ಕುವೆಂಪು, ಲಂಕೇಶ, ತೇಜಸ್ವಿ, ಚಂಪಾ ಅವರ ಕಾಲಾವಧಿಯಲ್ಲಿ ರಾಜಕೀಯ ಬದಲಾವಣೆಗಳಿಗೆ ಕಾರಣವಾಗುತ್ತಿದ್ದ ಸಾಹಿತ್ಯ ಮತ್ತು ಸಾಹಿತಿಗಳ ಕೊರತೆ ಈಗ ಕಾಣುತ್ತಿದೆ, ಇಂದಿನ ಯುವ ಸಾಹಿತಿಗಳು ಹೊಂದಾಣಿಕೆ ರಾಜಕೀಯಕ್ಕೆ ಇಳಿಯುತ್ತಿರುವುದು ದುರದೃಷ್ಟಕರ ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ ಅಮೀನ್‌ ಮಟ್ಟು ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕುವೆಂಪು, ಲಂಕೇಶ, ತೇಜಸ್ವಿ, ಚಂಪಾ ಅವರ ಕಾಲಾವಧಿಯಲ್ಲಿ ರಾಜಕೀಯ ಬದಲಾವಣೆಗಳಿಗೆ ಕಾರಣವಾಗುತ್ತಿದ್ದ ಸಾಹಿತ್ಯ ಮತ್ತು ಸಾಹಿತಿಗಳ ಕೊರತೆ ಈಗ ಕಾಣುತ್ತಿದೆ, ಇಂದಿನ ಯುವ ಸಾಹಿತಿಗಳು ಹೊಂದಾಣಿಕೆ ರಾಜಕೀಯಕ್ಕೆ ಇಳಿಯುತ್ತಿರುವುದು ದುರದೃಷ್ಟಕರ ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ ಅಮೀನ್‌ ಮಟ್ಟು ಕಳವಳ ವ್ಯಕ್ತಪಡಿಸಿದರು.ಅವರು ಇಲ್ಲಿನ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಶನಿವಾರ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನದ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೀಗೆಯೇ ಹಲವು ಸಾಹಿತಿಗಳು ತಮ್ಮ ಹರೆಯದ ದಿನಗಳಲ್ಲೇ ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳಲ್ಲಿ ಬದಲಾ ವಣೆಯ ಪಾತ್ರ ವಹಿಸಿದ್ದರು. ಆದರೆ ಇಂದಿನ ಹೊಸ ತಲೆಮಾರಿನ ಸಾಹಿತಿಗಳಲ್ಲಿ ಆ ಸಾಮಾಜಿಕ ಬದ್ಧತೆ ಕಡಿಮೆಯಾಗುತ್ತಿರುವದನ್ನು ಕಾಣುತ್ತಿದ್ದೇವೆ ಎಂದರು.ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’, ಸಾರಾ ಅಬೂಬಕರ್‌ ಅವರ ‘ಚಂದ್ರಗಿರಿಯ ತೀರದಲ್ಲಿ’, ದೇವನೂರು ಮಹಾದೇವ ಅವರ ಕಥೆ-ಕಾದಂಬರಿಗಳು, ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ಸೇರಿದಂತೆ ನಾಡಿನ ವೈವಿಧ್ಯಮಯ ಸಾಹಿತ್ಯ ಕೃತಿಗಳ ಓದಿನಿಂದ ವಿಭಿನ್ನ ಬದುಕು, ಸಮುದಾಯ ಮತ್ತು ಸಂಸ್ಕೃತಿಗಳ ಚಿತ್ರಣ ಲಭಿಸುತ್ತದೆ, ಅವರ ಸಾಹಿತ್ಯಗಳು ಎಲ್ಲರನ್ನೂ ಬಡಿದೆಬ್ಬಿಸುತ್ತಿದ್ದವು ಎಂದು ವಿವರಿಸಿದರು.