ಕನಕಾಚಲಪತಿ ಜಾತ್ರೆಯೊಂದಿಗೆ ಕನಕಗಿರಿ ಉತ್ಸವಕ್ಕೆ ಚಿಂತನೆ

| Published : Feb 27 2025, 12:30 AM IST

ಸಾರಾಂಶ

ಸಚಿವ ಶಿವರಾಜ ತಂಗಡಗಿ ಅವರೇ ಸ್ಥಳೀಯ ಶಾಸಕರೂ ಆಗಿರುವುದರಿಂದ ಈ ಉತ್ಸವದ ಬಗ್ಗೆ ಕುತೂಹಲ ಹೆಚ್ಚಿದೆ. ಈ ಹಿಂದೆ ಬೇರೆ ಇಲಾಖೆಯ ಸಚಿವರಾದಾಗಲೂ ಸಹ ವಿಜೃಂಭಣೆಯಿಂದ ಉತ್ಸವ ಆಚರಿಸಲಾಗಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾತ್ರ ಕನಕಗಿರಿ ಉತ್ಸವ ಆಚರಣೆ ಕೈಬಿಡಲಾಗಿತ್ತು.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕನಕಗಿರಿ ಉತ್ಸವವನ್ನು ಈ ಬಾರಿ ಮಾರ್ಚ್‌ನಲ್ಲಿ ನಡೆಯುವ ಅಲ್ಲಿನ ಶ್ರೀ ಕನಕಾಚಲಪತಿ ಜಾತ್ರೆಯೊಂದಿಗೆ ಮಾಡಲು ಚಿಂತನೆ ನಡೆದಿದೆ.

ಆದರೆ, ಈ ಕುರಿತು ಪಟ್ಟಣ ಜನತೆಯೊಂದಿಗೆ ಸಭೆ ನಡೆಸಿ, ಎಲ್ಲರೂ ಸಮ್ಮಿತಿಸಿದರೆ ಮಾತ್ರ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತೀರ್ಮಾನಿಸಿದ್ದು, ಸ್ಥಳೀಯರು ಇದಕ್ಕೆ ಸಮ್ಮತಿಸದಿದ್ದರೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಉತ್ಸವ ಆಚರಿಸಲು ಸಕಲ ಸಿದ್ಧತೆಯೂ ನಡೆದಿದೆ.

ಸಚಿವ ಶಿವರಾಜ ತಂಗಡಗಿ ಅವರೇ ಸ್ಥಳೀಯ ಶಾಸಕರೂ ಆಗಿರುವುದರಿಂದ ಈ ಉತ್ಸವದ ಬಗ್ಗೆ ಕುತೂಹಲ ಹೆಚ್ಚಿದೆ. ಈ ಹಿಂದೆ ಬೇರೆ ಇಲಾಖೆಯ ಸಚಿವರಾದಾಗಲೂ ಸಹ ವಿಜೃಂಭಣೆಯಿಂದ ಉತ್ಸವ ಆಚರಿಸಲಾಗಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾತ್ರ ಕನಕಗಿರಿ ಉತ್ಸವ ಆಚರಣೆ ಕೈಬಿಡಲಾಗಿತ್ತು.

ಮರೆತ ಸಚಿವರು:

ಹಂಪಿ ಉತ್ಸವದಂತೆಯೇ ಕನಕಗಿರಿ ಮತ್ತು ಆನೆಗೊಂದಿ ಉತ್ಸವವನ್ನು ಪ್ರತಿ ವರ್ಷ ಆಚರಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದರು. ಜತೆಗೆ ಪ್ರತಿ ವರ್ಷವೂ ರಾಜ್ಯದ ಎಲ್ಲ ಉತ್ಸವಗಳ ದಿನಾಂಕವನ್ನು ನಿಗದಿ ಮಾಡಿ, ಅದೇ ದಿನಾಂಕದಂದು ಆಚರಿಸಲಾಗುವುದು ಎಂದಿದ್ದರು. ಆದರೆ, ಈ ವರೆಗೂ ರಾಜ್ಯದ ಉತ್ಸವಗಳು ಸೇರಿದಂತೆ ಕನಕಗಿರಿ ಹಾಗೂ ಆನೆಗೊಂದಿ ಉತ್ಸವ ಆಚರಿಸುವ ಕುರಿತು ದಿನಾಂಕ ನಿಗದಿಪಡಿಸಿಲ್ಲ. ಹೀಗಾಗಿ ಕನಕಗಿರಿ ಮತ್ತು ಆನೆಗೊಂದಿ ಉತ್ಸವ ಆಚರಣೆ ಯಾವ ವರ್ಷ ನಡೆಯುತ್ತದೆ, ಯಾವಾಗ ನಡೆಯುವುದಿಲ್ಲ ಎಂಬುದು ಜನರಿಗೆ ಗೊಂದಲ ಮೂಡಿಸಿವೆ. ಸ್ಥಳೀಯವಾಗಿ ಒತ್ತಡ ಬಂದಾಗ ಮಾತ್ರ ಉತ್ಸವ ಆಚರಣೆಗೆ ಸರ್ಕಾರ ಮುಂದಾಗುತ್ತದೆ ಹೊರತು ನಿರಂತರ ಆಚರಿಸುವುದು ಯಾವಾಗ ಎನ್ನುವುದು ಮಾತ್ರ ಪ್ರಶ್ನಾರ್ಥಕವಾಗಿಯೇ ಉಳಿದಿದೆ.

ಹಣಕಾಸಿನ ಅಭಾವ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಣಕಾಸಿನ ಅಭಾವ ಇರುವುದರಿಂದ ಯಾವುದೇ ಉತ್ಸವಗಳ ಆಚರಣೆಗೆ ಸರ್ಕಾರ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಆಗುತ್ತಿದ್ದ ಕನಕಗಿರಿ ಮತ್ತು ಆನೆಗೊಂದಿ ಉತ್ಸವವನ್ನು ಸಹ ಇದೇ ಕಾರಣಕ್ಕಾಗಿಯೇ ಮುಂದೂಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.ಕನಕಗಿರಿ ಉತ್ಸವವನ್ನು ಈ ಬಾರಿ ಶ್ರೀಕನಕಾಚಲಪತಿ ಜಾತ್ರೆಯೊಂದಿಗೆ ಆಚರಿಸುವ ಚಿಂತನೆ ನಡೆಸಲಾಗಿದೆ. ಈ ಕುರಿತು ಹಿರಿಯರೊಂದಿಗೆ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.