ಸಾರಾಂಶ
ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿಯಿಂದ ವಿವಿಧ ಅಂಗಡಿಗಳ ಮೇಲೆ ದಾಳಿ । 5 ಪ್ರಕರಣ ದಾಖಲು
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ತಂಬಾಕು ಉತ್ಪನ್ನ ಸೇವಿಸಬಾರದು ಹಾಗೂ ಅಂಗಡಿಯವರು ತಂಬಾಕು ಉತ್ಪನ್ನ ಮಾರಾಟ ಮಾಡಬಾರದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಸಲಹೆ ನೀಡಿದರು.
ಬುಧವಾರ ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಕಲ್ಯಾಣಗಳ ಸೇವೆಗಳ ನಿರ್ದೇಶನಾಲಯ ಸೂಚನೆ ಯಂತೆ ಪಟ್ಟಣ ಪಂಚಾಯಿತಿ ಹಾಗೂ ಎನ್.ಆರ್.ಪುರ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ವಾಟರ್ ಟ್ಯಾಂಕ್ ಸರ್ಕಲ್ ಸುತ್ತ ಮುತ್ತಲಿನ ಅಂಗಡಿಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮಾತನಾಡಿದರು. ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಪಾನ್ ಪರಾಗ್, ಗುಟ್ಕಾ ತ್ಯಜಿಸಿ ಆರೋಗ್ಯವಂತ ಜೀವನ ನಡೆಸಬೇಕು ಎಂದು ಕರೆ ನೀಡಿದರು.ಪೊಲೀಸ್ ಕಾನ್ಸಟೇಬಲ್ ಲಕ್ಷಪ್ಪ ಚಿಕ್ಕ ಕೊಪ್ಪ ಮಾತನಾಡಿ, ಪ್ರತಿ ಅಂಗಡಿ ಮುಂದೆ ನಾಮ ಫಲಕ ಹಾಕಬೇಕು.ಅದರಲ್ಲಿ 18 ವರ್ಷದ ಒಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದಿಲ್ಲವೆಂದು ಕಡ್ಡಾಯವಾಗಿ ಬರೆಯಬೇಕು ಎಂದು ಸೂಚಿಸಿದರು. ಅಲ್ಲದೆ ಬಹಿರಂಗವಾಗಿ ತಂಬಾಕು ಉತ್ಪನ್ನ ಪ್ರದರ್ಶನ ಮಾಡುವುದು, ಸೇವಿಸಲು ಉತ್ತೇಜಿಸುವುದು ಹಾಗೂ ಶಾಲೆ 100 ಮೀಟರ್ ಅಂತರದಲ್ಲಿ ಮಾರಾಟ ಮಾಡುವುದು ಅಪರಾಧವಾಗುತ್ತದೆ ಎಂದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ಎಂ.ದರ್ಶನಾಥ ಮಾಹಿತಿ ನೀಡಿ, ನಕಲಿ ತಂಬಾಕು ಉತ್ಪನ್ನಗಳನ್ನು ಕೆಲವು ಭಾಗದಲ್ಲಿ ತಯಾರಿಸುತ್ತಿದ್ದು ಈ ಬಗ್ಗೆ ಅಂಗಡಿ ಮಾಲೀಕರು ಜಾಗೃತಿ ವಹಿಸಬೇಕು.ವಿದ್ಯಾರ್ಥಿಗಳು ತಂಬಾಕು ಉತ್ಪನ್ನವನ್ನು ಮಾರಾಟ ಮಾಡುವುದು, ಖರೀದಿಸುವುದನ್ನು ಸರ್ಕಾರ ನಿಷೇದಿಸಿದೆ. ಮೊದಲು ಅಂಗಡಿ ಮಾಲೀಕರು ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ತಿಳಿದು ಕೊಂಡಿರಬೇಕು ಎಂದರು. ಪಟ್ಟಣ ಪಂಚಾಯಿತಿ ಕಂದಾಯ ನಿರೀಕ್ಷಿಕ ವಿಜಯಕುಮಾರ್ ಇದ್ದರು. ಒಟ್ಟು 5 ಪ್ರಕರಣಗಳನ್ನು ದಾಖಲಿಸಿ ₹1600 ದಂಡ ವಿಧಿಸಲಾಯಿತು.