ಸಾರಾಂಶ
2008ರಿಂದ ಇಲ್ಲಿ ಹೈಕೋರ್ಟ್ ಪೀಠ ಕಾರ್ಯನಿರ್ವಹಿಸುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಿಗೆ ಧಾರವಾಡ ಜಿಲ್ಲೆಯು ಮಧ್ಯದಲ್ಲಿದ್ದು ಸಂಪರ್ಕ ಸಹಜ ಅನುಕೂಲತೆ ಹೊಂದಿದೆ.
ಧಾರವಾಡ:
ಕರ್ನಾಟಕ ರಾಜ್ಯ ಗ್ರಾಹಕ ವ್ಯವಹಾರ ಪರಿಹಾರ ಆಯೋಗದ ಪೀಠವನ್ನು ಧಾರವಾಡದಲ್ಲಿ ಸ್ಥಾಪಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಕರ್ನಾಟಕ ಭಾಗದ ಗ್ರಾಹಕರ ಅನುಕೂಲಕ್ಕಾಗಿ ಧಾರವಾಡದಲ್ಲಿ ಈ ಪೀಠ ಸ್ಥಾಪಿಸಲು ಸರ್ಕಾರ ಮತ್ತು ರಾಜ್ಯ ಆಯೋಗಕ್ಕೆ ಹಲವು ಬಾರಿ ಮನವಿ ಮಾಡಿದರೂ ಕೂಡ ಬೆಳಗಾವಿಯಲ್ಲಿ ಸ್ಥಾಪನೆ ಪ್ರಕ್ರಿಯೆ ಆರಂಭವಾಗಿದೆ.
2008ರಿಂದ ಇಲ್ಲಿ ಹೈಕೋರ್ಟ್ ಪೀಠ ಕಾರ್ಯನಿರ್ವಹಿಸುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಿಗೆ ಧಾರವಾಡ ಜಿಲ್ಲೆಯು ಮಧ್ಯದಲ್ಲಿದ್ದು ಸಂಪರ್ಕ ಸಹಜ ಅನುಕೂಲತೆ ಹೊಂದಿದೆ. ಹೈಕೋರ್ಟ್‌ನಲ್ಲಿ ವೃತ್ತಿ ಮಾಡುವ ವಕೀಲರು ಹೆಚ್ಚಾಗಿ ಧಾರವಾಡದಲ್ಲೇ ವಾಸವಾಗಿದ್ದಾರೆ. ರಾಜ್ಯ ಗ್ರಾಹಕ ಆಯೋಗದ ಪೀಠ ಧಾರವಾಡದಲ್ಲಿ ಸ್ಥಾಪಿಸಲು ಸೂಕ್ತವಾದ ಕಟ್ಟಡವನ್ನು ಈಗಾಗಲೇ ಧಾರವಾಡ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಆಯೋಗಕ್ಕೆ ಕಟ್ಟಲಾಗಿದೆ. ಈ ಎಲ್ಲ ದೃಷ್ಟಿಯಿಂದಲೂ ಕಟ್ಟಡ ಸುಸಜ್ಜಿತವಾಗಿ ಪೂರ್ಣಗೊಂಡಿದೆ ಮತ್ತು ತಕ್ಷಣ ಪ್ರಾರಂಭಿಸಲು ಲಭ್ಯವಿರುವ ಕಾರಣ ರಾಜ್ಯದ ಈ ಭಾಗದ ಕಕ್ಷಿಗಾರರ ಹಿತಾಸಕ್ತಿ ಸಂರಕ್ಷಣೆಗಾಗಿ ರಾಜ್ಯ ಗ್ರಾಹಕ ಆಯೋಗದ ಪೀಠವನ್ನು ಧಾರವಾಡದಲ್ಲೇ ಸ್ಥಾಪಿಸಬೇಕೆಂದು ಬೆಲ್ಲದ ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.