಿತ್ತು. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರದಿಂದ ಇದೀಗ ದೆಹಲಿಗೆ ಆಹ್ವಾನ ಬಂದಿದೆ.

ದೆಹಲಿಗೆ ತೆರಳಲು ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ಸೇರಿದಂತೆ ಶಾಲಾಡಳಿತ ಮಂಡಳಿಯು ಒಮ್ಮತದಿಂದ ಸಹಶಿಕ್ಷಕಿ ಶ್ವೇತಾ ಹಾಗೂ ವಿದ್ಯಾರ್ಥಿನಿ ಪೂರ್ವಿ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ.

ಪೂರ್ವಿ ಶೆಟ್ಟಿ ಶಕ್ತಿನಗರ ಕಾರ್ಮಿಕ ಕಾಲೊನಿ ನಿವಾಸಿ ಉಮೇಶ್‌ ಶೆಟ್ಟಿ ಹಾಗೂ ಗೀತಾ ಶೆಟ್ಟಿ ದಂಪತಿ ಪುತ್ರಿ. ಕಲಿಕೆಯಲ್ಲೂ ಮುಂದಿರುವ ಪೂರ್ವಿ, ಸಹಪಠ್ಯ ಚಟುವಟಿಕೆಗಳಲ್ಲೂ ಪ್ರತಿಭಾನ್ವಿತೆ. ಸಹಶಿಕ್ಷಕಿ ಶ್ವೇತಾ ಕೆ. ಅವರು ಶಾಲೆಯ ಅಭಿವೃದ್ಧಿಗಾಗಿ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿರುವುದಲ್ಲದೆ, ಉತ್ತಮ ಶಿಕ್ಷಕಿ ಎನ್ನುವ ಹೆಸರನ್ನೂ ಪಡೆದಿದ್ದಾರೆ.

ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ನಾವು ಅರ್ಜಿಯನ್ನೇ ಹಾಕದೆ ಆಹ್ವಾನದ ಸುವರ್ಣಾವಕಾಶ ಹುಡುಕಿಕೊಂಡು ಬಂದಿದೆ. ನಮ್ಮ ಶಾಲೆಯನ್ನು ಅಭಿವೃದ್ಧಿಗೊಳಿಸಿ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಲು ಸಾಂಘಿಕ ಪ್ರಯತ್ನ ನಡೆಸುತ್ತಿದ್ದೇವೆ. ಈಗ ಈ ಅವಕಾಶ ದೊರೆತಿರುವುದು ನಮ್ಮ ಪ್ರಯತ್ನಕ್ಕೆ ಮೊದಲ ಮೆಟ್ಟಿಲಾಗಿದೆ. ಇನ್ನೂ ಉತ್ತಮ ರೀತಿಯಲ್ಲಿ ಶಾಲೆಯ ಅಭಿವೃದ್ಧಿಗಾಗಿ ನಮ್ಮ ಪ್ರಯತ್ನ ಮುಂದುವರಿಯಲಿದೆ.

