ಕನ್ನಡಪ್ರಭ ವಾರ್ತೆ ಮಳವಳ್ಳಿ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಆಶಯಗಳು ಸಮರ್ಪಕ ಜಾರಿಯಿಂದ ಸಮ ಸಮಾಜ ನಿರ್ಮಾಣದ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ಎಂ.ಆನಂದ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಪುರಸಭೆ, ತಾಲೂಕು ಕಾನೂನುಗಳ ಸೇವಾ ಪ್ರಾಧಿಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ಪ್ರತಿಬಂಧ) ಹಾಗೂ ನಾಗರಿಕ ಹಕ್ಕು ರಕ್ಷಣಾ ಕಾಯ್ದೆ ಕುರಿತ ವಿಚಾರಗೋಷ್ಠಿ ಮತ್ತು ಕಾರ್ಯಾಗಾರದಲ್ಲಿ ಮಾತನಾಡಿದರು.

ಒಬ್ಬರ ಬದುಕನ್ನು ಇನ್ನೊಬ್ಬರು ಕಿತ್ತುಕೊಳ್ಳಬಾರದು ಎನ್ನುವ ಉದ್ದೇಶಕ್ಕೆ ಕಾನೂನಿನಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ಒಂದೇ ನಾಣ್ಯದ ಎರಡು ಮುಖಗಳಾಗಿ ಇಡಲಾಗಿದೆ. ಎಲ್ಲವೂ ನನಗೆ ಬೇಕು ಎಂಬ ಧೋರಣೆ ಬಿಡಬೇಕು. ಈ ವ್ಯವಸ್ಥೆ ನಿಂತಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಒಗ್ಗಟ್ಟಿನಿಂದ ಸಂವಿಧಾನದ ಆಶಯಗಳನ್ನು ಈಡೇರಿಸಲು ಸಂಕಲ್ಪ ಮಾಡಬೇಕು ಎಂದರು.

ಆಯಾ ವೃತ್ತಿಯಾಧಾರಿತವಾಗಿ ಧರ್ಮ ಜಾತಿ ವ್ಯವಸ್ಥೆಯನ್ನು ಸೃಷ್ಟಿ ಮಾಡಿಕೊಂಡಿರುವವರು ನಾವೇ. ಇಂಥ ಜಾತಿಯಲ್ಲಿಯೇ ಹುಟ್ಟಬೇಕು ಎನ್ನುವುದನ್ನು ಯಾರೂ ಕೇಳಿಕೊಂಡು ಬಂದಿಲ್ಲ. ಮೊದಲು ನಾವೆಲ್ಲರೂ ಮನುಷ್ಯ ಜಾತಿಯವರು. ದೌರ್ಜನ್ಯ ಎನ್ನುವುದು ಹಿಂದೆ, ಮಾನಸಿಕ ಕಿರುಕುಳ, ಬಹಿಸ್ಕಾರದಂಥ ಅನೇಕ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಈ ರೀತಿಯ ಗೋಷ್ಠಿಗಳು ಒಂದು ದಿನಕ್ಕೆ ಸೀಮತವಾಗಿರಬಾರದು. ಬದಲಾಗಿ ಎಲ್ಲರ ಮನದಲ್ಲಿರಬೇಕು ಎಂದು ಕರೆ ನೀಡಿದರು.


ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್ ಮಾತನಾಡಿ, ಇನ್ನೂ ಅನೇಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರ ಜೊತೆಗೂಡಿ ಕೆಲಸ ಮಾಡಬೇಕಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ನೀಡುವ ಮೂಲಕ ಸಮಾನತೆಗೆ ಅವಕಾಶ ಕಲ್ಪಿಸಿದ್ದಾರೆ. ತುಳಿತಕ್ಕೆ ಒಳಗಾದ ಎಲ್ಲ ಸಮುದಾಯದವರಿಗೆ ನ್ಯಾಯ ಕೊಡಿಸಲು ಸಂಘಟಿತ ಹೋರಾಟಕ್ಕೆ ಮುಂದಾಗಬೇಕಿದ ಎಂದು ಅಭಿಪ್ರಾಯಪಟ್ಟರು.

ಆಧುನಿಕ ಕಾಲಘಟ್ಟದಲ್ಲಿ ಅಸ್ಪಶ್ಯತೆಯ ಸ್ವರೂಪಗಳು ಎಂಬ ವಿಷಯದ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದ ಎಚ್.ಕೆ.ಕಲಾವತಿ ಹಾಗೂ ದೌರ್ಜನ್ಯ ಪ್ರತಿಬಂಧ ಕಾಯ್ದೆ ಬಗ್ಗೆ ಮತ್ತು ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಕುರಿತು ಮೈಸೂರಿನ ವಕೀಲ ಎನ್.ಪುನೀತ್ ವಿಚಾರಗೋಷ್ಠಿ ನಡೆಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಇ.ನಂಜಮಣಿ, ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಂಜಿನಿಯರ್ ರಂಗಸ್ವಾಮಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಸಿ.ಮಾಧು, ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್ ಪಾಲ್ಗೊಂಡಿದ್ದರು.