ಜನರ ಪ್ರೀತಿ, ವಾತ್ಸಲ್ಯದಿಂದಲೇ ತೂಗುಸೇತುವೆ ನಿರ್ಮಾಣ: ಭಾರದ್ವಾಜ್‌

| Published : Dec 19 2024, 12:31 AM IST

ಜನರ ಪ್ರೀತಿ, ವಾತ್ಸಲ್ಯದಿಂದಲೇ ತೂಗುಸೇತುವೆ ನಿರ್ಮಾಣ: ಭಾರದ್ವಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಗಿರೀಶ್‌ ಭಾರದ್ವಾಜ್‌, ತಮ್ಮ ಸುದೀರ್ಘ 40 ವರ್ಷಗಳ ವೃತ್ತಿ ಜೀವನ- ಸಾಧನೆಗಳನ್ನು ಮೆಲುಕು ಹಾಕಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಹಲವು ಸವಾಲುಗಳ ನಡುವೆಯೂ ಜನರ ಪ್ರೀತಿ, ವಾತ್ಸಲ್ಯದಿಂದಾಗಿ ಸುಮಾರು 150ರಷ್ಟು ತೂಗು ಸೇತುವೆಗಳನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ‘ಬ್ರಿಡ್ಜ್‌ ಮ್ಯಾನ್‌ ಆಫ್‌ ಇಂಡಿಯಾ’ ಎಂದೇ ಖ್ಯಾತರಾಗಿರುವ ಗಿರೀಶ್ ಭಾರದ್ವಾಜ್ ಹೇಳಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಸುದೀರ್ಘ 40 ವರ್ಷಗಳ ವೃತ್ತಿ ಜೀವನ- ಸಾಧನೆಗಳನ್ನು ಮೆಲುಕು ಹಾಕಿದರು.

ತನ್ನ ಹುಟ್ಟೂರು ಸುಳ್ಯದ ಅರಂಬೂರು ಗ್ರಾಮದ ಮುಗ್ಧ ಜನರಂತೆ ನಾನೂ ಇದ್ದೆ. ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವೀಧರನಾದರೂ ಬಲವಂತವಾಗಿ ‘ಸಿವಿಲ್‌ ಎಂಜಿನಿಯರ್’ ಆಗಬೇಕಾಯಿತು. ಎಲ್ಲ ಎಂಜಿನಿಯರ್‌ಗಳು ಒಂದೇ ಮತ್ತು ಅವರೆಲ್ಲರೂ ಸೇತುವೆಗಳನ್ನು ನಿರ್ಮಿಸಬಹುದು ಎಂಬುದನ್ನು ಕಲಿತೆ ಎಂದು ಮಾರ್ಮಿಕವಾಗಿ ಹೇಳಿದರು.

ತೂಗುಸೇತುವೆಗಳನ್ನು ನಿರ್ಮಾಣ ಮಾಡಲು ಆರಂಭಿಸಿದ ಬಳಿಕ ಕರ್ನಾಟಕದ ಹಲವಾರು ಸ್ಥಳಗಳು, ಇತರ ರಾಜ್ಯಗಳಲ್ಲೂ ತೂಗು ಸೇತುವೆಗಳನ್ನು ನಿರ್ಮಿಸಿದ್ದೇನೆ. ಅತ್ಯಂತ ಕುಗ್ರಾಮದ ಹಳ್ಳಿಗಳಲ್ಲಿ ಇಂತಹ ವೆಚ್ಚ- ಪರಿಣಾಮಕಾರಿ ತೂಗು ಸೇತುವೆಗಳು ಆ ಹಳ್ಳಿಗರಿಗೆ ಹೊರ ಪ್ರಪಂಚದ ಸಂಪರ್ಕ ಒದಗಿಸುವ ಜತೆಗೆ ತೀರ ಹಿಂದುಳಿದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾಗಿದೆ, ಇದು ಸಂತಸ ತಂದುಕೊಟ್ಟ ವಿಚಾರ ಎಂದರು.

