ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾಲು ಸಂಕದಿಂದ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಬೆನ್ನಲ್ಲೇ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಮಲೆನಾಡು ಜಿಲ್ಲೆಗಳಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಇನ್ನಷ್ಟು ಆದ್ಯತೆ ನೀಡುವುದಾಗಿ ಮಂಡಳಿಯ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡ ಅವರು ತಿಳಿಸಿದ್ದಾರೆ.ದುರಂತದಲ್ಲಿ ಮೃತರಾದ ಬೈಸೆ ಗ್ರಾಮದ ಚಿಕಳಿ ನಿವಾಸಿ ಶಶಿಕಲಾ ನಿಧನಕ್ಕೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದವರು ತಿಳಿಸಿದರು..
ಈ ಸಂಬಂಧ ಹೇಳಿಕೆ ನೀಡಿ, ಜುಲೈ ಅಂತ್ಯದೊಳಗೆ ಮಂಡಳಿಯ ಸರ್ವ ಸದಸ್ಯರ ಸಭೆಯನ್ನು ನಡೆಸಿ ಸದರಿ ವಿಷಯದ ಬಗ್ಗೆ ವಿವರವಾಗಿ ಚರ್ಚಿಸಿ ಅಗತ್ಯ ತಿರ್ಮಾನ ಕೈಗೊಳ್ಳಲಾಗುವುದು ಎಂದರು.ಮಲೆನಾಡಿನ ಶಾಸಕರುಗಳು ಸೂಚಿಸುವ ಸ್ಥಳಗಳಲ್ಲಿ ಕಾಲುಸಂಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮಂಡಳಿಯ 2024-25 ನೇ ಸಾಲಿನ ಯೋಜನೆಯಲ್ಲಿ ಹೆಚ್ಚಿನದಾಗಿ ಕಾಲುಸಂಕಗಳಿಗೆ ಪ್ರಾಮುಖ್ಯತೆ ನೀಡಿ ಕಾಮಗಾರಿಗಳನ್ನು ನೀಡುವಂತೆ ಶಾಸಕರುಗಳಿಗೆ ತಿಳಿಸಲಾಗಿರುತ್ತದೆ. ಮಳೆಗಾಲದಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಬೀಳುವುದರಿಂದ ಸಂಬಂಧಿಸಿದ ಶಾಸಕರುಗಳು ತಮ್ಮ ಅನುದಾನದಲ್ಲಿ ಕಾಮಗಾರಿಗಳನ್ನು ಪ್ರಸ್ತಾಪಿಸುವಾಗ ಹೆಚ್ಚಿನ ಸಂಖ್ಯೆಯಲ್ಲಿ ಕಾಲುಸಂಕಗಳ ಕಾಮಗಾರಿಗಳನ್ನು ಕೈಗೊಳ್ಳಲು ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.ಈಗಾಗಲೇ ಘಟನೆ ಸಂಭವಿಸಿದ ಸ್ಥಳದಲ್ಲಿ ಕಾಲುಸಂಕ ನಿರ್ಮಿಸುವ ಬಗ್ಗೆ ಎಲ್ಲ ಮಾಹಿತಿ ಪಡೆದಿದ್ದು, ಮಂಡಳಿಯ ಅನುದಾನದಲ್ಲಿ ಕೊಡಲೇ ಕಾಲುಸಂಕ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದುಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.ಕಾಲುಸಂಕ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿ ಮಹಿಳೆ ಸಾವು
ಹೊಸನಗರ: ಕಾಲುಸಂಕ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕಿನ ಬೈಸೆ ಎಂಬಲ್ಲಿ ನಡೆದಿದೆ.ಬೈಸೆ ಗ್ರಾಮದ ಚೀಕಳಿ ನಿವಾಸಿ ಶಶಿಕಲಾ (43) ಮೃತ ಮಹಿಳೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಜಮೀನಿನ ಬಳಿ ಸಂಕ ದಾಟಲು ಹೋದಾಗ ಈ ಘಟನೆ ನಡೆದಿದೆ.
ಮೃತ ಮಹಿಳೆ ಶಶಿಕಲಾ ಬೆಳಿಗ್ಗೆ ಅಗೆ ಹಾಕಲು (ಸಸಿಮಡಿ) ನೋಡಿಕೊಂಡು ಬರಲು ಜಮೀನಿಗೆ ಹೋಗಿದ್ದು, ವಾಪಾಸ್ ಬಂದಿರಲಿಲ್ಲ. ಕೆಲಹೊತ್ತು ಬಿಟ್ಟು ಮನೆಯವರು ಹುಡುಕಲು ಹೋದ ಸಂದರ್ಭದಲ್ಲಿ ಜಮೀನಿನ ಹತ್ತಿರದ ಸಂಕದಿಂದ ಒಂದು ಕಿ.ಮೀ. ದೂರದ ದುಮುಕದಗದ್ದೆ ಕಾಲು ಸೇತುವೆ ಹತ್ತಿರ ಹಳ್ಳದಲ್ಲಿ ಮೃತದೇಹವೊಂದು ಮರಕ್ಕೆ ಸಿಕ್ಕಿಹಾಕಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಮೃತ ಶಶಿಕಲಾರ ಮೃತದೇಹ ಎಂದು ಗೊತ್ತಾಗಿದೆ. ಘಟನೆ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.