ರಾಜ್ಯದಲ್ಲಿ ನೂರು ಹೊಸ ವಿದ್ಯುತ್ ಉಪಕೇಂದ್ರಗಳ ನಿರ್ಮಾಣ

| Published : Nov 04 2025, 12:00 AM IST

ರಾಜ್ಯದಲ್ಲಿ ನೂರು ಹೊಸ ವಿದ್ಯುತ್ ಉಪಕೇಂದ್ರಗಳ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಾದ್ಯಂತ ವಿದ್ಯುತ್ ಪೂರೈಕೆಯ ಸಾಮರ್ಥ್ಯವನ್ನು ವೃದ್ಧಿಸಲು ನೂರು ಹೊಸ ಉಪಕೇಂದ್ರಗಳ (ಸಬ್‌ಸ್ಟೇಷನ್) ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಈ ಯೋಜನೆಗಳಿಂದ ರೈತರಿಗೆ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯಲಿದೆ. ಪ್ರತಿ ದಿನ ಕನಿಷ್ಠ ಏಳು ಗಂಟೆಗಳ ಕರೆಂಟ್ ಪೂರೈಕೆ ಮಾಡುವ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದರು. ತಾಲೂಕಿನಲ್ಲಿಯೂ ಈ ಯೋಜನೆಯ ಅನುಷ್ಠಾನ ನಡೆಯುತ್ತಿದ್ದು, ಸಾಧ್ಯವಾದಷ್ಟು ಬೇಗ ಕಾರ್ಯಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಾರ್ಜ್ ಭರವಸೆ ನೀಡಿದರು.

ಅರಸೀಕೆರೆ: ರಾಜ್ಯಾದ್ಯಂತ ವಿದ್ಯುತ್ ಪೂರೈಕೆಯ ಸಾಮರ್ಥ್ಯವನ್ನು ವೃದ್ಧಿಸಲು ನೂರು ಹೊಸ ಉಪಕೇಂದ್ರಗಳ (ಸಬ್‌ಸ್ಟೇಷನ್) ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಉತ್ಪಾದನೆಗೆ ಕೊರತೆಯಿಲ್ಲ, ಆದರೆ ವಿತರಣಾ ಮೂಲಸೌಕರ್ಯ ಬಲಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಪಕೇಂದ್ರಗಳ ನಿರ್ಮಾಣ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ವರ್ಷ ರಾಜ್ಯದಲ್ಲಿ 2,400 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆಗಾಗಿ 10ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಪ್ರತಿ ಪರಿಶೀಲನಾ ಸಭೆಯಲ್ಲೂ ಉಪಕೇಂದ್ರ ಸಮಸ್ಯೆ ಮುಖ್ಯವಾಗಿ ಹೊರಹೊಮ್ಮುತ್ತಿದ್ದು, ಈಗ ಅದರ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ ಎಂದರು.ಈ ಯೋಜನೆಗಳಿಂದ ರೈತರಿಗೆ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯಲಿದೆ. ಪ್ರತಿ ದಿನ ಕನಿಷ್ಠ ಏಳು ಗಂಟೆಗಳ ಕರೆಂಟ್ ಪೂರೈಕೆ ಮಾಡುವ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದರು. ತಾಲೂಕಿನಲ್ಲಿಯೂ ಈ ಯೋಜನೆಯ ಅನುಷ್ಠಾನ ನಡೆಯುತ್ತಿದ್ದು, ಸಾಧ್ಯವಾದಷ್ಟು ಬೇಗ ಕಾರ್ಯಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಾರ್ಜ್ ಭರವಸೆ ನೀಡಿದರು.ವಿದ್ಯುತ್ ಕೊರತೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹಿಂದಿನ ಬರಗಾಲದಲ್ಲಿಯೂ ವಿದ್ಯುತ್ ಅಭಾವ ಉಂಟಾಗಲಿಲ್ಲ. ಈ ವರ್ಷವೂ ಬೇಸಿಗೆಯ ವೇಳೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಜಾರ್ಜ್, “ಟನಲ್ ನಿರ್ಮಾಣ ಯೋಜನೆಗೆ ಬಿಜೆಪಿ ನೀಡುತ್ತಿರುವ ವಿರೋಧ ಅಸಂಗತ. ಹಿಂದೆ ಸ್ಟೀಲ್ ಬ್ರಿಡ್ಜ್ ಯೋಜನೆಗೂ ಇದೇ ರೀತಿ ವಿರೋಧ ವ್ಯಕ್ತವಾಗಿತ್ತು. ಆದರೆ ಈಗಲೂ ಆ ಸೇತುವೆ ಪ್ರಯೋಜನಕಾರಿಯಾಗಿದೆ. ಕೆಲವರು ಯಾವುದೇ ಒಳ್ಳೆಯ ಕೆಲಸಕ್ಕೂ ವಿರೋಧಿಸುವುದೇ ತಮ್ಮ ಧ್ಯೇಯವಾಗಿಸಿಕೊಂಡಿದ್ದಾರೆ” ಎಂದು ಟೀಕಿಸಿದರು.ನಾವು ಬೆಂಗಳೂರು ಅಭಿವೃದ್ಧಿ ಇಲಾಖೆಯಲ್ಲಿ ಇದ್ದಾಗ ಸಿಎಂ ಸೂಚನೆಯಂತೆ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೊಂಡೆವು. ಅಲ್ಲಿ ಇಂದು ಗುಂಡಿಗಳು ಇಲ್ಲ. ಈ ವರ್ಷ ಮಳೆಯಿಂದ ಕೆಲವು ಸಮಸ್ಯೆಗಳು ಉಂಟಾಗಿವೆ. ಅದನ್ನು ಸರಿಪಡಿಸಲು ನಿಧಿ ಬಿಡುಗಡೆ ಮಾಡಲಾಗಿದೆ ಎಂದರು. ವಿಪಕ್ಷದ ಆರ್. ಅಶೋಕ್ ನೀಡಿದ "ಟನಲ್ ಕಾಮಗಾರಿ ಬಿಹಾರ ಚುನಾವಣೆಗಾಗಿ” ಎಂಬ ಆರೋಪವನ್ನು ತಿರಸ್ಕರಿಸಿ, “ಹಾಗಾದರೆ ಸಾಕ್ಷ್ಯಗಳನ್ನು ಮಂಡಿಸಲಿ. ಕೇವಲ ಆರೋಪಗಳಿಂದ ಜನರನ್ನು ತಪ್ಪುದಾರಿಗೆಳೆಯಲು ಸಾಧ್ಯವಿಲ್ಲ,” ಎಂದು ಜಾರ್ಜ್ ತಿರುಗೇಟು ನೀಡಿದರು.