ಜನರ ಪಾಲಿಗೆ ದೇವರಾದೆ:

ಒಡಿಶಾದಲ್ಲಿ ಕೆಲಸ ಮಾಡುತ್ತಿದ್ದಾಗ ನಕ್ಸಲರ ಮುಖಾಮುಖಿಯೂ ಆಗಿತ್ತು. ಆದರೆ ಅಲ್ಲಿನ ಬಡ ಜನರಿಗೆ ಸಹಾಯ ಮಾಡಬೇಕಾದ ಕಾರಣ ಹಿಂದೆ ಸರಿಯಲಿಲ್ಲ. ಅಲ್ಲೂ ಅನೇಕ ಕಡೆಗಳಲ್ಲಿ ತೂಗು ಸೇತುವೆಗಳನ್ನು ನಿರ್ಮಿಸಿದ್ದು ಜನರಿಗೆ ಉಪಯೋಗವಾಗಿದೆ. ಒಡಿಶಾದ ಒಂದು ಪ್ರದೇಶದಲ್ಲಂತೂ ಸೇತುವೆ ನಿರ್ಮಿಸುವುದು ಅತ್ಯಂತ ಕಷ್ಟದಾಯಕವಾಗಿತ್ತು. ಆ ಹಳ್ಳಿಗರು ದೇವರ ಮೇಲೆ ಭಾರ ಹಾಕಿ ಹೊಳೆ ದಾಟುವ ದುಃಸ್ಥಿತಿಯು ಮನ ಮುಟ್ಟಿತು. ಕೊನೆಗೂ ಎಲ್ಲ ಸವಾಲುಗಳನ್ನು ಮೀರಿ ತೂಗು ಸೇತುವೆ ನಿರ್ಮಿಸಿದೆ. ಇದಾದ ಬಳಿಕ ಗ್ರಾಮಸ್ಥರು ನನ್ನನ್ನು ದೇವರೆಂದು ಪರಿಗಣಿಸುತ್ತಿದ್ದರು, ನಾನು ಹೋದಾಗಲೆಲ್ಲ ಕಾಲಿಗೆ ಬೀಳುತ್ತಿದ್ದರು, ಜನರ ಪ್ರೀತಿ ವಿಶ್ವಾಸ ದೊಡ್ಡದು ಎಂದು ಭಾರದ್ವಾಜ್‌ ಸ್ಮರಿಸಿದರು.

ನನ್ನ ಎಂಜಿನಿಯರಿಂಗ್ ಕೆಲಸದಿಂದ ನಾನು ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರಬಹುದು. ಆದರೆ ಜನರ ಸಂತೋಷದ ಕಣ್ಣೀರು ದೊಡ್ಡ ಪ್ರಶಸ್ತಿ ಎಂದರು.

ಭಾವನಾತ್ಮಕ ಬೆಸುಗೆ:

ನಾನು ನಿರ್ಮಿಸಿದ ಸೇತುವೆಗಳ ಜತೆ ಜನರು ಈಗಲೂ ತೀರ ಭಾವನಾತ್ಮಕ ಸಂಪರ್ಕ ಹೊಂದಿದ್ದಾರೆ. ಅರಂಬೂರು ಗ್ರಾಮದಲ್ಲಿ 40 ವರ್ಷಗಳ ಹಿಂದೆ ಮೊದಲ ತೂಗು ಸೇತುವೆ ನಿರ್ಮಿಸಿದ್ದೆ. ಎರಡು ವರ್ಷಗಳ ಹಿಂದಷ್ಟೇ ಅಲ್ಲಿ ಕಾಂಕ್ರಿಟ್ ಸೇತುವೆ ನಿರ್ಮಿಸಲು ಮುಂದಾದಾಗ ತೂಗುಸೇತುವೆ ತೆಗೆದುಹಾಕಲು ಗ್ರಾಮಸ್ಥರು ಅಧಿಕಾರಿಗಳಿಗೆ ಅವಕಾಶ ನೀಡಲಿಲ್ಲ. ಪ್ರವಾಸಿಗರು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ತೂಗು ಸೇತುವೆ ನೋಡಲು ಬರುತ್ತಿದ್ದಾರೆ ಎಂದರು.

ಕೇರಳದ ಹಳ್ಳಿಯೊಂದರಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ಎರಡು ಪಕ್ಷಗಳ ನಡುವಿನ ರಾಜಕೀಯ ಪೈಪೋಟಿಯನ್ನು ಕೊನೆಗೊಳಿಸಲು ಒಂದು ಸೇತುವೆ ಸಹಾಯ ಮಾಡಿದೆ ಎಂದು ವಿವರಿಸಿದರು. ತಂತ್ರಜ್ಞಾನ ಮುಂದುವರಿದಂತೆ ತೂಗು ಸೇತುವೆಗಳು ಕನಿಷ್ಠ 100 ವರ್ಷ ಬಾಳ್ವಿಕೆ ಬರುವಂತೆ ನಿರ್ಮಿಸಲಾಗಿದೆ ಎಂದರು.

ಮಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಅವರು ಗಿರೀಶ್‌ ಭಾರದ್ವಾಜ್‌ ಅವರನ್ನು ಸನ್ಮಾನಿಸಿದರು. ದಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್‌. ಮತ್ತಿತರರು ಇದ್ದರು.