ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬಡವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಮಹತ್ವದ ಯೋಜನೆ ರಾಜ್ಯಸರ್ಕಾರ ಕೈಗೊಂಡಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.ಚಿಕ್ಕಬಾಣೂರಿನ ಶಿವಪುರದಲ್ಲಿ ಆಯುಷ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಕೇಂದ್ರ ಮತ್ತು ರಾಜ್ಯಸರ್ಕಾರದ ಅನುದಾನದಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ತಲಾ ₹65 ಲಕ್ಷ ವೆಚ್ಚದಲ್ಲಿ 17 ಆಯುಷ್ ಆಸ್ಪತ್ರೆಗಳು ಮಂಜೂರು ಆಗಿದೆ. ಈಗಾಗಲೇ 7 ಆಸ್ಪತ್ರೆಗಳಿಗೆ ನಿವೇಶನ ಗುರುತಿಸಿ ಟೆಂಡರ್ ಕರೆಯಲಾಗಿದೆ. ಇನ್ನು ಉಳಿದ 10 ಆಸ್ಪತ್ರೆಗಳಿಗೆ ಜಾಗ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.ಆಸ್ಪತ್ರೆ ಕಟ್ಟಡ ಗುಣಮಟ್ಟದಿಂದ ನಿರ್ಮಾಣವಾಗಬೇಕು. ಬಳಿಕ ಆಸ್ಪತ್ರೆಗೆ ಓರ್ವಆಯುಷ್ ವೈದ್ಯರನ್ನು ನೇಮಕ ಮಾಡಲಾ ಗುವುದು. ಇದರಿಂದ ಚಿಕ್ಕಬಾಣೂರು, ಗುಬ್ಬಿಹಳ್ಳಿ, ಬ್ರಹ್ಮಸಮುದ್ರ, ಮಂಜೀಹಳ್ಳಿ ಮುಂತಾದ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ಆರೋಗ್ಯ ಭಾಗ್ಯ ಕಳೆದುಕೊಂಡರೆ ಜೀವನವೇ ಇಲ್ಲದಂತಾಗುತ್ತದೆ. ಆದ್ದರಿಂದ ವೈದ್ಯೋ ನಾರಾಯಣ ಹರಿ ಎಂಬಂತೆ ವೈದ್ಯರು ಜನಸೇವೆ ಮಾಡಬೇಕು. ದಾದಿಯರು ಮತ್ತು ಆಶಾ ಕಾರ್ಯಕರ್ತೆಯರು ಸಮಾಜ ಸೇವೆಗೆ ಮುಂದಾಗಬೇಕೆಂದು ಕರೆನೀಡಿದರು.ಗ್ರಾಮೀಣ ಭಾಗದ ಜನರು ತಮ್ಮಆರೋಗ್ಯಕ್ಕೆ ಆದ್ಯತೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಸರ್ಕಾರ ಯಾವುದೇ ಇರಲಿ ಜನಪ್ರತಿನಿಧಿಗಳಾಗಿ ಅನುದಾನ ತರುವ ಕೆಲಸವನ್ನು ದೇವಸ್ಥಾನದಲ್ಲಿ ಪೂಜಾರಿ ಮಾಡುವ ಕೆಲಸದಂತೆ ನಿರ್ವಹಿಸಬೇಕು. ಸಾಮಾನ್ಯರಿಂದ ಶ್ರೀಮಂತರವರೆಗೆ ತೆರಿಗೆ ಪಾವತಿಸುವ ಹಣ ಸಾಮಾಜಿಕವಾಗಿ ಒಳ್ಳೆಯ ಕೆಲಸಗಳಿಗೆ ಬಳಸಬೇಕೆಂದು ಗುರಿಹೊಂದಲಾಗಿದೆ ಎಂದರು.ಎಲ್ಲಾ ವರ್ಗದ ಬಡವರು, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ಜನಪರ ಕಾರ್ಯ ಕೈಗೊಳ್ಳಲಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ಸರ್ಕಾರದ ಅಭಿವೃದ್ಧಿಗೂ ಅನುದಾನ ನೀಡುತ್ತಿದೆ ಎಂದು ಹೇಳಿದರು.ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ 50 ಬೆಡ್‌ನ ಆಸ್ಪತ್ರೆ ಸಿದ್ಧಪಡಿಸಲಾಗಿದೆ. ಕೆಡಿಪಿ ಸಭೆಯಲ್ಲಿ ಚರ್ಚಿಸಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶೀಘ್ರದಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಆಯುಷ್ ವೈದ್ಯರ ಕೊರತೆ ಇದ್ದು, 12 ವೈದ್ಯರ ನೇಮಕಾತಿ ಸಂದರ್ಭದಲ್ಲಿ ಒಳಮೀಸಲಾತಿ ಸಮಸ್ಯೆಯಿಂದ ನೇಮಕಾತಿರದ್ದಾಗಿದೆ. ಏ.9 ರ ಉಪಚುನಾವಣೆ ನಂತರ ವೈದ್ಯರ ನೇಮಕ ಮಾಡಿಕೊಳ್ಳುವ ಭರವಸೆ ನೀಡಿದರು.
ಬಯಲು ಭಾಗದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಟಾಸ್ಕ್ ಫೋರ್ಸ್ ಸಭೆ ನಡೆದಿದ್ದು, ಅವಶ್ಯಕತೆ ಇರುವಕಡೆ ಬೋರ್‌ವೆಲ್‌ಗಳ ಮೂಲಕ ನೀರು ಸರಬರಾಜಿಗೆ ಮುಂಜಾಗ್ರತಾಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.ಆಸ್ಪತ್ರೆಗೆ ನಿವೇಶನ ನೀಡಿರುವದಾನಿ ವಿಶ್ವನಾಥ್, ಗ್ರಾ.ಪಂ ಸದಸ್ಯರಾದ ಉಮಾಕಾಂತ್, ಮಾಜಿ ಅಧ್ಯಕ್ಷ ಧನಂಜಯ್, ನಟೇಶ್, ಮಲ್ಲಿಕಾರ್ಜುನ ಇದ್ದರು.