- ದಾಕ್ಷಾಯಿಣಿ, ನಾಲ್ಯಪದವು ಶಾಲೆಯ ಮುಖ್ಯ ಶಿಕ್ಷಕಿ

ಪೆರುವಾಯಿ ಗ್ರಾಪಂ ಅಧ್ಯಕ್ಷೆ ನೆಫೀಸಾ ಆಯ್ಕೆ

ಬಂಟ್ವಾಳ: ದೆಹಲಿಯ ಕೆಂಪುಕೋಟೆಯಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲು ಕರ್ನಾಟಕದ 6 ಪಂಚಾಯಿತಿಗಳ ಮಹಿಳಾ ಅಧ್ಯಕ್ಷರನ್ನು ಆಹ್ವಾನಿಸಲಾಗಿದೆ. ಈ ಪೈಕಿ ದ.ಕ. ಜಿಲ್ಲೆಯ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೆಫೀಸಾ ಅವರನ್ನು ಆಯ್ಕೆ ಮಾಡಲಾಗಿದೆ.ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಇವರು ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದರು. ಉಪಾಧ್ಯಕ್ಷರಾಗಿದ್ದಾಗ ಅವರು ಗ್ರಾಪಂನ ತ್ಯಾಜ್ಯ ಸಾಗಾಟ ವಾಹನದ ಚಾಲಕಿಯಾಗಿ ಗಮನ ಸೆಳೆದಿದ್ದರು. ಅವರ ಈ ಸೇವೆಯನ್ನು ಗುರುತಿಸಿ ವರ್ಲ್ಡ್ ಯೂತ್‌ ಸ್ಕಿಲ್‌ ಡೇ ಅಂಗವಾಗಿ ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಗೌರವಿಸಿದ್ದರು. ಪಂಚಾಯಿತಿ ವ್ಯಾಪ್ತಿಯ ರಸ್ತೆ, ಎಡಬ್ಲ್ಯೂಸಿ, ನರೇಗ ಇತ್ಯಾದಿ ಅಭಿವೃದ್ಧಿ ಯೋಜನೆಗಳಲ್ಲೂ ಅವರು ಶ್ರಮಿಸಿದ್ದಾರೆ. ಅವರು ಅನೇಕ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ಕೊಡುಗೆ ನೀಡಿದ್ದರು. ರಾಜ್ಯ ಇನ್‌ಸ್ಟಿಟ್ಯೂಟ್‌ ಆಫ್‌ ರೂರಲ್‌ ಡೆವೆಲಪ್‌ಮೆಂಟ್‌ ಇನ್‌ ಸಾಲಿಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ನ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.-----

ವಿದ್ಯಾರ್ಥಿ, ಶಿಕ್ಷಕರ ಆಯ್ಕೆಗೆ ಶಾಸಕ ಅಭಿನಂದನೆ

ದೆಹಲಿಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯಾರ್ಥಿನಿ ಹಾಗೂ ಶಿಕ್ಷಕಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಅಭಿನಂದನೆ ಸಲ್ಲಿಸಿದರು.ಶಕ್ತಿನಗರ ನಾಲ್ಯಪದವು ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಮಾದರಿ ಸ.ಹಿ.ಪ್ರಾ. ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಯು. ಶೆಟ್ಟಿ ಹಾಗೂ ಶಿಕ್ಷಕಿ ಶ್ವೇತಾ.ಕೆ ಆಯ್ಕೆಯಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಸರ್ಕಾರಿ ಶಾಲೆಗಳು ಹೆಚ್ಚು ಹೆಚ್ಚು ಅಭಿವೃದ್ಧಿಯಾಗಬೇಕು. ಆ ಮಕ್ಕಳು ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂಬ ನಮ್ಮ ಆಶಯಕ್ಕೆ ತಕ್ಕಂತೆ ಈ ಸರ್ಕಾರಿ ಶಾಲೆಯನ್ನು ಉನ್ನತೀಕರಣಗೊಳಿಸುವ ಜೊತೆಗೆ 5 ವರ್ಷಗಳ ಅವಧಿಗೆ ಹಲವಾರು ಅಭಿವೃದ್ಧಿ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡಿದೆ ಎಂದು ಶಾಸಕರು ಹೇಳಿದರು.ಈ ಹಿಂದೆ ಇಲ್ಲಿ ನೂತನ ಪದವಿಪೂರ್ವ ಕಾಲೇಜಿನ ಅಗತ್ಯತೆ ಬಗ್ಗೆ ಸಾರ್ವಜನಿಕರ ಆಗ್ರಹಕ್ಕೆ ಸೂಕ್ತವಾಗಿ ಸ್ಪಂದಿಸಿದ ಶಾಸಕ ವೇದವ್ಯಾಸ ಕಾಮತ್ ಅವರು ಸರ್ಕಾರದಿಂದ ಕಾಲೇಜನ್ನು ಮಂಜೂರುಗೊಳಿಸಿದ್ದರು.