ಸಾರಾಂಶ
ಕಾರಟಗಿ: ಕೊಪ್ಪಳ ಜಿಲ್ಲೆಯ ಕಾರಟಗಿ, ಕುಕನೂರ, ಭಾಗ್ಯನಗರ, ಕುಷ್ಟಗಿ, ಕನಕಗಿರಿ ಸೇರಿ ಒಟ್ಟು ೫ ಇಂದಿರಾ ಕ್ಯಾಂಟೀನ್ ಮಂಜೂರಾಗಿವೆ. ಇನ್ಮುಂದೆ ಉತ್ತರ ಕರ್ನಾಟಕ ಭಾಗದಲ್ಲಿ ಸಿಗುವ ರೊಟ್ಟಿ, ಕಾಳು, ಪಲ್ಯ ಸೇರಿ ವಿವಿಧ ಆಹಾರ ಪದಾರ್ಥಗಳನ್ನು ನೀಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ಬಸ್ ನಿಲ್ದಾಣದ ಮುಂಭಾಗದ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಒಂದು. ೨೦೧೭ರಲ್ಲಿ ರಾಜ್ಯಾದ್ಯಂತ ಆರಂಭವಾಗಿರುವ ಈ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು ೧೮೫ ಇಂದಿರಾ ಕ್ಯಾಂಟಿನ್‌ಗಳಿಗೆ ಟೆಂಡರ್ ಆಗಿದೆ. ರಾಜ್ಯದ ಒಟ್ಟು ೧೬೫ ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ೨೦ ಮಹಾನಗರ ಪಾಲಿಕೆಗಳಲ್ಲಿ, ಅದರಲ್ಲೂ ಬಡವರ, ಸಾರ್ವಜನಿಕರ, ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಸಿಗಬೇಕೆಂಬ ಸದುದ್ದೇಶದಿಂದ ಎಂ.ಎಸ್. ಎಕ್ಸೆಲ್‌ನವರ ನೇತೃತ್ವದಲ್ಲಿ ₹೮೭ ಲಕ್ಷಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಲಿದೆ. ಇನ್ನು ಎರಡ್ಮೂರು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವುದು. ಬಡ ವರ್ಗದವರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಅತಿ ಕಡಿಮೆ ಬೆಲೆಗೆ ಊಟ, ಉಪಾಹಾರ ನೀಡುವ ಯೋಜನೆಗೆ ಒತ್ತು ನೀಡಲಾಗಿದೆ ಎಂದರು.ಕನಕಗಿರಿ ಕ್ಷೇತ್ರದಲ್ಲಿ ಎರಡು ಕಡೆ ೧೦೦ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಲ್ಲಿ ಹಣ ಇಡುವ ವ್ಯವಸ್ಥೆ ಮಾಡಲಾಗಿದೆ. ಕೆಕೆಆರ್‌ಡಿಬಿ ಅಧ್ಯಕ್ಷರ ವಿಶೇಷ ಅನುದಾನದಲ್ಲಿ ಹಣ ಮೀಸಲಿಡಲು ಮುಖ್ಯಮಂತ್ರಿ ಬಳಿ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ೧೮ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕ್ಯಾಬಿನೆಟ್‌ನಲ್ಲಿ ಘೊಷಣೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಪಟ್ಟಣದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಎರಡು ಖಾಸಗಿ ಜಮೀನು ಗುರುತಿಸಲಾಗಿದೆ. ನೀರಾವರಿ ಭಾಗದಲ್ಲಿ ಭೂಮಿ ಸಿಗುವುದು ದುಸ್ತರವಾದ ಹಿನ್ನೆಲೆಯಲ್ಲಿ ೨೩ನೇ ವಾರ್ಡನ ದೇವಿಕ್ಯಾಂಪ್‌ನಲ್ಲಿ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಗ್ರಾಮದೇವತೆ ದೇವಸ್ಥಾನದ ಬಳಿಯ ಸಂತ್ರಸ್ತರು, ಕಾಲುವೆ ದಡದಲ್ಲಿ ವಾಸಿಸುವ ಗುಡಿಸಲು ನಿವಾಸಿಗಳು, ಪುಷ್ಕರಣಿ ಬಳಿ ತೆರವುಗೊಂಡ ಗುಡಿಸಲು ವಾಸಿಗಳಿಗೆ ಸೇರಿದಂತೆ ಎಲ್ಲರಿಗೂ ಒಂದೆಡೆ ನಿವೇಶನ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿ, ಸಮಗ್ರವಾಗಿ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಪಿಐ ಪ್ರದೀಪ್ ಬಿಸೆ, ಪುರಸಭೆ ಮುಖ್ಯಾಧಿಕಾರಿ ಸುರೇಶ, ಶಶಿಧರಗೌಡ ಪಾಟೀಲ್, ಕೆ. ಸಿದ್ದನಗೌಡ, ಚಿದಾನಂದಪ್ಪ ಈಡಿಗೇರ, ಶಿವರೆಡ್ಡಿ ನಾಯಕ, ಚನ್ನಬಸವ ಸುಂಕದ, ಶರಣೇಗೌಡ ಮಾ. ಪಾಟೀಲ್, ಬಿ. ಶರಣಯ್ಯಸ್ವಾಮಿ, ಶರಣಪ್ಪ ಪರಕಿ, ನಾಗರಾಜ ಅರಳಿ, ಅಯ್ಯಪ್ಪ ಉಪ್ಪಾರ, ಉದಯ ಈಡಿಗೇರ, ಖಾಜಾ ಹುಸೇನ್ ಮುಲ್ಲಾ, ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ, ಮಂಜುನಾಥ ಮೇಗೂರು, ದೊಡ್ಡಬಸವರಾಜ ಬೂದಿ, ಸೋಮಶೇಖರ ಬೇರಗಿ, ಸಿದ್ದಪ್ಪ ಬೇವಿನಾಳ ಇದ್ದರು.