ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಶಿಂಷಾನದಿಗೆ ಅಡ್ಡಲಾಗಿ ಐದು ಕಡೆ ಹೊಸದಾಗಿ ಚೆಕ್ ಡ್ಯಾಂ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ತಾಲೂಕಿನ ಕಬ್ಬಾರೆ, ನೀಲಕಂಠನಹಳ್ಳಿ ಹಾಗೂ ಕೆ.ಕೋಡಿಹಳ್ಳಿಗಳ ಏತ ನೀರಾವರಿ ಯೋಜನೆಗಳನ್ನು ಮಂಗಳವಾರ ಅಧಿಕಾರಿಗಳೊಂದಿಗೆ ವೀಕ್ಷಿಸಿ, ಸಮರ್ಪಕ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ಶಿಂಷಾನದಿಗೆ ಹಲವು ಕಡೆ ಏತ ನೀರಾವರಿ ಯೋಜನೆ ನಿರ್ಮಾಣ ಮಾಡಿ ಸರಿಯಾಗಿ ಕಾರ್ಯಾರಂಭ ಮಾಡದೇ ನಿರ್ಲಕ್ಷ ಮಾಡಲಾಗಿತ್ತು. ಇದ್ದರಿಂದ ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಪರಿಶೀಲನೆ ನಡೆಸಿದ್ದೇನೆ ಎಂದರು.ಪರಿಶೀಲನೆ ನಂತರ ಮೋಟಾರ್, ಪೈಪ್ ಹಾಗೂ ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳಿರುವುದು ಗೊತ್ತಾಗಿದೆ. ಹೀಗಾಗಿ ಹಳೆ ಯಂತ್ರಗಳನ್ನು ತೆರವುಗೊಳಿಸಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶಿಂಷಾ ನದಿಗೆ ಅಡ್ಡಲಾಗಿ ಹೊಸದಾಗಿ ಐದು ಕಡೆ ಚೆಕ್ ಡ್ಯಾಂ ನಿರ್ಮಿಸಲು ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಇದರಿಂದ ಆತಗೂರು ಹಾಗೂ ಕಸಬಾ ಹೋಬಳಿ ವಿವಿಧ ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚಿಸಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ತಾಲೂಕಿನ ಕೊನೆ ಭಾಗಕ್ಕೆ ಕೆ.ಆರ್.ಎಸ್ ಅಣೆಕಟ್ಟೆಯಿಂದ ಸರಾಗವಾಗಿ ನೀರು ಹರಿಯುವಂತೆ ನಾಲೆಗಳ ಅಭಿವೃದ್ಧಿಗೆ ಸಿಎಂ ಡಿಪಿಆರ್ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಲಿದ್ದಾರೆ ಎಂದರು.
ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ರಘುರಾಮನ್, ಇಇ ಬಾಬಾ ಕೃಷ್ಣಾದೇವ್, ಎಇಇ ಗೋಪಿನಾಥ್, ಎಇ ರವಿ ಜಾವೀದ್, ಸಣ್ಣ ನೀರಾವರಿ ಇಲಾಖೆಯ ಜೆಇಗಳಾದ ಕೋಡಿಗೌಡ, ಕಿರಣ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಗ್ರಾಪಂ ಸದಸ್ಯರಾದ ಪ್ರೀತಂ, ರಾಘವೇಂದ್ರ, ಮಾದೇಶ್, ಹನುಮೇಗೌಡ ಮುಖಂಡರಾದ ರವೀಂದ್ರ ಕುಮಾರ್, ರಾಜು, ಪ್ರದೀಪ್, ಅಪ್ಪೇಗೌಡ, ವೆಂಕಟೇಶ್, ಜಗದೀಶ್, ಶಂಕರ್, ನೀಲಯ್ಯ ಮತ್ತಿತರರು ಇದ್ದರು.ಯಾವುದೇ ತನಿಖೆ ನಡೆದರೂ ಸಿಎಂ ಪರಿಶುದ್ಧರಾಗಿ ಬರುತ್ತಾರೆ: ಕೆ.ಎಂ.ಉದಯ್ಮದ್ದೂರು:
ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇ.ಡಿ ತನಿಖೆಯಲ್ಲದೇ ಬೇರೆ ಯಾವುದೇ ತನಿಖೆ ನಡೆದರೂ ಅದನ್ನು ಎದುರಿಸಿ ಪರಿಶುದ್ಧರಾಗಿ ಹೊರ ಬರುತ್ತಾರೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಇ.ಡಿ ಸಿದ್ದರಾಮಯ್ಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಅವರ ವಿರುದ್ಧ ಇನ್ನೂ ಯಾವುದೇ ತನಿಖೆ ನಡೆಸಿದರೂ ಅದನ್ನು ಎದುರಿಸಿ ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯರ 40 ವರ್ಷಗಳ ರಾಜಕಾರಣದಲ್ಲಿ ಯಾವುದೇ ಆಸ್ತಿ ಅಥವಾ ಹಣ ಸಂಪಾದನೆ ಮಾಡಬೇಕೆಂದು ಬಯಸಿಲ್ಲ. ಅಂತಹ ವ್ಯಕ್ತಿಯ ರಾಜಕೀಯ ಜೀವನಕ್ಕೆ ಕಪ್ಪು ಮಸಿ ಬಳಿಯಬಾರದು ಎಂಬ ಉದ್ದೇಶದಿಂದ ಅವರ ಪತ್ನಿ ಪಾರ್ವತಿ ಅವರು ಮೂಡಾದ 14 ನಿವೇಶನಗಳನ್ನು ಹಿಂದಿರುಗಿಸಿದ್ದಾರೆ ವಿನಹಃ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮೇಲೂ ಸಹ ಭ್ರಷ್ಟಾಚಾರದ ಕೆಸರು ಮೆತ್ತಿಕೊಂಡಿದೆ. ಮೊದಲು ಅವರು ಶುದ್ಧವಾಗಿ ಬಂದು ಸಿಎಂ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದರು.