ಸಾರಾಂಶ
-ಕೊಪ್ಪ ವರ್ತಕರ ಸಂಘದ ಅಧ್ಯಕ್ಷ ಕೆ.ಎನ್ ಪ್ರಸನ್ನ ಶೆಟ್ಟಿ ಪಟ್ಟಣ ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ
-----ಕನ್ನಡಪ್ರಭ ವಾರ್ತೆ ಕೊಪ್ಪ
ಕೊಳಕು ನೀರು ನೀಡಿ ಕೊಪ್ಪ ಪಟ್ಟಣ ಪಂಚಾಯ್ತಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೊಪ್ಪ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಕೆ.ಎನ್ ಪ್ರಸನ್ನ ಶೆಟ್ಟಿ ಪಟ್ಟಣದ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೊಪ್ಪ ಪಟ್ಟಣ ಪಂಚಾಯ್ತಿಯ ಹಿರಿಕೆರೆಯ ನೀರು ಸರಬರಾಜು ಮೋಟಾರು ಹಾಳಾಗಿದ್ದು, ಮುಂದಿನ ಐದು ದಿನ ನೀರು ಸರಬರಾಜು ಮಾಡಲಾಗುವುದಿಲ್ಲ. ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತೆ ಜನರಿಗೆ ತಿಳಸಿತ್ತು. ಕುಡಿವ ನೀರಿಗೆ ತೊಂದರೆಯಾದರೆ ಬದಲಿ ವ್ಯವಸ್ಥೆ ಮಾಡಿ ಜನರಿಗೆ ನೀರು ನೀಡಬೇಕಿದ್ದ ಪಂಚಾಯ್ತಿ ವಾಹನದಲ್ಲಿ ಪ್ರಚಾರ ಮಾಡಿ ನೀರಿನ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕೆಂದು ಹೇಳಿ ಜನಾಕ್ರೋಶಕ್ಕೆ ಗುರಿಯಾಯಿತು.
ಜನರ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೆಲವು ಮನೆಗಳಿಗೆ ಮಾತ್ರ ನೀರು ಸರಬರಾಜು ಮಾಡಿ ನೀರು ಸರಬರಾಜು ಕೇಂದ್ರದ 35 ಮತ್ತು 40 ಹೆಚ್.ಪಿ ಸಾಮರ್ಥ್ಯದ ಎರಡು ಮೋಟರ್ ಹಾಳಾಗಿರುವುದರಿಂದ 50 ಹೆಚ್.ಪಿ ಸಾಮರ್ಥ್ಯದ ಹೊಸ ಮೋಟರ್ ಅಳವಡಿಸುವ ಭರವಸೆಯನ್ನು ಮುಖ್ಯಾಧಿಕಾರಿಗಳು ನೀಡಿ ಎರಡು ದಿನಗಳಾದರು ಹೊಸ ಪಂಪ್ ಇನ್ನು ಬಂದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಕೇವಲ ಗಂಟೆಗಳಲ್ಲಿ ಮುಗಿಯುವ ಕೆಲಸಕ್ಕೆ ಪ.ಪಂ. ಕಾಲಹರಣ ಮಾಡುತ್ತಿದೆ.ಮಾರ್ಕೆಟ್ ರಸ್ತೆಗೆ ನೀಡಿದ ನೀರು ಸಂಪೂರ್ಣ ಕಲುಷಿತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ತಮ್ಮನ್ನು ಗೆಲ್ಲಿಸಿ ಪಟ್ಟಣ ಪಂಚಾಯ್ತಿಗೆ ಕಳಿಸಿದ ಮತದಾರರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸುವ ಕನಿಷ್ಠ ಜ್ಞಾನವು ಇಲ್ಲದಂತೆ ವರ್ತಿಸುವ ಪಟ್ಟಣ ಪಂಚಾಯ್ತಿಯ ಎಲ್ಲಾ ಹನ್ನೊಂದು ಜನ ಚುನಾಯಿತ ಪ್ರತಿನಿಧಿಗಳು ತಮ್ಮ ಮತದಾರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ. ಪಟ್ಟಣದ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಲಿ ಎಂದು ಪ್ರಸನ್ನಶೆಟ್ಟಿ ತಿಳಿಸಿದ್ದಾರೆ.