ಹಣ್ಣು, ಹೂವು, ಸೊಪ್ಪು, ತರಕಾರಿ ಸೇರಿದಂತೆ ಇನ್ನಿತರೆ ದೈನಂದಿನ ವಸ್ತುಗಳನ್ನು ಮಾರಾಟ ಮಾಡಲು ಸಣ್ಣ ವ್ಯಾಪಾರಸ್ಥರು ಸೂಕ್ತ ಸ್ಥಳವಿಲ್ಲದೆ ಬಹಳ ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರು. ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಹಾಗೂ ಬೀದಿಬದಿ ವ್ಯಾಪಾರಸ್ಥರಿಗೆ ಸುಸಜ್ಜಿತ ಹಾಗೂ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಣ್ಣ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಜೊತೆಗೆ ಗ್ರಾಹಕರಿಗೆ ಸ್ವಚ್ಛ ಪರಿಸರದಲ್ಲಿ ದೈನಂದಿನ ವಸ್ತುಗಳು ಒಂದೇ ಸೂರಿನಡಿ ಸಿಗಬೇಕೆಂಬ ಉದ್ದೇಶದಿಂದ ಸುಸಜ್ಜಿತ ವಂಡರ್ಸ್ ಹಬ್ ಪ್ಲಾಜಾ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ 85 ಲಕ್ಷ ರು. ವೆಚ್ಚದ ವಂಡರ್ಸ್ ಹಬ್ ಪ್ಲಾಜಾ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಹಣ್ಣು, ಹೂವು, ಸೊಪ್ಪು, ತರಕಾರಿ ಸೇರಿದಂತೆ ಇನ್ನಿತರೆ ದೈನಂದಿನ ವಸ್ತುಗಳನ್ನು ಮಾರಾಟ ಮಾಡಲು ಸಣ್ಣ ವ್ಯಾಪಾರಸ್ಥರು ಸೂಕ್ತ ಸ್ಥಳವಿಲ್ಲದೆ ಬಹಳ ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರು. ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಹಾಗೂ ಬೀದಿಬದಿ ವ್ಯಾಪಾರಸ್ಥರಿಗೆ ಸುಸಜ್ಜಿತ ಹಾಗೂ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಈ ಪ್ಲಾಜಾ ನಿರ್ಮಾಣದ ಬಳಿಕ ರಸ್ತೆ ಬದಿ ವ್ಯಾಪಾರಸ್ಥರ ಬಹುದಿನಗಳ ಬೇಡಿಕೆ ಈಡೇರಿದಂತಾಗುತ್ತದೆ. ಪಟ್ಟಣದಲ್ಲಿ ವಾಹನಗಳ ಸುಗಮ ಸಂಚಾರಕ್ಕೂ ಅನುಕೂಲವಾಗಿ ನಗರದ ಸೌಂದರ್ಯವೂ ಹೆಚ್ಚಾಗುತ್ತದೆ. ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಸಮರ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಟಿ.ಮರಿಯಪ್ಪ ವೃತ್ತದ ಬಸ್ ಪ್ರಯಾಣಿಕರ ತಂಗುದಾಣ ಹಿಂಭಾಗದ ನಿರ್ಮಾಣ ಹಂತದಲ್ಲಿರುವ ಹೈಟೆಕ್ ಶೌಚಾಲಯ ಕಟ್ಟಡ ಕಾಮಗಾರಿ ಗುಣಮಟ್ಟ ವೀಕ್ಷಣೆ ಮಾಡಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ನೀಡಬೇಕೆಂದರು.

ನಂತರ ಪಟ್ಟಣದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಎಸ್‌ಬಿಐ ವೃತ್ತದ ಬಳಿ ಪಿಎಲ್‌ಡಿ ಬ್ಯಾಂಕ್‌ನ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವರು ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವೀಣಾ, ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಣ್ಯ ವೆಂಕಟೇಶ್, ಮುಖಂಡ ಎನ್.ನಟರಾಜ್ ಸೇರಿದಂತೆ ಹಲವರು ಇದ್ದರು.