ಸಾರಾಂಶ
ಎರಡನೇ ಹಂತದ ಕಟ್ಟಡದಲ್ಲಿ ಗ್ರಂಥಾಲಯ, ಸೆಮಿನಾರ್ ಹಾಲ್ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಭವಿಷ್ಯದ ದಿನಗಳಲ್ಲಿ ಕಾಲೇಜುಗಳಿಗೆ ಹೊಸ ಹೊಸ ಕೋರ್ಸ್‌ಗಳನ್ನು ತರುವ ಚಿಂತನೆ ಇದೆ. ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕೆಂಬ ದೃಷ್ಠಿಯಿಂದ ವಾರದೊಳಗೆ ಮತ್ತೆ ಕಾಲೇಜು ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕ್ಯಾಂಪಸ್ ನಿರ್ಮಾಣ 88 ಕೋಟಿ ರು.ಗಳ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿಗಳು ತಾಲೂಕಿನ ಅಮರಾವತಿ ಬಳಿ ಅತ್ಯಂತ ವೇಗವಾಗಿ ನಡೆಯುತ್ತಿದ್ದು ಎರಡನೇ ಹಂತದ ಕಾಮಗಾರಿಯನ್ನು 110 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಳ್ಳಲು ಸದ್ಯದಲ್ಲೆ ಸಚಿವ ಸಂಪುಟದ ಮುಂದೆ ತರಲಾಗುವುದೆಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ನಗರದಲ್ಲಿ ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ 3 ಕೋಟಿ ರು.ಗಳ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಿಷ್ಯದ ದೃಷ್ಟಿಯಿಂದ ಶಿಡ್ಲಘಟ್ಟ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ವಿನ್ಯಾಸವನ್ನು ಸಿದ್ದಪಡಿಸಲಿದ್ದೇವೆ. ಅದರಂತೆ ಮುಂದಿನ ದಿನಗಳಲ್ಲಿ ಅಭಿವೃಧ್ದಿ ಕಾಮಗಾರಿ ನಡೆಯಲಿದೆ ಎಂದರು.ವಿಶಾಲ ಕೊಠಡಿ ನಿರ್ಮಾಣಪ್ರತಿ ಕೊಠಡಿಯಲ್ಲಿ ಕನಿಷ್ಠ 60 ಜನ ವಿದ್ಯಾರ್ಥಿಗಳು ಕೂರುವ ರೀತಿಯಲ್ಲಿ ತರಗತಿ ಕೊಠಡಿಗಳನ್ನು ದೊಡ್ಡದಾಗಿ ನಿರ್ಮಾಣ ಮಾಡುವಂತೆ ಸೂಚಿಸಲಾಗಿದೆ ಎಂದ ಅವರು, ಮುಂದೆ ಕಟ್ಟುವ ಕಟ್ಟಡದಲ್ಲಿ ಗ್ರಂಥಾಲಯ, ಸೆಮಿನಾರ್ ಹಾಲ್ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಭವಿಷ್ಯದ ದಿನಗಳಲ್ಲಿ ಕಾಲೇಜುಗಳಿಗೆ ಹೊಸ ಹೊಸ ಕೋರ್ಸ್‌ಗಳನ್ನು ತರುವ ಚಿಂತನೆ ಇದೆ. ಓದುವ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕಲ್ಪಿಸಬೇಕೆಂಬ ದೃಷ್ಠಿಯಿಂದ ವಾರದೊಳಗೆ ಮತ್ತೆ ಕಾಲೇಜು ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದೆಂದರು.
ರಾಜ್ಯದಲ್ಲಿ ಉನ್ನತ ಶಿಕ್ಷಣ ಸಚಿವನಾಗುವ ಅವಕಾಶ ನನಗೆ ಒದಗಿ ಬಂದಿದೆ. ಆದ್ದರಿಂದ ಪಕ್ಷಾತೀತವಾಗಿ ಜಿಲ್ಲೆಯಲ್ಲಿ ಆಗಬೇಕಾದ ಅಭಿವೃಧ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಬಂದಿರುವ ಅವಕಾಶವನ್ನು ಬಳಸಿಕೊಂಡು ಜಿಲ್ಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಲಾಗುವುದೆಂದರು.ಹೈಟೆಕ್ ಮಾರುಕಟ್ಟೆಗೆ ಶೀಘ್ರದಲ್ಲೇ ಶಂಕುಶಿಡ್ಲಘಟ್ಟ ತಾಲೂಕಿನಲ್ಲಿ ಸುಮಾರು 200 ಕೋಟಿ ರೂ, ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಸ್ಥಾಪನೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದು, ಫೆಬ್ರವರಿ ತಿಂಗಳಲ್ಲಿ ಮುಖ್ಯಮಂತ್ರಿಗಳನ್ನು ಶಿಡ್ಲಘಟ್ಟಕ್ಕೆ ಕರೆಸಿ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದೆಂದು ಇದೇ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ಬಿ.ಎನ್.ರವಿಕುಮಾರ್ , ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ , ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಮುರಳಿ ಆನಂದ್ ಜಿ , ಪ್ರಧ್ಯಾಪರಕರಾದ ಶಫೀ ಅಹಮದ್ , ಡಾ ವಿಜೇಂದ್ರ, ಮುಖಂಡರಾದ ಬಂಕ್ ಮುನಿಯಪ್ಪ , ತಾದೂರ್ ರಘು , ರಾಜ್ ಕುಮಾರ್ , ರಾಜೇಶ್ , ಮತ್ತಿತರರು ಹಾಜರಿದ್ದರು.