ನಿವೃತ್ತರಿಗಾಗಿ ವಿಶ್ರಾಂತಿ ಮನೆ ನಿರ್ಮಾಣಕ್ಕೆ ಚಿಂತನೆ

| Published : Dec 16 2024, 12:46 AM IST

ನಿವೃತ್ತರಿಗಾಗಿ ವಿಶ್ರಾಂತಿ ಮನೆ ನಿರ್ಮಾಣಕ್ಕೆ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

೬೫ ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ನೌಕರರ, ನಿವೃತ್ತ ಯೋಧರ, ಸಮಾಜ ಸೇವಕರ ವಿಶ್ರಾಂತಿ ಮನೆ ಪ್ರಾರಂಭಿಸುತ್ತಿದ್ದೇವೆ ಎಂದು ಉದ್ಯಮಿ ಟಿ. ಶಿವಕುಮಾರ್ ತಿಳಿಸಿದ್ದಾರೆ. ಕೆಲವರಿಗೆ ಒಂಟಿತನ ಕಾಡುತ್ತಿದೆ. ಇಂತಹ ಮನಸ್ಥಿತಿಯಿಂದ ಇವರನ್ನು ಹೊರತಂದು ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುವ ಭರವಸೆ ಮೂಡಿಸಿ, ಇಂತಹವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ವಿಶ್ರಾಂತಿ ಮನೆ ತೆರೆಯಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದಲ್ಲಿ ೬೫ ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ನೌಕರರ, ನಿವೃತ್ತ ಯೋಧರ, ಸಮಾಜ ಸೇವಕರ ವಿಶ್ರಾಂತಿ ಮನೆ ಪ್ರಾರಂಭಿಸುತ್ತಿದ್ದೇವೆ ಎಂದು ಉದ್ಯಮಿ ಟಿ. ಶಿವಕುಮಾರ್ ತಿಳಿಸಿದ್ದಾರೆ.

ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು ಗಮನಿಸಿದಂತೆ ಅನೇಕ ಹಿರಿಯ ನಾಗರಿಕರು ಬೆಳಿಗ್ಗೆ ೧೦ರಿಂದ ಸಂಜೆ ೬ ಗಂಟೆವೆರೆಗೂ ಅಲ್ಲಿ ಇಲ್ಲಿ ಓಡಾಡುತ್ತಾ, ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಕಾಲ ಕಳೆಯುತ್ತಾರೆ. ಕೆಲವರಿಗೆ ಒಂಟಿತನ ಕಾಡುತ್ತಿದೆ. ಇಂತಹ ಮನಸ್ಥಿತಿಯಿಂದ ಇವರನ್ನು ಹೊರತಂದು ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುವ ಭರವಸೆ ಮೂಡಿಸಿ, ಇಂತಹವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ವಿಶ್ರಾಂತಿ ಮನೆ ತೆರೆಯಲಾಗುತ್ತಿದೆ. ಈ ಮನೆಯ ಬಾಗಿಲನ್ನು ಬೆಳಿಗ್ಗೆ ೧೦ ಗಂಟೆಗೆ ತೆರಯಲಾಗುತ್ತದೆ. ಮನೆಗೆ ಬಂದವರಿಗೆ ಬೆಳಗಿನ ವೇಳೆ ಕಾಫಿ, ಬಿಸ್ಕೇಟ್, ಮಧ್ಯಾಹ್ನ ಬಿಸಿ ಊಟ ಮತ್ತೆ ಸಂಜೆ ಸ್ನ್ಯಾಕ್ಸ್ ಜೊತೆಯಲ್ಲಿ ಕಾಫಿ ನೀಡಿ ಕಳುಹಿಸಿ ೬ ಗಂಟೆಗೆ ಮನೆಯ ಬಾಗಿಲನ್ನು ಮುಚ್ಚುತ್ತೇವೆ. ಈ ಮನೆಯಲ್ಲಿ ದೊಡ್ಡ ಎಲ್.ಇ.ಡಿ ಪರದೆ ಅಳವಡಿಸಿ ಹಿರಿಯರ ಸದಭಿರುಚಿಯ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತದೆ. ಇದರ ಜೊತೆಗೆ ದಿನಪತ್ರಿಕೆಗಳು, ಕನ್ನಡ ಮ್ಯಾಗಜೀನ್‌ಗಳು, ಕಥೆ ಪುಸ್ತಕಗಳು, ಮಾರ್ಗದರ್ಶಕ ಕೃತಿಗಳು ಇಲ್ಲಿ ಇರಲಿದೆ. ಜೊತೆಗೆ ಹಿರಿಯರಿಗೆ ಬೇಜಾರಾದಾಗ ಆಟ ಆಡಲು ಕೇರಂ ಬೋರ್ಡ್, ಅಲುಗುಣಿಮಣೆ, ಚೌಕಾಬಾರ, ಚೆಸ್ ಹಾಗೂ ಪಗಡೆ ಆಟ ಆಡಲು ಅವಕಾಶ ಮಾಡಿಕೊಡಲಾಗುತ್ತದೆ ಮತ್ತು ಇವರನ್ನು ನೋಡಿಕೊಳ್ಳಲು ಒಬ್ಬ ಸಿಬ್ಬಂದಿ ಇರಲಿದ್ದಾರೆ ಎಂದರು.

ವಿಶ್ರಾಂತಿ ಮನೆಗೆ ಸದಸ್ಯರಾಗುವವರಿಗೆ ಮೇಲಿಂದ ಮೇಲೆ ಆರೋಗ್ಯ ತಪಾಸಣೆ ನಡೆಸಿ ನುರಿತ ಹಾಗೂ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಹಾಗೂ ಚಿಕಿತ್ಸೆಗಳನ್ನು ಕೊಡಿಸಲಾಗುತ್ತದೆ. ವಿಶ್ರಾಂತಿ ಮನೆಗೆ ಸೇರ ಬಯಸುವವರು ಮೊದಲು ತಮ್ಮ ಆಧಾರ್‌ ಕಾರ್ಡ್‌ ಹಾಗೂ ಮಾಹಿತಿಯನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು ಮತ್ತು ನೋಂದಾಯಿಸಿಕೊಂಡವರಿಗೆ ಕೆಲವು ಸಲಹೆ ಹಾಗೂ ಸೂಚನೆ ನೀಡಲಾಗುತ್ತದೆ. ಅದರಂತೆ ನಡೆದುಕೊಳ್ಳಲು ಒಪ್ಪಿಗೆ ನೀಡಿದವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಎಚ್.ವಿ.ಸುರೇಶ್ ಕುಮಾರ್‌ ೯೪೪೮೦೭೩೮೪೪, ಎಚ್.ಎಸ್. ಸುದರ್ಶನ್, ೯೪೪೮೭೪೨೩೭೨, ಎ.ಆರ್‌. ರವಿಕುಮಾರ್‌ ೯೪೪೮೦೦೪೧೯೪, ಜೈ ಪ್ರಕಾಶ್ ೯೪೪೮೧ ೦೬೩೯೬ ಇವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.