ಟಿ.ನರಸೀಪುರ ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ತೀವ್ರ ತೆರನಾದ ಪ್ರತಿಭಟನೆಯೊಂದಿಗೆ ತಿ.ನರಸೀಪುರ ಬಂದ್ ಮಾಡಲು ಚಿಂತನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ತೀವ್ರ ತೆರನಾದ ಪ್ರತಿಭಟನೆಯೊಂದಿಗೆ ತಿ.ನರಸೀಪುರ ಬಂದ್ ಮಾಡಲು ಚಿಂತನೆ ನಡೆದಿದೆ.

ಪಟ್ಟಣದ ಕೆಎಸ್ಐಸಿ ಆವರಣದಲ್ಲಿ 6 ಕೋಟಿ ರು. ಗಳ ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲು ಕಂದಾಯ ಇಲಾಖೆ ಭೂಮಿಯನ್ನು ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡುತ್ತಿದ್ದಂತೆ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡದಂತೆ ಕಾರ್ಮಿಕರು, ಪರಿಸರವಾದಿಗಳು ಸೇರಿದಂತೆ ಹಲವಾರು ಸಂಘಟನೆಗಳು ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿವೆ.

ಕಳೆದ ನಾಲ್ಕು ದಿನಗಳಿಂದ ಫ್ಯಾಕ್ಟರಿಯಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳದೇ ಆವರಣದಲ್ಲೇ ಮೌನ ಪ್ರತಿಭಟನೆ ಮಾಡುತ್ತಿದ್ದು, ನೂಲು ತೆಗೆಯುವ ಘಟಕ ಸ್ಥಗಿತಗೊಂಡಿದೆ.

ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾ ಇಲಾಖೆಗೆ ಹಸ್ತಾಂತರವಾಗಿರುವ 5 ಎಕರೆ ಭೂಮಿಯಲ್ಲಿ 500ಕ್ಕೂ ಹೆಚ್ಚು ಬೆಲೆ ಬಾಳುವ ಮರಗಳು, ಪ್ರಾಣಿ ಪಕ್ಷಿಗಳು ವಾಸವಾಗಿದ್ದು, ಕ್ರೀಡಾಂಗಣ ನಿರ್ಮಿಸಲು ಮರಗಳನ್ನು ಕಡಿಯುವುದರಿಂದ ಪರಿಸರಕ್ಕೆ ಹಾನಿ ಉಂಟಾಗುವ ಜೊತೆಗೆ ಬಾಯ್ಲರ್ ಶಾಖದಲ್ಲಿ ಕೆಲಸ ಮಾಡಿ ಬಂದ ಕಾರ್ಮಿಕರಿಗೆ ತಣ್ಣನೆಯ ಗಾಳಿ ಇಲ್ಲದಂತಾಗುತ್ತದೆ. ಹಾಗಾಗಿ ನೂರಾರು ಕಾರ್ಮಿಕರ ಭವಿಷ್ಯ ಬೀದಿಗೆ ಬೀಳುತ್ತದೆ, ಹಾಗಾಗಿ ಕ್ರೀಡಾಂಗಣ ನಿರ್ಮಿಸಲು ಗುರುತಿಸುವ ಜಾಗ ಸೂಕ್ತವಾಗಿಲ್ಲವಾದ್ದರಿಂದ ಈ ಜಾಗವನ್ನು ಕೈ ಬಿಟ್ಟು ಬೇರೆಡೆ ಜಾಗ ಗುರುತಿಸಿ ಕ್ರೀಡಾಂಗಣ ನಿರ್ಮಿಸಲಿ ಎಂದು ಪರಿಸರವಾದಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ನಡುವೆ ಇಂದು ಮೈಸೂರು ಹಾಗೂ ಚನ್ನಪಟ್ಟಣ ಸಿಲ್ಕ್ ಫಿಲೇಚರ್ ಕಾರ್ಖಾನೆಯ ಕಾರ್ಮಿಕರು ಕಾರ್ಖಾನೆ ಆವರಣದಲ್ಲಿ ಕೆಲಸ ಸ್ಥಗಿತಗೊಳಿಸಿ ಧರಣಿ ಕುಳಿತಿರುವ ಇಲ್ಲಿನ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿ, ಧರಣಿಯಲ್ಲಿ ಪಾಲ್ಗೊಂಡರು.

ಮತ್ತೊಂದೆಡೆ ಕರ್ನಾಟಕ ಪರಿಸರ ಬಳಗದ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಸಹ ಫ್ಯಾಕ್ಟರಿ ಕಾರ್ಮಿಕರ ಬೆಂಬಲಕ್ಕೆ ಆಗಮಿಸಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದು ಬೇಡ, ಕಾರ್ಮಿಕರೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಕಾರ್ಮಿಕರ ಬದುಕು ಕಿತ್ತುಕೊಳ್ಳಲು ಹೊರಟಿರುವ ದುಷ್ಟಶಕ್ತಿಗಳ ವಿರುದ್ಧ ಹೋರಾಟ ಮಾಡುವಂತೆ ಕರೆ ನೀಡಿದರು.

