ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಶಿವಾರಪಟ್ಟಣ ಗ್ರಾಮದ ಕೆರೆಯ ನೀರು ವ್ಯರ್ಥವಾಗಿ ಹರಿಯುವುದರಿಂದ ರಸ್ತೆ ಹದಗೆಟ್ಟಿದ್ದು, ಸರ್ಕಾರದ ಎಂವೈ ಯೋಜನೆಯಡಿ ೨.೫೦ ಕೋಟಿ ರು.ಗಳ ವೆಚ್ಚದಲ್ಲಿ ರಸ್ತೆ ಹಾಗೂ ಕಾಲುವೆ ನಿರ್ಮಿಸುತ್ತಿರುವುದಾಗಿ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ತಾಲೂಕಿನ ಕಸಬಾ ಹೋಬಳಿಯ ಶಿವಾರಪಟ್ಟಣ ಗ್ರಾಮದ ಕೆರೆಯ ದಂಡೆಯ ಸಮೀಪ ಎಂವೈ ಯೋಜನೆಯಡಿ ಕೆರೆಯ ಕೆಳಗಡೆ ಚರಂಡಿ ನಿರ್ಮಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮುಂದಿನ ೩ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ವ್ಯರ್ಥ ನೀರಿನಿಂದ ರಸ್ತೆ ದುಸ್ಥಿತಿಶಿವಾರಪಟ್ಟಣದಿಂದ ಹೊಸಹಳ್ಳಿ ಗ್ರಾಮದವರೆಗೂ ಕೆರೆಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ವ್ಯರ್ಥವಾದ ನೀರಿನಿಂದ ರಸ್ತೆಯು ಹಾಳಾಗುತ್ತಿದ್ದು ಡಾಂಬರು ಹಾಕಿದರೂ ಉಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಂವೈ ಯೋಜನೆಯಡಿ ೨.೫೦ ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುತ್ತಿದೆ. ಕೆರೆಕಟ್ಟೆಗೆ ಚರಂಡಿಯನ್ನು ನಿರ್ಮಿಸುವುದರ ಜತೆಗೆ ನೀರು ರಸ್ತೆಯ ಮೇಲೆ ಹರಿಯದಂತೆ ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ರಸ್ತೆಗೆ ಜಲ್ಲಿಯನ್ನೂ ಸಹ ಹಾಕಲಾಗುವುದು. ಉಳಿದಿರುವ ರಸ್ತೆಗೆ ಮುಂದಿನ ದಿನಗಳಲ್ಲಿ ಡಾಂಬರೀಕರಣವನ್ನು ಮಾಡಿ ಅನುಕೂಲ ಕಲ್ಪಿಸಲಾಗುವುದು ಎಂದರು.
ಈಗಾಗಲೇ ಸೌಲಭ್ಯವಂಚಿತವಾದ ಶಿವಾರಪಟ್ಟಣ ಗ್ರಾಪಂನಲ್ಲಿ ಅತಿ ಹೆಚ್ಚು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದನ್ನು ಗ್ರಾಮಸ್ಥರು ತಿಳಿದುಕೊಳ್ಳಬೇಕು. ಹಿಂದಿನ ಮೈತ್ರಿ ಸರ್ಕಾರದಲ್ಲಿ ಶಿವಾರಪಟ್ಟಣ ಗ್ರಾಮದಲ್ಲಿ ೧೦ ಕೋಟಿ ವೆಚ್ಚದಲ್ಲಿ ಶಿಲ್ಪಿ ಗ್ರಾಮವನ್ನಾಗಿ ಅಭಿವೃದ್ದಿಪಡಿಸಲಾಗಿದೆ. ಗ್ರಾಪಂ ಅನುದಾನ, ಸರ್ಕಾರದ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಗ್ರಾಮಕ್ಕೆ ಯಾವ ಯಾವ ಕಾಮಗಾರಿಗಳನ್ನು ಮಾಡಬೇಕಾಗಿತ್ತೋ ಅವೆಲ್ಲವನ್ನು ಮಾಡಿದ್ದೇನೆ ಎಂದರು.ತಾಂತ್ರಿಕ ಸಮಸ್ಯೆ: ನೀರು ಸ್ಥಗಿತ
