ಜಾಲಿಕೋಡಿ ಬೀಚಿಗೆ ಬಂದು ಅಪ್ಪಳಿಸಿದ ಕಂಟೈನರ್ ಬೋಟು

| N/A | Published : Jun 18 2025, 04:21 AM IST / Updated: Jun 18 2025, 05:00 PM IST

ಸಾರಾಂಶ

ತಾಲೂಕಿನ ಜಾಲಿಕೋಡಿ ಸಮುದ್ರ ತೀರದಲ್ಲಿ ಮಂಗಳವಾರ ಬೆಳಗಿನ ಜಾವ ಬೃಹತ್ ಕಂಟೈನರ್ ಬೋಟೊಂದು ತೇಲಿಕೊಂಡು ಬಂದು ಬಿದ್ದಿದ್ದು, ಇದು ಹೇಗೆ ಬಂತು ಎನ್ನುವ ಕುರಿತು ಕುತೂಹಲ ಉಂಟಾಗಿದೆ.

ಭಟ್ಕಳ: ತಾಲೂಕಿನ ಜಾಲಿಕೋಡಿ ಸಮುದ್ರ ತೀರದಲ್ಲಿ ಮಂಗಳವಾರ ಬೆಳಗಿನ ಜಾವ ಬೃಹತ್ ಕಂಟೈನರ್ ಬೋಟೊಂದು ತೇಲಿಕೊಂಡು ಬಂದು ಬಿದ್ದಿದ್ದು, ಇದು ಹೇಗೆ ಬಂತು ಎನ್ನುವ ಕುರಿತು ಕುತೂಹಲ ಉಂಟಾಗಿದೆ.

ಮಂಗಳವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಬೃಹತ್ ಗಾತ್ರದ ಈ ಕಂಟೈನರ್ ಸಮುದ್ರದಲ್ಲಿ ತೇಲಿಕೊಂಡು ಬಂದು ಜಾಲಿ ಕೋಡಿ ಸಮುದ್ರದ ದಡದಲ್ಲಿ ಸಿಲುಕಿದೆ. ಜಾಲಿ ಕೋಡಿಯ ತೀರದಲ್ಲಿರುವ ಬಂಡೆಗಲ್ಲಿನಿಂದ ಒಳಗೆ ಬಂದ ಕಾರಣ ಇಲ್ಲಿಂದ ಮುಂದಕ್ಕೆ ತೇಲಿಕೊಂಡು ಬಂದು ದಡದಲ್ಲಿ ಸಿಲುಕಿಕೊಂಡಿದೆ. ಸಂಪೂರ್ಣ ಕಂಟೈನರ್‌ನ್ನು ಲಂಗರ್ ಹಾಕಿ ನಿಲ್ಲಿಸಿದ ರೀತಿಯಲ್ಲಿ ನಿಂತು ಕೊಂಡಿದ್ದು ಎಲ್ಲಿಯೂ ಇದಕ್ಕೆ ಹಾನಿಯಾಗಿಲ್ಲ. ಇದು ಯಾವುದೋ ಹಡಗಿನಿಂದ ಪ್ರತ್ಯೇಕಗೊಂಡು ಸಮುದ್ರದಲ್ಲಿ ತೇಲಿ ಬಂದಿರಬೇಕು ಎಂದು ಊಹಿಸಲಾಗಿದೆ. ನಿಖರ ಕಾರಣ ಮಾತ್ರ ಇನ್ನಷ್ಟೇ ತಿಳಿದು ಬರಬೇಕಿದೆ. ಕಂಟೇನರ್ ಕೊಚಿನ್ ಶಿಪ್‌ಯಾರ್ಡ ಎನ್ನುವ ನಾಮಫಲಕ ಹೊಂದಿದ್ದು, ಇದು ಕೇರಳದಿಂದ ಮುಂಬೈ ಕಡೆಗೆ ಹೋಗುವಾಗ ಗಾಳಿಯ ರಭಸಕ್ಕೆ ಬೇರ್ಪಟ್ಟು ಬಂದಿರುವ ಶಂಕೆ ವ್ಯಕ್ತವಾಗಿದೆ.

ಕಂಟೈನರ್ ವೀಕ್ಷಣೆಗೆ ಜನರು : ಜಾಲಿ ಕೋಡಿ ಸಮುದ್ರ ತೀರಕ್ಕೆ ಕಂಟೈನರ್ ತೇಲಿ ಬಂದು ನಿಂತಿದ್ದನ್ನು ವೀಕ್ಷಿಸಲು ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೂ ತಂಡೋಪತಂಡವಾಗಿ ಜನರು ಬರುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್‌ ಇದ್ದು, ವೀಕ್ಷಿಸಲು ಬರುವ ಜನರನ್ನು ಕಂಟ್ರೋಲ್ ಮಾಡುವುದು ಪೊಲೀಸರಿಗೆ ತಲೆನೋವು ತಂದಿದೆ. ಎಲ್ಲೆಡೆ ಸುದ್ದಿ ತಿಳಿದಿದ್ದರಿಂದ ಕುತೂಹಲದಿಂದ ಜನರು ಜಾಲಿಕೋಡಿ ತೀರಕ್ಕೆ ಆಗಮಿಸುತ್ತಿದ್ದಾರೆ.

ಕಂಟೈನರ್ ಜತೆ ಹಡಗು ಇತ್ತೇ ?: ಸ್ಥಳೀಯ ಮೀನುಗಾರರು ಹೇಳುವ ಪ್ರಕಾರ ಸಮುದ್ರದಲ್ಲಿ ಒಂದು ದೊಡ್ಡ ಹಡಗು ನಿಂತಿದ್ದು, ಈ ಕಂಟೈನರ್ ಜತೆಗೆ ಬಂದಿದೆಯೇ ಎನ್ನುವ ಸಂಶಯಕ್ಕೆ ಕಾರಣವಾಗಿದೆ. ಈ ಕಂಟೈನರ್‌ನ್ನು ದೊಡ್ಡ ಹಡಗಿಗೆ ಕಟ್ಟಿ ಸಾಗಿಸುತ್ತಿರುವಾಗ ಇದು ಬೇರ್ಪಟ್ಟಿದೆಯೇ ಎನ್ನುವ ಶಂಕೆ ವ್ಯಕ್ತವಾಗಿದೆ. ಜಾಲಿಕೋಡಿ ತೀರದಿಂದ ದೂರದಲ್ಲಿ ಇನ್ನೊಂದು ಹಡಗು ಕಾಣಿಸುತ್ತಿದ್ದು ಈ ಕಂಟೈನರ್ ಗೂ ಇದಕ್ಕೂ ಸಂಬಂಧವಿದೆಯೇ ಎನ್ನುವುದು ಗೊತ್ತಾಗಬೇಕಿದೆ. ವಿಪರ್ಯಾಸವೆಂದರೆ ಆ ಹಡಗು ಸಂಚರಿಸದೇ ನಿಂತಲ್ಲಿಯೇ ನಿಂತಿದೆ ಎಂದು ಹೇಳಲಾಗಿದ್ದು, ಈ ಕಂಟೈನರ್ ಗೆ ಸಂಬಂಧಿಸಿದ್ದೇ ಆಗಿರಬೇಕು ಎನ್ನುವ ಶಂಕೆ ಮೂಡಿದೆ.

ಅಧಿಕಾರಿಗಳ ಭೇಟಿ: ಕರಾವಳಿ ಕಾವಲು ಪಡೆಯ ಪೊಲೀಸರು ಸುದ್ದಿ ತಿಳಿದ ತಕ್ಷಣ ಇನ್ಸಪೆಕ್ಟರ್ ಕುಸುಮಾಧರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೊಚಿನ್ ಶಿಪ್ ಯಾರ್ಡನ್ನು ಸಂಪರ್ಕ ಮಾಡಿದ್ದಾರೆನ್ನಲಾಗಿದೆ. ಕೊಚಿನ್ ಶಿಪ್‌ಯಾರ್ಡನ ಮೂವರು ಸಿಬ್ಬಂದಿಗಳು ಮಂಗಳವಾರ ಮಧ್ಯಾಹ್ನ ಜಾಲಿ ಕೋಡಿ ತೀರಕ್ಕೆ ಆಗಮಿಸಿ ದಡಕ್ಕೆ ಬಂದಿರುವ ಕಂಟೈನರ್ ತಮ್ಮ ಕಂಪೆನಿಗೆ ಸೇರಿದ್ದು ಎಂದು ದೃಢೀಕರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 

ಕೇರಳ ಶಿಪ್‌ಯಾರ್ಡಿನಿಂದ ಮುಂಬೈಗೆ ಹೋಗುವ ಮಾರ್ಗದಲ್ಲಿ ಶಿಪ್‌ನಿಂದ ಬೇರ್ಪಟ್ಟ ಕಂಟೈನರ್ ತೀವ್ರ ಗಾಳಿಯಿರುವುದರಿಂದ ದಡಕ್ಕೆ ಬಂದು ಅಪ್ಪಳಿಸಿದ ಎನ್ನಲಾಗಿದೆ. ಕರಾವಳಿಯ ತೀರಕ್ಕೆ ಬಂದಿರುವ ಕಂಟೈನರ್‌ನ್ನು ಮತ್ತೆ ಪುನಃ ಹೊರಕ್ಕೆ ಸಾಗಿಸುವುದು ತೀರಾ ಕಷ್ಟಕರ ಎನ್ನಲಾಗುತ್ತಿದ್ದು ಹಡಗು ಕಂಪೆನಿ ಏನು ಮಾಡಲಿದೆ ಎನ್ನುವ ಕುತೂಹಲ ಉಂಟಾಗಿದೆ. ಮಂಗಳವಾರ ರಾತ್ರಿ ವರೆಗೂ ಜಾಲಿಕೋಡಿಗೆ ಕಂಟೈನರ್ ವೀಕ್ಷಿಸಲು ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ಜಮಾಯಿಸಿರುವ ಬಗ್ಗೆ ವರದಿಯಾಗಿದೆ.

Read more Articles on