ಕಲುಷಿತ ನೀರು ಸೇವನೆ: ಮೂವರು ಅಸ್ವಸ್ಥ

| Published : Jul 02 2024, 01:43 AM IST

ಸಾರಾಂಶ

ಹುಣಸಗಿ ತಾಲೂಕಿನ ಮಾರನಾಳ ಗ್ರಾಮದ ದಲಿತರ ಕೇರಿಯಲ್ಲಿರುವ ಬೋರವೆಲ್ ಕೆಳಗೆ ಚರಂಡಿ ನೀರು‌ ಹೋಗುತ್ತಿರುವುದು

ಹುಣಸಗಿ ತಾಲೂಕಿನ ಮಾರನಾಳ ಗ್ರಾಮದಲ್ಲಿ ಘಟನೆ । ಬೋರವೆಲ್ ಪಕ್ಕದಲ್ಲಿಯೇ ಚರಂಡಿ । ಗ್ರಾಮಸ್ಥರ ಆಕ್ರೋಶಕನ್ನಡಪ್ರಭ ವಾರ್ತೆ ಹುಣಸಗಿ

ಕಲುಷಿತ ನೀರು ಸೇವನೆಯಿಂದ ಮೂವರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಮಾರನಾಳ ಗ್ರಾಮದಲ್ಲಿ ನಡೆದಿದೆ.

ಮಾರನಾಳ ಗ್ರಾಮದ ದಲಿತ ಕಾಲೋನಿಯ ಮರೆಪ್ಪ (42), ಮಗಳು ಭಾಗಮ್ಮ (19) ವಾಂತಿ-ಬೇಧಿ ಕಾಣಿಸಿಕೊಂಡು ರಾಜನಕೋಳೂರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನನ್ಯ ಶಿವಲಿಂಗ (04) ಎಂಬ ಮಗು ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಕೊಡೇಕಲ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾರನಾಳ ಗ್ರಾಮದ ದಲಿತರ ಕೇರಿಯಲ್ಲಿ ಎರಡು ಬೋರವೆಲ್ ಇದ್ದು, ಈ ಎರಡು ಬೋರವೆಲ್‌ಗಳಲ್ಲಿ ಚರಂಡಿ ಹಾಯ್ದು ಹೋಗಿದ್ದರಿಂದ, ಬೋರವೆಲ್ ನೀರು ಕಲುಷಿತಗೊಂಡು ನಿವಾಸಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬುದು ಜನರ ಆರೋಪ.

ಇಂತಹ ಅವ್ಯವಸ್ಥೆ ಬಗ್ಗೆ ಸ್ಥಳೀಯ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಸ್ಪಂದಿಸದೆ ಇರುವುದು ಇಂತಹ ಘಟನೆಗೆ ಸಾಕ್ಷಿಯಾಗಿದೆ ಎಂದು ದೇವಪ್ಪ ಕಟ್ಟಿಮನಿ, ಮೌನೇಶ ಚಲುವಾದಿ, ಶಿವಲಿಂಗಪ್ಪ ಚಲುವಾದಿ, ಕಾರ್ತಿಕ ಚಲುವಾದಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರನಾಳ ಗ್ರಾಮದ ದಲಿತ ಕೇರಿಯಲ್ಲಿರುವ ಬೋರವೆಲ್‌ನ ಹತ್ತಿರ ಚರಂಡಿ ನೀರು ಹರಿದು ಹೋಗುತ್ತಿದೆ. ಇದರಿಂದ ನೀರು ಕಲುಷಿತಗೊಂಡು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ವಿಷಯದಲ್ಲಿ ನನ್ನ ಗಮನಕ್ಕೆ ಬಂದಿದೆ. ಚರಂಡಿ ನೀರು ಭೂಮಿಯಲ್ಲಿ ಇಂಗದಿರುವ ಹಾಗೆ ಕಾಂಕ್ರೀಟ್ ಹಾಕಿ ಭದ್ರಗೊಳಿಸಲಾಗುತ್ತದೆ ಎಂದು ಮಾರನಾಳ ಗ್ರಾಪಂ ಅಧಿಕಾರಿ ಶಂಕರ ರಾಠೋಡ್ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.