ಕೆಜಿಎಫ್‌ನಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ನಿರ್ಮಾಣ

| Published : Mar 16 2025, 01:49 AM IST

ಸಾರಾಂಶ

ನಗರದ ಹೊರವಲಯದಲ್ಲಿ ನಿರ್ಮಾಣವಾಗಲಿರುವ ಇಂಟಿಗ್ರೆಟೆಡ್ ಟೌನ್‌ಶಿಪ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು. ಇಂಟಿಗ್ರೆಟೆಡ್ ಟೌನ್‌ಶಿಪ್ ಅನ್ನು ಪಿಪಿಪಿ (ಖಾಸಗಿ- ಸರ್ಕಾರಿ ಸಹಭಾಗಿತ್ವ )ಮಾದರಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇದಕ್ಕಾಗಿ ಇಲ್ಲಿನ ಗಿಡಗಂಟಿಗಳನ್ನೆಲ್ಲ ತೆರವುಗೊಳಿಸಿ ರಸ್ತೆಯನ್ನು ನಿರ್ಮಾಣ ಮಾಡುವಂತೆ ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ಮತ್ತು ಬಂಗಾರಪೇಟೆ ಪಟ್ಟಣಗಳ ನಡುವೆ ಸುಮಾರು ೨೯೪ ಎಕರೆ ಪ್ರದೇಶದಲ್ಲಿ ಸಾವಿರಾರು ಕೋಟಿ ರು.ಗಳ ವೆಚ್ಚದಲ್ಲಿ ಇಂಟಿಗ್ರೆಟೆಡ್ ಟೌನ್‌ಶಿಪ್‌ನ್ನು ನಿರ್ಮಾಣ ಮಾಡಲಾಗುವುದು ಎಂದು ಈಗಾಗಲೇ ವಿಧಾನಮಂಡಲದ ಬಜೆಜ್ ಅಧಿವೇಶನದಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರಿಗೆ ಪರ್ಯಾಯವಾಗಿ ಮತ್ತೊಂದು ನಗರವನ್ನು ಇಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಜಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು.

ನಗರದ ಹೊರವಲಯದಲ್ಲಿ ನಿರ್ಮಾಣವಾಗಲಿರುವ ಇಂಟಿಗ್ರೆಟೆಡ್ ಟೌನ್‌ಶಿಪ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು. ಇಂಟಿಗ್ರೆಟೆಡ್ ಟೌನ್‌ಶಿಪ್ ಅನ್ನು ಪಿಪಿಪಿ (ಖಾಸಗಿ- ಸರ್ಕಾರಿ ಸಹಭಾಗಿತ್ವ )ಮಾದರಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇದಕ್ಕಾಗಿ ಇಲ್ಲಿನ ಗಿಡಗಂಟಿಗಳನ್ನೆಲ್ಲ ತೆರವುಗೊಳಿಸಿ ರಸ್ತೆಯನ್ನು ನಿರ್ಮಾಣ ಮಾಡುವಂತೆ ಸೂಚಿಸಲಾಗಿದೆ ಎಂದರು. ಜಿಲ್ಲೆಯ ಅಭಿವೃದ್ದಿಗೆ ಪಿಪಿಪಿ ಮಾದರಿ ಕೋಲಾರ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿರುವ ಮೆಡಿಕಲ್ ಕಾಲೇಜು, ಎಪಿಎಂಸಿ ಮಾರುಕಟ್ಟೆ ಮತ್ತು ಈಗ ಇಂಟಿಗ್ರೇಟೆಡ್ ಟೌನ್‌ಶಿಪ್ ಎಲ್ಲ ಯೋಜನೆಗಳನ್ನು ಪಿಪಿಪಿ ಮಾದರಿಯಲ್ಲಿ ಮಾಡುತ್ತಿರುವುದರ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ಎಲ್ಲ ಯೋಜನೆಗಳಿಗೆ ಸರ್ಕಾರವೇ ಬಂಡವಾಳವನ್ನು ಹೂಡಲು ಸಾಧ್ಯವಿಲ್ಲ. ಏರ್‌ಪೋರ್ಟ್, ಎಕ್ಸ್‌ಪ್ರೆಸ್‌ ಹೈವೇ ಮೊದಲಾದ ಬೃಹತ್ ಯೋಜನೆಗಳೆಲ್ಲವೂ ಪಿಪಿಪಿ ಮಾದರಿಯಲ್ಲೇ ಮಾಡಿದ್ದು, ಈ ಮಾದರಿಯ ಬಗ್ಗೆ ಯಾರೂ ಉದಾಸೀನತೆ ತೋರುವುದು ಬೇಡ ಎಂದರು.ನಗರಾಭಿವೃದ್ಧಿ ಇಲಾಖೆಯಲ್ಲಿ ಇಂಟಿಗ್ರೆಟೆಡ್ ಟೌನ್‌ಶಿಪ್ ಇರಲಿಲ್ಲ. ಇದು ಪ್ರಥಮ ಬಾರಿಗೆ ಪಿಪಿಪಿ ಮಾದರಿಯನ್ನು ಜಾರಿಗೊಳಿಸಲು ಮುಂದಾಗಿದ್ದೇವೆ. ಸರ್ಕಾರ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದು ಸಹಜ. ಹೊಸ ಯೋಜನೆಗಳನ್ನು ಜಾರಿಗೊಳಿಸಬೇಕಾದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಬಂಡವಾಳ ಹೂಡಬೇಕಾಗುತ್ತದೆ. ಹೀಗಿರುವಾಗ ಖಾಸಗೀ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಿದಲ್ಲಿ ಜನರಿಗೆ ಅನುಕೂಲವಾಗುತ್ತದೆ. ಈಗಾಗಲೇ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆ ಈ ಜಾಗಕ್ಕೆ ಕೂಗಳತೆ ದೂರದಲ್ಲಿರುವುದು ಮತ್ತಷ್ಟು ಅನುಕೂಲವಾಗಲಿದೆ ಎಂದರು.ವಾಣಿಜ್ಯ ಸಂಕೀರ್ಣಗಳ ಸ್ಥಾಪನೆಸಾಫ್ಟ್ವೇರ್ ಪಾರ್ಕ್, ಹಾರ್ಡ್ವೇರ್ ಪಾರ್ಕ್, ಶಾಲಾ ಕಾಲೇಜುಗಳು, ಇಲ್ಲಿ ಸ್ಥಾಪನೆಯಾಗಲಿರುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗಾಗಿ ವಸತಿ ಸಮುಚ್ಛಯ, ಬ್ಯಾಂಕುಗಳು, ವಾಣಿಜ್ಯ ಸಂಕೀರ್ಣಗಳು, ಮೆಡಿಕಲ್ ಕಾಲೇಜು, ಆಸ್ಪತ್ರೆಗಳು, ಪೊಲೀಸ್ ತರಬೇತಿ ಶಾಲೆ, ಮನರಂಜನಾ ತಾಣ, ರಿಂಗ್ ರೋಡ್ ಸೇರಿದಂತೆ ಆಧುನಿಕ ನಗರದಲ್ಲಿ ಏನೆಲ್ಲಾ ಸೌಕರ್ಯಗಳು ಅಗತ್ಯವಾಗಿ ಬೇಕಾಗಿದೆಯೋ ಅವೆಲ್ಲವನ್ನೂ ಈ ಜಾಗದಲ್ಲಿ ನಿರ್ಮಾಣ ಮಾಡಲು ಸರ್ಕಾರ ನಿರ್ಧಾರಿಸಿದೆ ಎಂದರು.

ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಮುಂದಿನ ಎರಡು ಮೂರು ತಿಂಗಳಲ್ಲಿ ಡಿಪಿಎಆರ್ ತಯಾರಿಸಿ ಶಾಸಕರಾದ ರೂಪಕಲಾ ಶಶಿಧರ್ ಮತ್ತು ಎಸ್.ಎನ್.ನಾರಾಯಣಸ್ವಾಮಿಯವರೊಂದಿಗೆ ಸಭೆ ನಡೆಸಿ, ಚರ್ಚಿಸಿ ವರದಿಯನ್ನು ತಯಾರಿಸಿದ ಬಳಿಕವೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಯೋಜನೆಯನ್ನು ಪ್ರಾರಂಭಿಸಲಾಗುವುದು. ಎಕ್ಸ್ಪ್ರೆಸ್ ಹೈವೇ ಇಂದ ಮತ್ತು ಬಂಗಾರಪೇಟೆ-ಕೆಜಿಎಫ್ ಮುಖ್ಯರಸ್ತೆಯಿಂದ ಎರಡು ಸಂಪರ್ಕ ರಸ್ತೆಗಳನ್ನು ಇಂಟಿಗ್ರೆಟೆಡ್ ಟೌನ್‌ಶಿಪ್‌ಗೆ ಕಲ್ಪಿಸಲಾಗುವುದು ಎಂದರು.ಬಂಗಾರಪೇಟೆ ವ್ಯಾಪ್ತಿಯಲ್ಲಿ ಜಾಗ

ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮಾತನಾಡಿ, ಕೆಯುಡಿಎಫ್‌ಸಿ ನಿಗಮಕ್ಕೆ ಜವಾಬ್ದಾರಿಯನ್ನು ನೀಡಿದ್ದು, ೩೦೦ ಎಕರೆ ಪ್ರದೇಶದಲ್ಲಿ ಇಂಟಿಗ್ರೆಟೆಡ್ ಟೌನ್‌ಶಿಪ್ ನಿರ್ಮಾಣವಾಗಲಿದೆ. ಡಿಪಿಎಆರ್ ತಯಾರಿಸಿದ ಬಳಿಕ ಯಾವ ಕೈಗಾರಿಕೆ ಬರಬೇಕು, ಎಷ್ಟು ಖರ್ಚಾಗಲಿದೆ ಎಂಬ ಅಂದಾಜು ದೊರೆಯಲಿದೆ. ೩೦೦ ಎಕರೆ ಪ್ರದೇಶ ಸಂಪೂರ್ಣವಾಗಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ಈ ಸ್ಥಳವು ಕೆಜಿಎಫ್ ತಾಲೂಕಿಗೆ ಸೇರಿದ್ದು ಎಂದು ದಾಖಲೆಗಳಲ್ಲಿದ್ದರೂ ಸಹ ಭೌತಿಕವಾಗಿ ಈ ಸ್ಥಳವು ಬಂಗಾರಪೇಟೆಗೆ ಸೇರಿದ್ದಾಗಿದೆ. ಬಂಗಾರಪೇಟೆ ಮುಖ್ಯ ರಸ್ತೆಯಿಂದ ಈ ಕಡೆಗೆ ಬರುವ ಎಲ್ಲ ಪ್ರದೇಶವು ಬಂಗಾರಪೇಟೆ ತಾಲೂಕಿಗೆ ಸೇರಿದ್ದಾಗಿದೆ. ಜಾಗ ಎಲ್ಲಿದ್ದರೂ ಅದು ಸರ್ಕಾರದ್ದೇ ಆಗಿದೆ ಎಂದರು.