ಕೆಸಿ ವ್ಯಾಲಿ ಯೋಜನೆಯನ್ನು ತಾಲೂಕಿಗೆ ತರಲು ಹೋರಾಟ ಮಾಡುವುದರ ಜತೆಗೆ ರಾಜೀನಾಮೆ ನೀಡಲು ಮುಂದಾಗಿದ್ದೆ. ನಮ್ಮೆಲ್ಲರ ಪ್ರಯತ್ನದಿಂದ ತಾಲೂಕಿಗೆ ಕೆಸಿ ವ್ಯಾಲಿ ನೀರು ಹರಿಯಿತು. ತಾಲೂಕಿನ ಶಿವಾರಪಟ್ಟಣ ಗ್ರಾಮದಿಂದ ಹಲವು ಕೆರೆಗಳಿಗೆ ನೀರು ಹರಿಯುತ ಇದ್ದ ಕೆ.ಸಿ.ವ್ಯಾಲಿ ನೀರು ಹರಿಯುವಿಕೆ ಸ್ವಲ್ಪ ಟೆಕ್ನಿಕಲ್ ಸಮಸ್ಯೆ ಉಂಟಾಗಿ ಹಲವು ದಿನಗಳ ಕಾಲ ಸ್ಥಗಿತಗೊಂಡಿದ್ದು, ಈಗ ಸರಿಪಡಿಸುವ ಭರವಸೆ ಸಿಕ್ಕಿದೆ ಎಂದರು.15 ದಿನದಲ್ಲಿ ಕೆರೆಗೆ ನೀರು
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಡಿಸಿ, ಅಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ನೀರು ಬರಲು ಸಮಸ್ಯೆಯ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಂಡಿದ್ದು, ಮುಂದಿನ ೧೫ ದಿನಗಳ ಒಳಗೆ ಕೆರೆಗೆ ನೀರು ಹರಿದು ಆದಷ್ಟು ಬೇಗನೆ ಕೆರೆಯನ್ನು ತುಂಬಿಸಿ ಅನುಕೂಲ ಕಲ್ಪಿಸಲಾಗುವುದು. ತಾಲೂಕಿನ ಸರ್ವಾಂಗೀಣ ಅಭಿವೃದ್ದಿಗಾಗಿ ಹೊಸ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದರು.ಗ್ರಾಪಂ ಅಧ್ಯಕ್ಷ ಮುನೇಗೌಡ, ಸನೌಸಂ ಅಧ್ಯಕ್ಷ ವಿ.ಮುನೇಗೌಡ, ಪಿಡಿಒ ರಮೇಶ್ ನಾಯಕ್, ಗ್ರಾಪಂ ಉಪಾಧ್ಯಕ್ಷ ತಿಮ್ಮಯ್ಯ, ಸದಸ್ಯರಾದ ಜಗನ್ನಾಥಚಾರಿ, ಅನಂತನಾಯಕ್, ರಾಮೇನಹಳ್ಲಿ ಮುನಿರಾಜ್, ನಂದಿನಿ ಲೋಕೇಶ್, ಆನಂದ್, ಹುಂಗೇನಹಳ್ಳಿ ಗ್ರಾಪಂ ಅಧ್ಯಕ್ಷ ನಾರಾಯಣರೆಡ್ಡಿ, ಮಾಜಿ ಆಧ್ಯಕ್ಷರಾದ ಲಿಂಗಾಪುರ ಕಿಟ್ಟಿ (ಕಿಟ್ಟಣ್ಣ), ಚಿರಂಜೀವಿ, ಮೋಹನ್, ಸಣ್ಣ ನೀರಾವರಿ ಇಲಾಖೆಯ ಎಂಜನೀಯರ್ ಹರಿಕೃಷ್ಣ, ಕೆಸಿ ವ್ಯಾಲಿ ಯೋಜನೆಯ ಎಂಜನೀಯರ್ ಕೃಷ್ಣಪ್ಪ ಇನ್ನಿತರರು ಹಾಜರಿದ್ದರು.