5 ವರ್ಷಗಳಿಂದ ತೆವಳುತ್ತಿರುವ ಗುರುಭವನ ನಿರ್ಮಾಣ

| Published : Sep 05 2025, 01:00 AM IST

5 ವರ್ಷಗಳಿಂದ ತೆವಳುತ್ತಿರುವ ಗುರುಭವನ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ ಹೊರವಲಯ ಮಹಾವೀರ್ ಜೈನ್ ಆಸ್ಪತ್ರೆ ಸಮೀಪವಿರುವ ತಗ್ಗು ಪ್ರದೇಶವನ್ನು ಸಮತಟ್ಟು ಮಾಡಿ ನಿರ್ಮಿಸಲು ಹೊರಟಿರುವ ಜಿಲ್ಲಾ ಗುರುಭವನದ ಕಾಮಗಾರಿ 2021-22 ರಿಂದ ಆರಂಭಿಸಿದ್ದರೂ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ನಿರ್ಮಾಣಕ್ಕಾಗಿ ಇಟ್ಟಿದ್ದ ಎರಡೂವರೆ ಕೋಟಿ ಹಣ ಕರಗಿಸಿ ನೆಲಮಾಳಿಗೆಯಷ್ಟೇ ನಿರ್ಮಾಣ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇಂದು ಶಿಕ್ಷಕರ ದಿನಾಚರಣೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಇನ್ನೂ ಶಿಕ್ಷಕರ ಭವನ ನಿರ್ಮಾಣವಾಗಿಲ್ಲ. ಕಳೆದ ಐದು ವರ್ಷಗಳಿಂದ ನಿರ್ಮಾಣದ ಹಂತದಲ್ಲೇ ತೆವಳುತ್ತಿದೆ. ಮಳೆ ಬಂದರೆ ಕೆರೆಯಲ್ಲಿರುವಂತೆ ಕಾಣುವ ಶಿಕ್ಷಕರ ಭವನ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆದರೂ ಚಿಂತೆ ಇಲ್ಲ ನಮಗೆ ಅಂತ ಒಂದು ಶಿಕ್ಷಕರ ಭವನ ಬೇಕು ಅನ್ನೋದು ಶಿಕ್ಷಕರ ಕನಸು.

ನಗರ ಹೊರವಲಯ ಮಹಾವೀರ್ ಜೈನ್ ಆಸ್ಪತ್ರೆ ಸಮೀಪವಿರುವ ತಗ್ಗು ಪ್ರದೇಶವನ್ನು ಸಮತಟ್ಟು ಮಾಡಿ ನಿರ್ಮಿಸಲು ಹೊರಟಿರುವ ಜಿಲ್ಲಾ ಗುರುಭವನದ ಕಾಮಗಾರಿ 2021-22 ರಿಂದ ಆರಂಭಿಸಿದ್ದರೂ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ನಿರ್ಮಾಣಕ್ಕಾಗಿ ಇಟ್ಟಿದ್ದ ಎರಡೂವರೆ ಕೋಟಿ ಹಣ ಕರಗಿಸಿ ನೆಲಮಾಳಿಗೆಯಷ್ಟೇ ನಿರ್ಮಾಣ ಮಾಡಲಾಗಿದೆ. ಗುರುಭವನದ ಕಥೆ?2020-21 ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ 2021 ರಲ್ಲಿ ನಗರ ಹೊರವಲಯ ಕೈಗಾರಿಕಾ ಪ್ರದೇಶದಲ್ಲಿ ಐದು ಕೋಟಿ ರುಗಳ ವೆಚ್ಚದ ಗುರುಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲಿಂದ ಈವರೆಗೆ ಕೇವಲ ನೆಲಮಹಡಿಯ ಒಳಾವರಣ ಪೂರ್ಣಗೊಳಿಸಿ ಮೊದಲ ಮಹಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಸಭಾಂಗಣಕ್ಕೆ ಅರ್ಧಂಬರ್ಧ ಕಾಲಂಗಳನ್ನು ಹಾಕಿದ್ದಾರೆ. ಇಷ್ಟಕ್ಕೆ 2 ಕೋಟಿ 50 ಲಕ್ಷ ಖರ್ಚು ಮಾಡಲಾಗಿದೆ. ಉಳಿದ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ಸ್ಥಗಿತವಾಗಿ ಸುಮಾರು 3 ವರ್ಷಗಳೇ ಕಳೆದಿವೆ. ಜಿಲ್ಲೆಯಲ್ಲಿ ಈವರೆಗೆ ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯನ್ನು ಅವರಿವರ ಆಸರೆಯಲ್ಲಿ ಪರಾವಂಲಂಬಿಗಳಾಗಿಯೇ ಆಚರಿಸುತ್ತಾ ಬಂದಿದ್ದಾರೆ. ನಿಗದಿತ ಅವಧಿಯಲ್ಲಿ ಗುರುಭವನದ ಕಾಮಗಾರಿ ಮುಗಿದಿದ್ದರೆ 2025 ರ ಶಿಕ್ಷಕರ ದಿನಾಚರಣೆಯನ್ನು ಸ್ವಂತ ಕಟ್ಟಡದಲ್ಲಿಯೇ ಆಚರಿಸಬಹುದಿತ್ತು. ಗುರುದಕ್ಷಿಣೆ ಕೊಡುವರೆ? ಶಾಸಕ ಪ್ರದೀಪ್ ಈಶ್ವರ್ ತಾನು ನಂಬಿರುವ ಎರಡು ದೇಗುಲಗಳೆಂದರೆ ಒಂದು ಸರ್ಕಾರಿ ಶಾಲೆಗಳು, ಮತ್ತೊಂದು ಸರ್ಕಾರಿ ಆಸ್ಪತ್ರೆಗಳು ಎನ್ನುತ್ತಾರೆ. ಇದು ನಿಜವೇ ಆಗಿದ್ದಲ್ಲಿ ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುರುಭವನದ ಕಾಮಗಾರಿಗೆ ಮರುಚಾಲನೆ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಸಹ ಸರ್ಕಾರದಿಂದ ಅನುದಾನ ಕೊಡಿಸಲು ಮುಂದಾಗಬೇಕು. ಆಗ ಮಾತ್ರವೇ ತಮ್ಮ ಮಾತಿಗೆ ಬೆಲೆಯಿರಲಿದೆ ಎನ್ನುವುದು ಶಿಕ್ಷಕ ವರ್ಗದ ಒತ್ತಾಯ.ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ಜಿಲ್ಲಾಕೇಂದ್ರದಲ್ಲಿ ಸುಸಜ್ಜಿತವಾದ ಗುರುಭವನ ನಿರ್ಮಿಸಲು ಅನುದಾನ ನೀಡುವಂತೆ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ. ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಹಣ ಬಿಡುಗಡೆಯಾದರೆ ಶಿಕ್ಷಕರ ದಶಕಗಳ ಕನಸು ನನಸಾಗಲಿದೆ ಎಂದರು..