8 ರಿಂದ 10 ದಿನಕ್ಕೊಮ್ಮೆ ಕಲುಷಿತ ನೀರು ಪೂರೈಕೆ: ಹಿರಿಯ ವಕೀಲ ಆರ್.ಪಾಂಡು

| Published : Jul 28 2025, 12:31 AM IST

8 ರಿಂದ 10 ದಿನಕ್ಕೊಮ್ಮೆ ಕಲುಷಿತ ನೀರು ಪೂರೈಕೆ: ಹಿರಿಯ ವಕೀಲ ಆರ್.ಪಾಂಡು
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ನಗರಕ್ಕೆ 8 ರಿಂದ 10 ದಿನಕ್ಕೊಮ್ಮೆ ಕಲುಷಿತ ನೀರು ಪೂರೈಕೆಯಾಗುತ್ತದೆ. ಇದರಿಂದ ಜನರ ಆರೋಗ್ಯ ಹದಗೆಡುತ್ತಿದೆ. ರಸ್ತೆಗಳು ಗುಂಡಿಬಿದ್ದಿವೆ.

ಕನ್ನಡಪ್ರಭ ವಾರ್ತೆ ಬಳ್ಳಾರಿಬಳ್ಳಾರಿ ನಗರಕ್ಕೆ 8 ರಿಂದ 10 ದಿನಕ್ಕೊಮ್ಮೆ ಕಲುಷಿತ ನೀರು ಪೂರೈಕೆಯಾಗುತ್ತದೆ. ಇದರಿಂದ ಜನರ ಆರೋಗ್ಯ ಹದಗೆಡುತ್ತಿದೆ. ರಸ್ತೆಗಳು ಗುಂಡಿಬಿದ್ದಿವೆ. ಮಾಲಿನ್ಯ ಮಿತಿಮೀರಿದೆ. ನಗರ ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಮಹಾನಗರ ಪಾಲಿಕೆ ಮಾತ್ರ ಕೇವಲ ತೆರಿಗೆ ವಸೂಲಿ ಮಾಡುವುದರಲ್ಲಿ ನಿರತವಾಗಿದೆ ಎಂದು ಹಿರಿಯ ವಕೀಲ ಆರ್.ಪಾಂಡು ತಿಳಿಸಿದರು.ಇಲ್ಲಿನ ಗಾಂಧಿ ಭವನದಲ್ಲಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್‌) ಯಿಂದ ಭಾನುವಾರ ಜರುಗಿದ ನಾಗರಿಕ ಸಮಾವೇಶದಲ್ಲಿ ಪಾಲ್ಗೊಂಡು ಅವರು‌ ಮಾತನಾಡಿದರು.ಬಳ್ಳಾರಿಯನ್ನು ಲಂಡನ್ ಅಥವಾ ಪ್ಯಾರಿಸ್ ಮಾಡಿ ಎಂದು ನಾವು ಕೇಳುತ್ತಿಲ್ಲ. ಮೂಲಸೌಕರ್ಯ ಮಾತ್ರ ಕೇಳುತ್ತಿದ್ದೇವೆ. ಟ್ರಾಫಿಕ್ ಸಮಸ್ಯೆ ಪರಿಹರಿಸಲು ಎಲ್ಲಾ ಕಡೆಯೂ ಸಿಗ್ನಲ್‌ಗಳನ್ನು ಅಳವಡಿಸಬೇಕು. ಉದ್ಯಾನಗಳನ್ನು ಉತ್ತಮಗೊಳಿಸಬೇಕು. ಕ್ರೀಡೆಗೆ ಪ್ರೋತ್ಸಾಹ ಕೊಡಬೇಕು’ ಎಂದು ಹೇಳಿದರು.ಹೋರಾಟ ಸಮಿತಿ ಜಿಲ್ಲಾ ಸಲಹೆಗಾರ ನರಸಣ್ಣ ಮಾತನಾಡಿ, ದೇಶವೆಂದರೆ ಇಲ್ಲಿನ ಜನ ಎಂಬುದು ನಮ್ಮ ಪಾಲಿಕೆಗೆ ನಾವು ಅರ್ಥ ಮಾಡಿಸಬೇಕು. ಇಲ್ಲಿ ಸ್ವಚ್ಛ ಭಾರತ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆ. ಮನೆಯಿಂದ ಹೊರಗೆ ಬಂದರೆ ಹೊಲಸು ಭಾರತವನ್ನೇ ನಾವು ನೋಡುತ್ತಿದ್ದೇವೆ. ಜನಗಳ ಸಮಸ್ಯೆ ಬಗೆಹರಿಸದಿದ್ದರೆ ನಮಗೆ ಈ ಮಹಾನಗರ ಪಾಲಿಕೆ ಏಕೆ ಬೇಕು? ಇಂತಹ ನಿರ್ಲಕ್ಷ್ಯ ಧೋರಣೆ ಹೊಂದಿರುವ ಮಹಾನಗರ ಪಾಲಿಕೆ ವಿರುದ್ಧ ಹೋರಾಟಕ್ಕೆ ನೀವೆಲ್ಲರೂ ಸಜ್ಜಾಗಬೇಕು ಎಂದರು. ಸಮಿತಿಯ ಮತ್ತೊಬ್ಬ ಸಲಹೆಗಾರ ಮುರ್ತುಜಾ ಸಾಬ್ ಈ ಸಮಾವೇಶಕ್ಕೆ ಒಂದು ತಿಂಗಳಿನಿಂದ ತಯಾರಿ ನಡೆಯುತ್ತಿದೆ. ಒಂದು ಲಕ್ಷ ಸಹಿ ಸಂಗ್ರಹಣೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಮಹಾನಗರ ಪಾಲಿಕೆ ಹಲವು ಕಡೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದೆ. ಇದು ಜನಗಳ ಹೋರಾಟಕ್ಕಿರುವ ಶಕ್ತಿ ಎಂದು ತಿಳಿಸಿದರು. ಸಮಿತಿಯ ಸಂಚಾಲಕ ಆರ್. ಸೋಮಶೇಖರ್ ಗೌಡ ಮಾತನಾಡಿ, ಮಹಾನಗರ ಪಾಲಿಕೆ ಸಮಸ್ಯೆ ಬಗೆಹರಿಸುತ್ತಿಲ್ಲ. ಬದಲಿಗೆ ಸೃಷ್ಟಿಸುತ್ತಿದೆ. ಹೀಗಾಗಿ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಈ ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕೆಂದರೆ ಬಡಾವಣೆಗಳಲ್ಲಿ ಜನತೆ ಸಮಿತಿಗಳನ್ನ ರಚಿಸಿಕೊಂಡು ಹೋರಾಡಬೇಕು. ಹೋರಾಟ ಒಂದೇ ನಮ್ಮ ಮುಂದೆ ಇರುವ ದಾರಿ ಎಂದು ಹೇಳಿದರು.ಸಮಿತಿಯ ಜಿಲ್ಲಾ ಸಲಹೆಗಾರ ಶ್ಯಾಮಸುಂದರ, ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಎನ್. ಪ್ರಮೋದ್, ಎ. ಶಾಂತಾ ಸಮಾವೇಶದಲ್ಲಿ ಮಾತನಾಡಿದರು.ಬಳ್ಳಾರಿ ನಗರದಲ್ಲಿರುವ ಸಮಸ್ಯೆಗಳು ಮತ್ತು ಅವುಗಳ ಪರಿಹಾರಕ್ಕೆ ಸಂಬಂಧಿಸಿದ ಗೊತ್ತುವಳಿಯನ್ನು ಸಮಾವೇಶದಲ್ಲಿ ಮಂಡಿಸಲಾಯಿತು. ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 47 ಜನ ಸದಸ್ಯರ ಹೊಸ ಸಮಿತಿ ರಚನೆಯಾಯಿತು. ಈ ಸಮಿತಿಯ ನಿಯೋಗದಲ್ಲಿ ಇದೇ ತಿಂಗಳ 30ರಂದು ಮಹಾನಗರ ಪಾಲಿಕೆಯ ಮೇಯರ್ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.