ಹೋರಾಟದ ಫಲವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ

| Published : Jul 24 2025, 01:45 AM IST

ಸಾರಾಂಶ

ಕಟ್ಟಡ ಕಾರ್ಮಿಕರ ಒಳಿತಿಗಾಗಿ ಮೀಸಲಿರಿಸಿದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವಿಧ ಕಿಟ್ ಹಂಚುವ ನೆಪದಲ್ಲಿ ಟೆಂಡರ್ ಕರೆದು ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡುತ್ತಿದ್ದಾರೆ.

ಕೊಪ್ಪಳ:

ಕಟ್ಟಡ ಕಾರ್ಮಿಕರ ಸಂಘಟನೆಗಳ ಹೋರಾಟದ ಪರಿಣಾಮದಿಂದಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತ ಹೇಳಿದರು.

ನಗರದ ಮರ್ದಾನ್-ಎ- ಗೈಬ್ ದರ್ಗಾದ ಆವರಣದಲ್ಲಿ ನಡೆದ ಕೊಪ್ಪಳ ತಾಲೂಕು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಟ್ಟಡ ಕಾರ್ಮಿಕರ ಒಳಿತಿಗಾಗಿ ಮೀಸಲಿರಿಸಿದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವಿಧ ಕಿಟ್ ಹಂಚುವ ನೆಪದಲ್ಲಿ ಟೆಂಡರ್ ಕರೆದು ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡುತ್ತಿದ್ದಾರೆ. ಸಚಿವರ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಸಂಘಟನೆಯು ಹೋರಾಟ ರೂಪಿಸಬೇಕು. ಜತೆಗೆ ಕಲ್ಯಾಣ ಮಂಡಳಿಯ ಹಣವು ಕಟ್ಟಡ ಕಾರ್ಮಿಕರು, ಅವರ ಮಕ್ಕಳು ಮತ್ತು ಮಹಿಳೆಯರ ಒಳಿತಿಗಾಗಿ ಬಳಕೆಯಾಗುವಂತೆ ಎಚ್ಚರ ವಹಿಸಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಕಾರ್ಯಕ್ರಮ ರೂಪಿಸುತ್ತಿರುವುದರಿಂದ ಕಟ್ಟಡ ಕಾರ್ಮಿಕರ ಜೀವನ ಸುಧಾರಿಸಲು ಸಾಧ್ಯವಿಲ್ಲ ಎಂದರು.

ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ್, ಸಂಘದ ಪ್ರಧಾನ ಕಾರ್ಯದರ್ಶಿ ಹಝರತ್ ಅಲಿ ಮುಜಾವರ, ಕೊಪ್ಪಳ ತಾಲೂಕು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ನೂತನ ಅಧ್ಯಕ್ಷ ಶಾಬುದ್ದೀನ್ ಜವಳಗೇರಾ, ಸಂಘದ ಉಪಾಧ್ಯಕ್ಷ ರಾಮಣ್ಣ ಬಾಣಕಾರ್ ಮೇಸ್ತ್ರಿ, ಖಜಾಂಚಿ ಸಿದ್ದಲಿಂಗಪ್ಪ ಪಲ್ಲೇದ ಮೇಸ್ತ್ರಿ, ಹಿರಿಯ ಸಲಹೆಗಾರ ಪಾಶಾ ಮುದಗಲ್ ಮೇಸ್ತ್ರಿ, ಹುಸೇನಪ್ಪ ಗುಡಿ ಮೇಸ್ತ್ರಿ, ಖಾಜಾಸಾಬ್ ಗೌರಿ ಅಂಗಳ ಮೇಸ್ತ್ರಿ ಇದ್ದರು.