ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಅಗತ್ಯ: ಉಮೇಶ್

| Published : Jul 16 2024, 12:32 AM IST

ಸಾರಾಂಶ

ರಾಜ್ಯದ ಅಭಿವೃದ್ಧಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ರಸ್ತೆ, ಸೇತುವೆ, ರೈಲ್ವೆ, ಬಂದರು, ವಿಮಾನ ನಿಲ್ದಾಣ ಇತ್ಯಾದಿ ನಿರ್ಮಾಣ ಕಾರ್ಯಗಳನ್ನು ಮಾಡುತ್ತಾರೆ. ನಿರ್ಮಾಣ ಕಾರ್ಯದ ವೇಳೆ ಅಪಾಯಕಾರಿ ಹಂತದಲ್ಲಿ ಕೆಲಸಗಳ ನಿರ್ವಹಿಸುವ ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಉಪಾಧ್ಯಕ್ಷ ಕಾಂ.ಉಮೇಶ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯದ ಅಭಿವೃದ್ಧಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ರಸ್ತೆ, ಸೇತುವೆ, ರೈಲ್ವೆ, ಬಂದರು, ವಿಮಾನ ನಿಲ್ದಾಣ ಇತ್ಯಾದಿ ನಿರ್ಮಾಣ ಕಾರ್ಯಗಳನ್ನು ಮಾಡುತ್ತಾರೆ. ನಿರ್ಮಾಣ ಕಾರ್ಯದ ವೇಳೆ ಅಪಾಯಕಾರಿ ಹಂತದಲ್ಲಿ ಕೆಲಸಗಳ ನಿರ್ವಹಿಸುವ ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಉಪಾಧ್ಯಕ್ಷ ಕಾಂ.ಉಮೇಶ್ ಹೇಳಿದರು.

ಸೋಮವಾರ ಪಟ್ಟಣದ ಶಾದಿ ಮಹಲ್‌ನಲ್ಲಿ ಕಟ್ಟಡ ಕಾರ್ಮಿಕರ ಫೆಡರೇಶನ್ ದಾವಣಗೆರೆ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಟ್ಟಡ ನಿರ್ಮಾಣ ವೇಳೆ ಕೆಲವೊಮ್ಮೆ ಸಾವು- ನೋವುಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಬೇಕಾಗಿದೆ. ಈ ಉದ್ದೇಶದಿಂದ ಕಾರ್ಮಿಕ ಸಂಘಟನೆಗಳ ತೀವ್ರ ಹೋರಾಟದಿಂದ 1996 ರಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಕಾನೂನು ಜಾರಿಗೆ ಬಂದಿದೆ. ಇದರ ಭಾಗವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂತು ಎಂದರು.

ಜಿಲ್ಲಾ ಅಧ್ಯಕ್ಷ ಕಾಂ. ಆನಂದರಾಜು ಮಾತನಾಡಿ, ಕಟ್ಟಡ ಕಟ್ಟುವ ಸಾಮಗ್ರಿಗಳ ಮೇಲೆ ಹಾಕುವ ಸೆಸ್‌ನಿಂದ ಸಂಗ್ರಹವಾಗಿರುವ ಸಾವಿರಾರು ಕೋಟಿ ರು. ಕಲ್ಯಾಣ ಮಂಡಳಿಯಲ್ಲಿದೆ. ಅದು ಕಾರ್ಮಿಕರಿಗೆ ಸರಿಯಾಗಿ ತಲುಪುತ್ತಿಲ್ಲ. ಆದ್ದರಿಂದ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳಿಗಾಗಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಕಾರ್ಮಿಕರ ರಕ್ಷಣೆಗಾಗಿ ನಿರಂತರ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.

