ಮುಗಳಿಯಲ್ಲಿ ₹1.60 ಕೋಟಿ ವೆಚ್ಚದಲ್ಲಿ ಶಾಲೆ ಕೊಠಡಿ ನಿರ್ಮಾಣ

| Published : Mar 14 2024, 02:04 AM IST

ಮುಗಳಿಯಲ್ಲಿ ₹1.60 ಕೋಟಿ ವೆಚ್ಚದಲ್ಲಿ ಶಾಲೆ ಕೊಠಡಿ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಶಿಕ್ಷಣದಡಿ ಪ್ರತಿ ಮಗುವಿಗೆ ಶಿಕ್ಷಣ ಕಲ್ಪಿಸಬೇಕು. ಈ ದಿಸೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸುವಲ್ಲಿ ಜವಾಬ್ದಾರಿ ವಹಿಸಬೇಕು

ರೋಣ: ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಸದುದ್ದೇಶದಿಂದ ಸರ್ಕಾರ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಸೂಕ್ತ ಅನುದಾನ ಬಿಡುಗಡೆ ಮಾಡುತ್ತಿದ್ದು, ಈ ದಿಸೆಯಲ್ಲಿ ಮುಗಳಿ ಗ್ರಾಮದಲ್ಲಿ ₹ 1.60 ಕೋಟಿ ವೆಚ್ಚದಲ್ಲಿ ಸರ್ಕಾರಿ ಪ್ರೌಢ ಶಾಲೆಗೆ 10 ನೂತನ ಕೊಠಡಿಗಳ ನಿರ್ಮಾಣ ಮಾಡಲಾಗುವುದು ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಬುಧವಾರ ತಾಲೂಕಿನ ಮುಗಳಿ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಹಾಗೂ ನಬಾರ್ಡ ಯೋಜನೆಯಡಿ ₹1.60 ಕೋಟಿ ವೆಚ್ವದಲ್ಲಿ ನೂತನ 10 ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾರ್ವಜನಿಕ ಶಿಕ್ಷಣದಡಿ ಪ್ರತಿ ಮಗುವಿಗೆ ಶಿಕ್ಷಣ ಕಲ್ಪಿಸಬೇಕು. ಈ ದಿಸೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸುವಲ್ಲಿ ಜವಾಬ್ದಾರಿ ವಹಿಸಬೇಕು. ಶಿಕ್ಷಣದಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುವದರ ಜತೆಗೆ ಸಮಾಜದ ಉತ್ತಮ ಪ್ರಜೆಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಮುಗಳಿ ಗ್ರಾಮದ ವಿದ್ಯಾರ್ಜನೆಗೆ ಅನುಕೂಲವಾಗುವಲ್ಲಿ ₹1.60 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ,‌ ಕ್ರೀಡಾ ಕೋಠಡಿ, 4 ತರಗತಿ ಕೊಠಡಿ ಸೇರಿ ಒಟ್ಟು 10 ಕೊಠಡಿ ನಿರ್ಮಿಸಲಾಗುವದು. ಕೊಠಡಿಗಳು ಗುಣಮಟ್ಟದ ಕಾಮಗಾರಿ ಹೊಂದುವಲ್ಲಿ ಗುತ್ತಿಗೆದಾರರು ನೋಡಿಕೊಳ್ಳಬೇಕು ಎಂದರು.

