ಸಾರಾಂಶ
ರೋಣ: ಪಟ್ಟಣದ ಬಾದಾಮಿ ರಸ್ತೆಯ ಒಂದು ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಗಾಣಿಗ ಸಮಾಜ ಸಮೂದಾಯ ಭವನ ನಿರ್ಮಿಸಲಾಗುವುದು. ಮೊದಲ ಹಂತವಾಗಿ ₹ 25 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಅವರು ಭಾನುವಾರ ಪಟ್ಟಣದ ಬಾದಾಮಿ ರಸ್ತೆಯಲ್ಲಿರುವ ಗಾಣಿಗ ಸಮಾಜ ಜಾಗೆಯಲ್ಲಿ ರೋಣ ತಾಲೂಕು ಗಾಣಿಗ ಸಮಾಜ ವತಿಯಿಂದ ಜರುಗಿದ ₹1 ಕೋಟಿ ವೆಚ್ಚದಲ್ಲಿ ಗಾಣಿಗ ಸಮಾಜ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಣಿಗ ಸಮಾಜ, ಬಣಜಿಗ ಸಮಾಜ, ಪಂಚಮಸಾಲಿ ಸಮಾಜ, ಅಲ್ಪಸಂಖ್ಯಾತರು, ಹಾಲುಮತ ಸಮಾಜ, ಎಸ್.ಸಿ, ಎಸ್.ಟಿ ಸಮಾಜ ಸೇರಿದಂತೆ ಹೀಗೆ ಪ್ರತಿಯೊಂದು ಸಮಾಜದ ಆಶೀರ್ವಾದ, ಪ್ರೀತಿ ನನ್ನ ಮೇಲಿದೆ. ಎಲ್ಲಾ ಸಮಾಜದ ಋಣವನ್ನು ತೀರಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಈ ದಿಶೆಯಲ್ಲಿ ಗಾಣಿಗ ಸಮಾಜಕ್ಕೆ ಅನುಕೂಲವಾಗುವಲ್ಲಿ ₹ 1 ಕೋಟಿ ವೆಚ್ಚದಲ್ಲಿ ಭವ್ಯವಾದ ಸಮುದಾಯ ಭವನ ನಿರ್ಮಿಸಲು ಅನುದಾನ ಮಂಜೂರಾಗಿದೆ. ಚುನಾವಣೆ ಪೂರ್ವ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಮಾಜ ನನಗೆ ಅವಕಾಶ ಕಲ್ಪಿಸಿದೆ. ಸರ್ಕಾರ ಅನುದಾನ ಜೊತೆಗೆ ಅಥಣಿ ಶಾಸಕರಾದ ಲಕ್ಷ್ಮಣ ಸವದಿಯವರು ಈಗಾಗಲೇ ₹ 10 ಲಕ್ಷ ಕೊಡುವದಾಗಿ ವಾಗ್ದಾನ ಮಾಡಿದ್ದಾರೆ. ಇದೇ ರೀತಿ ಸಮಾಜದ ಪ್ರತಿಯೊಬ್ಬರು ಸುಸಜ್ಜಿತ, ಭವ್ಯವಾದ ಸಮೂದಾಯ ಭವನ ನಿರ್ಮಾಣಕ್ಕೆ ತನು, ಮನ, ಧನ ಸೇವೆ ಗೈಯುವ ಮೂಲಕ ಕೈಜೋಡಿಸಬೇಕು. ಸಮಾಜದ ಮುಖಂಡರು ಈಗಾಗಲೇ ಭವನದ ನೀಲಿನಕ್ಷೆ ಸಿದ್ಧಪಡಿಸಿದ್ದು, ಅಂದಾಜು ₹ 3.5 ಕೋಟಿಯಷ್ಟು ಖರ್ಚಾಗುವ ಸಾಧ್ಯತೆಯಿದೆ. ನಾನು ₹ 1 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಸಮಾಜದ ಮುಖಂಡರು ಸೇರಿದಂತೆ ಎಲ್ಲರ ಸಹಭಾಗಿತ್ವ, ದೇಣಿಗೆ ಅತೀ ಮುಖ್ಯವಾಗಿದೆ ಎಂದರು.ಮಾಜಿ ಉಪ ಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಸಮಾಜದ ಋಣ ತೀರಿಸುವುದು ಅತೀ ಮುಖ್ಯವಾಗಿದೆ. ಸಮಾಜದ ಮೇಲೆ ಶ್ರದ್ಧೆ ಇರಬೇಕು. ಚುನಾವಣೆ ಪೂರ್ವ ಶಾಸಕ ಜಿ.