ಕಾರ್ಮಿಕ ಇಲಾಖೆ ನಿರೀಕ್ಷಕರಾದ ಮುಮ್ತಾಜ್ ಬೇಗಂ ಮಾತನಾಡಿ, 15 ವರ್ಷದಿಂದ 60 ವರ್ಷದವರೆಗಿನ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳಬೇಕು. ಅದಾದ ಮೇಲೆ ಕಾರ್ಮಿಕರ ಮದುವೆಗೆ ಸಹಾಯಧನ, ಅವರ ಮಕ್ಕಳ ಮದುವೆಗೂ ₹60 ಸಾವಿರ ಸಹಾಯಧನ, ಉಚಿತ ವೈದ್ಯಕೀಯ ಸೇವೆ, ಎಲ್‍ಕೆಜಿಯಿಂದ ಮಾಸ್ಟರ್ ಡಿಗ್ರಿವರೆಗೆ ಶೈಕ್ಷಣಿಕ ಸಹಾಯಧನ, ಸ್ವಾಭಾವಿಕವಾಗಿ ಮರಣ ಹೊಂದಿದರೆ ₹75 ಸಾವಿರ ಸಹಾಯಧನ, ಅಪಘಾತದಲ್ಲಿ ಮಡಿದರೆ ₹5 ಲಕ್ಷ ಧನಸಹಾಯ, 60 ವರ್ಷ ತುಂಬಿದವರಿಗೆ ಮಾಸಿಕ ₹3 ಸಾವಿರ ಪೆನ್ಶನ್, ಮಗು ಜನಿಸಿದಾಗ ಹೆರಿಗೆ ಧನಸಹಾಯ ಸಿಗಲಿದೆ. ಈ ಎಲ್ಲವೂ ಸಿಗಬೇಕಾದರೆ ಯೂನಿಯನ್ ಸಂಪರ್ಕ ಹಾಗೂ ಕಾರ್ಮಿಕ ಇಲಾಖೆ ಸಂಪರ್ಕ ಇಟ್ಟುಕೊಂಡು ಸಕಾಲಕ್ಕೆ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಉಪಾಧ್ಯಕ್ಷ ಎ.ಡಿ. ಈಶ್ವರಪ್ಪ, ತಾಲೂಕು ಅಂಗನವಾಡಿ ಸಂಘಟನೆ ಅಧ್ಯಕ್ಷೆ ಲತಾಬಾಯಿ ಮಾತನಾಡಿದರು.

ರೇಣುಕಮ್ಮ ಗಜೇಂದ್ರಪ್ಪ, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಖಜಾಂಚಿ ದಿಡಗೂರು ಚಂದ್ರಪ್ಪ, ಫೆಡರೇಶನ್‌ನ ಜಿಲ್ಲಾ ಖಜಾಂಚಿ ನೇತ್ರಾವತಿ, ತಾಲೂಕು ಕಟ್ಟಡ ಕಾರ್ಮಿಕರ ಮುಖಂಡರಾದ ಇಮ್ರಾನ್, ಟಿ.ಬಿ. ವೃತ್ತದ ಅಫ್ರೋಜ್, ಬಸವರಾಜಪ್ಪ ಮೂಲಿ ಉಪಸ್ಥಿತರಿದ್ದರು.

- - -

ಕೋಟ್‌ ಕೇಂದ್ರ ಸರ್ಕಾರ 1996 ಕಾಯ್ದೆಯನ್ನು ರದ್ದು ಮಾಡಿದ್ದು, ಇದರಿಂದ ಕಲ್ಯಾಣ ಮಂಡಳಿ ಮುಚ್ಚಿ ಹೋಗುವ ಅಪಾಯದಲ್ಲಿದೆ. ಆದ್ದರಿಂದ ನಾವೆಲ್ಲರೂ ಸಂಘಟಿತರಾಗಿ ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗಿದೆ

- ಕಾಂ. ಆನಂದರಾಜು, ಜಿಲ್ಲಾಧ್ಯಕ್ಷ

- - - -15ಎಚ್.ಎಲ್.ಐ4:

ಹೊನ್ನಾಳಿ ಪಟ್ಟಣದ ಶಾದಿ ಮಹಲ್‌ನಲ್ಲಿ ಕಟ್ಟಡ ಕಾರ್ಮಿಕರ ತಾಲೂಕುಮಟ್ಟದ ಸಮಾವೇಶದಲ್ಲಿ ಕಾರ್ಮಿಕ ನಿರೀಕ್ಷಕರಾದ ಮುಮ್ತಾಜ್ ಬೇಗಂ ಮಾತನಾಡಿದರು.