ಮುಗಳಿ ಗ್ರಾಮದ ಕಾಳಿಕಾದೇವಿ ದೇವಸ್ಥಾನ ಆವರಣದ ಸುತ್ತಲಿನ ರಸ್ತೆ ಅಭಿವೃದ್ಧಿಗೆ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು. ಗ್ರಾಮದಲ್ಲಿನ ದುರ್ಗಾದೇವಿ ದೇವಸ್ಥಾನ ದುರಸ್ತಿ, ಅಂಬೇಡ್ಕರ್ ಭವನ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ಮುಗಳಿ ಗ್ರಾಮದಿಂದ ಇಟಗಿ, ಕೊತಬಾಳ, ರೋಣ ರಸ್ತೆಗಳ ಅಭಿವೃದ್ಧಿಪಡಿಸಲಾಗುವುದು. 5 ಗ್ಯಾರಂಟಿ ಯೋಜನೆ ಯಶಸ್ವಿಯಾಗಿದ್ದು, ಆದಾಗ್ಯೂ ಯೋಜನೆ ಲಾಭದಿಂದ ವಂಚಿತರಾದವರನ್ನು ಗುರುತಿಸಿ ಅವರಿಗೂ ಯೋಜನೆ ಲಾಭ ಸಿಗುವಂತಾಗಲು ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಯೋಜನೆ ವಂಚಿತರು ಸಮಿತಿ ಮೂಲಕ ಫಲಾನುಭವಿಗಳಾಗಬೇಕು. 10 ತಿಂಗಳಲ್ಲಿ ₹ 36 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದರು.

ಡಿಡಿಪಿಐ ಎಂ.ಎ. ರಡ್ಟೇರ್ ಮಾತನಾಡಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅನುದಾನದಡಿ ಗದಗ ಜಿಲ್ಲೆಯಲ್ಲಿ 25 ಶಾಲೆಗಳು ಮಂಜೂರಾಗಿದ್ದು, ಈಗಾಗಲೇ 24 ಶಾಲೆಗಳಿಗೆ ಸುಸಜ್ಜಿತ ಕೊಠಡಿಗಳೊಂದಿಗೆ ನಿರ್ಮಾಗೊಂಡಿವೆ. ಇದರಲ್ಲಿ ಮುಗಳಿ ಗ್ರಾಮದಲ್ಲಿ ಜಾಗೆ ತೊಂದರೆಯಿಂದ ಶಾಲಾ ಕೊಠಡಿ ನಿರ್ಮಾಣ ನನೆಗುದಿಗೆ ಬಿದ್ದಿದ್ದು, ತಮ್ಮ ಗ್ರಾಮದ ಮಕ್ಕಳಿಗೆ ಶಿಕ್ಷಣ ಸಿಗುವಂತಾಗಬೇಕು ಎಂಬ ಮಹತ್ತರ ಉದ್ದೇಶದಿಂದ ಭೂದಾನಿಗಳಾದ ಗುರುಬಸಮ್ಮ ಹಿರೇಮಠ 1ಎಕರೆ ಜಮೀನನನ್ನು ಶಾಲೆ ಕೊಠಡಿ ನಿರ್ಮಾಣಕ್ಕೆ ದಾನವಾಗಿ ಕೊಟ್ಟಿದ್ದು ಶ್ಲಾಘನೀಯವಾಗಿದೆ ಎಂದರು.

ಈ ವೇಳೆ ಭೂದಾನಿ ಗುರುಬಸಮ್ಮ ಹಿರೇಮಠ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಭೀಮವ್ವ ಗುಳಗುಳಿ, ಬಿಇಒ ರುದ್ರಪ್ಪ ಹುರಳಿ, ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎ. ಫಣಿಬಂಧ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಕವಾಸ್ತ, ಸಣ್ಣಪ್ಪ ಕಡದಳ್ಳಿ, ಗ್ರಾಪಂ ಪಿಡಿಒ ಬಿ.ಎಸ್. ದಳವಾಯಿ, ಬಸನಗೌಡ ಉಸಲಕೊಪ್ಪ, ಪವಾಡಶೆಟ್ಟಿ ಐಹೊಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ನಿವೃತ್ತ ದೈಹಿಕ ಶಿಕ್ಷಕ ಎಸ್.ಎಸ್. ತಳ್ಳಿಹಾಳ ನಿರೂಪಿಸಿದರು. ಫಕೀರಪ್ಪ ಗುಳಗುಳಿ ಸ್ವಾಗತಿಸಿ, ವಂದಿಸಿದರು.