ಪಟ್ಟಂದೂರು ಅಗ್ರಹಾರ ಮೆಟ್ರೋ, ಐಟಿ ಕ್ಷೇತ್ರದ ಮುಖ್ಯ ಕಚೇರಿಗಳನ್ನು ಹೊಂದಿರುವ ಐಟಿಪಿಎಲ್‌ಗೆ ವಾಕ್‌ವೇ ನಿರ್ಮಾಣ

| Published : Sep 05 2024, 02:18 AM IST / Updated: Sep 05 2024, 08:52 AM IST

ಪಟ್ಟಂದೂರು ಅಗ್ರಹಾರ ಮೆಟ್ರೋ, ಐಟಿ ಕ್ಷೇತ್ರದ ಮುಖ್ಯ ಕಚೇರಿಗಳನ್ನು ಹೊಂದಿರುವ ಐಟಿಪಿಎಲ್‌ಗೆ ವಾಕ್‌ವೇ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಐಟಿ ಕ್ಷೇತ್ರದ ಮುಖ್ಯ ಕಚೇರಿಗಳನ್ನು ಹೊಂದಿರುವ ಐಟಿಪಿಎಲ್‌ಗೆ ಮೆಟ್ರೋ ನಿಲ್ದಾಣದಿಂದ ವಾಕ್‌ವೇ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

 ಬೆಂಗಳೂರು :  ನಮ್ಮ ಮೆಟ್ರೋ ಪಟ್ಟಂದೂರು ಅಗ್ರಹಾರ ನಿಲ್ದಾಣದಿಂದ ಮಾಹಿತಿ ತಂತ್ರಜ್ಞಾನ ಪಾರ್ಕ್ (ಐಟಿಪಿಎಲ್) ಕ್ಯಾಂಪಸ್‌ಗೆ ನೇರವಾಗಿ ಎತ್ತರಿಸಿದ ಪಾದಚಾರಿ ಮಾರ್ಗದ ಸಂಪರ್ಕ ಕಲ್ಪಿಸುವ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ಹಾಗೂ ಐಟಿಪಿಎಲ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ವಾಕ್‌ ವೇ ಯಿಂದ ಪ್ರತಿದಿನ ಸುಮಾರು 50 ಸಾವಿರ ಉದ್ಯೋಗಿಗಳಿಗೆ ಅನುಕೂಲ ಆಗಲಿದೆ. 30 ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದ್ದು, ವಾಕ್‌ವೇ ನಿರ್ಮಾಣಕ್ಕೆ ಐಟಿಪಿಎಲ್ ₹10 ಕೋಟಿ ನೀಡುತ್ತಿದೆ. ಇದು ಮೆಟ್ರೋ ಎರಡನೇ ಹಂತದ ವಿಸ್ತರಿಸಿದ ಮಾರ್ಗ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ನಡುವಿನ ಮೊದಲ ಒಪ್ಪಂದವಾಗಿದೆ. 2025ರ ವೇಳೆಗೆ ಕ್ಯಾಂಪಸ್‌ ಉದ್ಯೋಗಿಗಳ ಸಂಖ್ಯೆ 60 ಸಾವಿರಕ್ಕೆ ಏರಿಕೆಯಾಗಲಿದ್ದು, ರಸ್ತೆ ದಾಟುವ ಸಮಸ್ಯೆ ಇಲ್ಲದೆ, ನೇರವಾಗಿ ಪಟ್ಟಂದೂರು ನಿಲ್ದಾಣದ ಕಾನ್‌ಕಾರ್ಸ್‌ ನಿಂದ ಐಟಿಪಿಎಲ್‌ಗೆ ಪ್ರವೇಶಿಸಬಹುದು.

ಬಿಎಂಆರ್‌ಸಿಎಲ್ ಪರವಾಗಿ ಕಾರ್ಯನಿರ್ವಹಣಾ ನಿರ್ದೇಶಕಿ ಕಲ್ಪನಾ ಕಟಾರಿಯಾ ಮತ್ತು ಐಟಿಪಿಎಲ್ ಪರವಾಗಿ ನಗರ ಮುಖ್ಯಸ್ಥ ರವಿಭೂಷಣ್ ವಾಧವಕರ್ ಪರಸ್ಪರ ಸಹಿ ಹಾಕಿದರು. ಬಳಿಕ ಮಾತನಾಡಿದ ಕಲ್ಪನಾ ಕಟಾರಿಯಾ, ‘ಐಟಿಪಿಎಲ್ ಉದ್ಯೋಗಿಗಳಿಗೆ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಮೆಟ್ರೋ ನಿಲ್ದಾಣಗಳಿಗೆ ಹತ್ತಿರದ ಇತರೆ ಕಾರ್ಪೋರೇಟ್ ಕಂಪನಿಗಳು, ತಮ್ಮ ಉದ್ಯೋಗಿಗಳ ಅನುಕೂಲಕ್ಕಾಗಿ ಮೆಟ್ರೋ ಕಾರಿಡಾರ್ ಉದ್ದಕ್ಕೂ ವಿನೂತನ ಸಂಪನ್ಮೂಲ ಅಥವಾ ನೇರ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಬೇಕು’ ಎಂದು ಸಲಹೆ ಮಾಡಿದರು.