ಟಿ. ನರಸೀಪುರ ಬಂದ್ ಗೆ ಕರೆ:

ಕೆಎಸ್ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಮೂಲಕ ಉದ್ಯಮವನ್ನೇ ಮುಚ್ಚಲು ಹೊರಟಿರುವ ಸರ್ಕಾರದ ಗಮನ ಸೆಳೆಯಲು ಕಾರ್ಮಿಕರೆಲ್ಲರೂ ಸಭೆ ಸೇರಿ ತಿ.ನರಸೀಪುರ ಪಟ್ಟಣದ ಜನತೆಯ ಮನವೊಲಿಸಿ ಟಿ. ನರಸೀಪುರ ಬಂದ್ ಮಾಡುವ ಕೆಲಸ ಮಾಡಬೇಕಿದೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಸಲಹೆ ನೀಡಿದರು. ಕಾರ್ಮಿಕರಿಗೆ ಬೇಕಾದ ಎಲ್ಲ ಸಹಕಾರವನ್ನು ನೀಡಲು ತಾವು ಸಿದ್ದರಿದ್ದು,ಎಲ್ಲರೂ ಸೇರಿ ರೇಷ್ಮೆ ಉದ್ಯಮವನ್ನು ಉಳಿಸಿಕೊಳ್ಳೋಣ ಎಂದು ಕರೆ ನೀಡಿದರು.

ಕಾರ್ಮಿಕರಿಗೆ ವ್ಯಾಪಕ ಬೆಂಬಲ:

ಕಳೆದ ಮೂರು ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಕ್ರೀಡಾಂಗಣ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸಿ ಆವರಣದಲ್ಲಿ ಅಡುಗೆ ಮಾಡಿ ಅಲ್ಲೇ ಊಟ ಮಾಡುತ್ತಿರುವ ಕಾರ್ಮಿಕರ ಬೆಂಬಲಕ್ಕೆ ಅನೇಕ ರಾಜಕೀಯ ಮುಖಂಡರು, ಪರಿಸರವಾದಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಕೆಎಸ್ ಐಸಿ ಗೆ ಆಗಮಿಸಿ ಕಾರ್ಮಿಕರಿಗೆ ಬೆಂಬಲ ನೀಡಿದ್ದ ಪ್ರತಾಪ್ ಸಿಂಹ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಕಾರ್ಮಿಕರ ಹೋರಾಟದಲ್ಲಿ ಕೊನೆವರೆಗೂ ಇರುವ ಭರವಸೆ ನೀಡಿ, ಕ್ರೀಡಾಂಗಣ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಕಾರ್ಮಿಕರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿ ಹೋಗಿದ್ದರು. ಪುರಸಭೆ ಮಾಜಿ ಸದಸ್ಯ ಅರ್ಜುನ್ ರಮೇಶ್, ಡಾ. ರೇವಣ್ಣ, ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್ ಸೇರಿದಂತೆ ಅನೇಕ ಮುಖಂಡರು ಕಾರ್ಮಿಕರಿಗೆ ಬೆಂಬಲ ಸೂಚಿಸಿದ್ದಾರೆ.

ಆಮರಣಾಂತ ಉಪವಾಸ:

ಮತ್ತೊಂದೆಡೆ ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ ನಿರ್ಮಾಣ ಮಾಡಬೇಕೆಂದಿರುವ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಕಾರ್ಖಾನೆ ಮುಂಭಾಗದ ಗೇಟ್ ಬಳಿ ಆಮರಣಾಂತ ಉಪವಾಸ ಆರಂಭಿಸಿದರು.

ಪರಿಸರ ಬಳಗದ ರಾಜ್ಯ ಕಾರ್ಯದರ್ಶಿ ಪರಶುರಾಮೇಗೌಡ, ಪರಿಸರ ಬಳಗ ಮತ್ತು ಗ್ರಾಹಕ ಪರಿಷತ್ತಿನ ಕಾರ್ಯದರ್ಶಿ ಪ್ರಭಾ ನಂದೀಶ್, ಶೋಭಾ ಶಿವಕುಮಾರ್, ಸುಶೀಲ, ಸುಗುಣ, ಗಾಯತ್ರಿ, ಗಂಠಯ್ಯ, ಅಕ್ಬರ್, ಶೈಲಜೇಶ್, ಗುರುಸ್ವಾಮಿ, ಭಾನು ಪ್ರಶಾಂತ್, ಮಂಜುಳಾ, ಡಾ. ಮಲ್ಲಿಕಾರ್ಜುನ ಸ್ವಾಮಿ, ತಾಪಂ ಮಾಜಿ ಸದಸ್ಯ ಬಸವರಾಜು ಇದ್ದರು.