ಯಲಬುರ್ಗಾ: ಗ್ರಾಹಕರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜೆ. ರಂಗಸ್ವಾಮಿ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯ ಕಂದಾಯ ಭವನದಲ್ಲಿ ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕಾಡಳಿತ, ಅಭಿಯೋಜನಾ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ರಕ್ಷಣಾ ದಿನ ಮತ್ತು ವಿಶ್ವ ಜಲದಿನ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿಯುವುದು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಖರೀದಿದಾರನ ಯೋಗಕ್ಷೇಮದ ದೃಷ್ಟಿಯಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಅರಿಯುವುದು ಸೂಕ್ತ. ಗ್ರಾಹಕರ ರಕ್ಷಣೆ ಸಮಾಜದ ಧ್ವನಿಯಾದಾಗ ಮಾತ್ರ ಗ್ರಾಹಕರ ಹಕ್ಕುಗಳ ರಕ್ಷಣೆ ಸಾಧ್ಯ ಎಂದರು.

ಸಿವಿಲ್ ನ್ಯಾಯಾಧೀಶ ಸಂಜುಕುಮಾರ ಪಚ್ಚೆಪೂರೆ ಮಾತನಾಡಿ, ಪ್ರತಿಯೊಬ್ಬರೂ ಕಾನೂನಿನ ಸಾಮಾನ್ಯ ಜ್ಞಾನ ಅರಿಯಬೇಕು. ಜಗತ್ತು ಒಂದು ಮಾರುಕಟ್ಟೆ ಇದ್ದಂತೆ. ಅದರಲ್ಲಿ ನಾವೆಲ್ಲರೂ ಗ್ರಾಹಕರು. ಯಾವುದೇ ವಸ್ತು ಕೊಂಡುಕೊಳ್ಳುವಾಗ ಅದರ ಗುಣಮಟ್ಟ ನೋಡಬೇಕು. ನೀರು ಮನುಷ್ಯನಿಗೆ ಅತಿ ಅವಶ್ಯಕವಾಗಿದ್ದು, ಮಿತವಾಗಿ ಬಳಸಬೇಕು. ನೀರಿನ ಮಹತ್ವ ತಿಳಿಯಬೇಕು ಎಂದರು.

ತಹಸೀಲ್ದಾರ್ ಪ್ರಕಾಶ ನಾಶಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ಅಸೂಟಿ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ವಕೀಲರಾದ ಎಂ.ಎಸ್. ನಾಯ್ಕರ, ಹಸನ್‌ಸಾಬ್ ನದಾಫ್, ಆಹಾರ ಇಲಾಖೆ ಶಿರಸ್ತೇದಾರ ಮಲ್ಲಿಕಾರ್ಜುನ ಶಾಸ್ತ್ರೀಮಠ, ಹನುಮಗೌಡ, ನ್ಯಾಯಾಲಯ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ, ವಿನಾಯಕ ಇದ್ದರು.