ಎಸ್. ಪಾಟೀಲ ಅವರ ಪರ ಪ್ರಚಾರಕ್ಕೆ ಬಂದಿದ್ದ ಸಮಯದಲ್ಲಿ ನನ್ನಿಂದ ರೋಣ ತಾಲೂಕಿನ ಗಾಣಿಗ ಸಮಾಜಕ್ಕೆ ಏನನ್ನಾದರೂ ಸೇವೆ ನೀಡುವುದಾಗಿ ಮಾತು ಕೊಟ್ಟಿದ್ದೆ, ಅದರಂತೆ ಸಮಾಜದ ಸಮೂದಾಯ ಭವನ ನಿರ್ಮಾಣಕ್ಕೆ ಮೊದಲ ಹಂತವಾಗಿ ₹ 10 ಲಕ್ಷ ಕೊಡುತ್ತೇನೆ. ಸಮುದಾಯಭವನ ಸ್ಲ್ಯಾಬ್ ಹಂತಕ್ಕೆ ತಲುಪಿದ ಬಳಿಕ ಮತ್ತೆ ₹ 15 ಲಕ್ಷ ದೇಣಿಗೆ ಕೊಡುತ್ತೇನೆ. ರೋಣ ತಾಲೂಕಿನಲ್ಲಿ ಗಾಣಿಗ ಸಮಾಜ ಅಭಿವೃದ್ಧಿ ಹೊಂದಬೇಕು. ಈ ದಿಶೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕು.ಇಂದು ಸಮಾಜದ ಉನ್ನತಿಗೆ ಶಿಕ್ಷಣ ಅತೀ ಸಹಕಾರಿಯಾಗಿದೆ ಎಂದರು. ವೇದಿಕೆ ಮೂಲಕ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು. ಸಾನಿಧ್ಯವನ್ನು ವಹಿಸಿ ವಿಜಯಪೂರ ಗಾಣಿಗ ಗುರುಪೀಠದ ಜಯಬಸವ ಕುಮಾರ ಸ್ವಾಮಿ, ಹಾಲಕೇರಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಕೊತಬಾಳ ಅಡವಿಸಿದ್ದೇಶ್ವರ ಮಠದ ಗಂಗಾಧರ ಸ್ವಾಮೀಜಿ, ಬೆನಹಾಳ ಸದಾಶಿವ ಮಹಾಂತ ಶಿವಾಚಾರ್ಯರು, ಗವಿಮಠದ ಬಸವಲಿಂಗ ಸ್ವಾಮೀಜಿ ಸಾನಿಧ್ಯವನ್ನು ವಹಿಸಿದ್ದರು. ಅಧ್ಯಕ್ಷತೆಯನ್ನು ಹುಚ್ಚಪ್ಪ ನವಲಗುಂದ ವಹಿಸಿದ್ದರು. ಪ್ರಾಸ್ತಾವಿಕವಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಪರಶುರಾಮ ಅಳಗವಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿ.ಆರ್. ಪಾಲಾಕ್ಷಗೌಡ, ಷಣ್ಮುಕಪ್ಪ ಬಡ್ನಿ, ವ್ಹಿ.ಆರ್. ಗುಡಿಸಾಗರ, ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಬಸವರಾಜ ಬಿಂಗಿ, ತಾಲೂಕು ಗಾಣಿಗ ಸಮಾಜ ಅಧ್ಯಕ್ಷ ಬಸವರಾಜ ನವಲಗುಂದ, ಪರಶುರಾಮ ಅಳಗವಾಡಿ, ದಶರಥ ಗಾಣಿಗೇರ, ಮಲ್ಲಯ್ಯ ಮಹಾಪುರುಷಮಠ, ಫಕೀರಗೌಡ ಪಾಟೀಲ, ಸಿದ್ದಣ್ಣ ಬಂಡಿ, ಎಸ್.ಆರ್. ಕುಮಸಗಿ, ಮಲ್ಲಣ್ಣ ತೊದಲಬಾಗಿ, ಎ.ವೈ. ಹಾದಿಮನಿ, ಬಸನಗೌಡ ಖ್ಯಾತನಗೌಡ್ರ, ಅಮೃತಗೌಡ ಗೌಡರ, ನಿಂಗಪ್ಪ ಬದಾಮಿ, ಬಿ.ಎಸ್. ಕರಿಗೌಡ್ರ, ಗೋವಿಂದಗೌಡ್ರ, ವಿಜಯ ನವಲಗುಂದ, ಎಂ.ಎಸ್. ಕೋರಿ, ಮುತ್ತಣ್ಣ ಸಂಗಳದ, ಯೂಸೂಫ ಇಟಗಿ ಮುಂತಾದವರು ಉಪಸ್ಥಿತರಿದ್ದರು. ದಶರಥ ಗಾಣಿಗೇರ ಸ್ವಾಗತಿಸಿದರು. ಮಾಮಲೇಶ ಗಾಣಿಗೇರ ನಿರೂಪಿಸಿದರು. ಎಂ.ವ್ಹಿ. ಉಮಚಗಿ ವಂದಿಸಿದರು.