ಬದುಕನ್ನು ಹೆಚ್ಚು ಮಾನವೀಯಗೊಳಿಸುವ ಶಕ್ತಿ ಸಾಹಿತ್ಯದ ಓದಿಗೆ ಇದ್ದು, ಇಡೀ ಜಗತ್ತು ಹಾಗೂ ಸಮಾಜದ ಬಹುಮುಖಿ ಅನುಭವಗಳನ್ನು ತನ್ನದಾಗಿಸಿಕೊಳ್ಳಲು ಇರುವ ಏಕೈಕ ಸಾಧನ ಸಾಹಿತ್ಯ ಮಾತ್ರವಾಗಿದೆ. ಹೀಗಾಗಿ ನಿಷ್ಠೆ, ಪ್ರೀತಿ ಮತ್ತು ಸದುದ್ದೇಶದಿಂದ ಸಾಹಿತ್ಯವನ್ನು ಅಧ್ಯಯನ ಮಾಡಿದವರು ಸಮಾಜದಲ್ಲಿ ಕೆಟ್ಟ ಹಾದಿ ಹಿಡಿಯುವುದಿಲ್ಲ ಎಂಬ ಬಲವಾದ ನಂಬಿಕೆಯಿದೆ, ವಿದ್ಯಾರ್ಥಿಗಳಲ್ಲಿ ಸಾಹಿತ್ಯ ತುಡಿತ ಬಿತ್ತಬೇಕು ಎಂದು ಅಭಿಪ್ರಾಯಪಟ್ಟರು. ಬಸವಣ್ಣನವರು ಕೇವಲ ಒಂದು ವರ್ಗ ಅಥವಾ ಧರ್ಮಕ್ಕೆ ಸೀಮಿತವಾದ ನಾಯಕರಲ್ಲ, ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕರು ಹಾಗೂ ಬುದ್ಧ, ಗಾಂಧಿ, ಅಂಬೇಡ್ಕರ್‌, ನಾರಾಯಣ ಗುರುಗಳು, ದಲಿತರು ಮತ್ತು ಹಿಂದುಳಿದ ಸಮುದಾಯಗಳ ಆಶಯಗಳನ್ನೂ ಒಳಗೊಂಡ ಚಾರಿತ್ರಿಕ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ ಎಂದು ವಿಶ್ಲೇಷಿಸಿದರು. ಶರಣ ಚಳವಳಿಯು ದಲಿತ, ರೈತ, ಕಾರ್ಮಿಕ, ಮಹಿಳಾ ಮತ್ತು ಭಾಷಾ ಚಳವಳಿಗೆ ಮಾತೃಸ್ವರೂಪಿ: ಶರಣ ಚಳವಳಿಯು ದಲಿತ, ರೈತ, ಕಾರ್ಮಿಕ, ಮಹಿಳಾ ಮತ್ತು ಭಾಷಾ ಚಳವಳಿಗಳ ಮಾತೃಸ್ವರೂಪಿಯಾಗಿದ್ದು, ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳು ಒಂಬತ್ತನೇ ಶತಮಾನದಲ್ಲೇ ಬಸವತತ್ವದಲ್ಲಿ ಅಭಿವ್ಯಕ್ತಿಗೊಂಡಿದ್ದವು ಎಂದು ಹೇಳಿದರು. ಬಸವಣ್ಣ ಲಿಂಗಾಯತರಿಗೆ ಸೀಮಿತವಲ್ಲ, ಅವಹೇಳನಕ್ಕೆ ಎಲ್ಲರೂ ಕೂಗೆತ್ತಲಿ: ಆದರೆ, ಇತ್ತೀಚಿನ ದಿನಗಳಲ್ಲಿ ಬಸವಣ್ಣ ಮತ್ತು ಶರಣ ಚಳವಳಿಯ ಕುರಿತು ಅವಹೇಳನಕಾರಿ ಮಾತುಗಳು ಹಾಗೂ ಚಾರಿತ್ರಿಕ ಹರಣ ಮಾಡುವ ಪ್ರಯತ್ನಗಳು ನಡೆಯುತ್ತಿರುವುದು ಇತಿಹಾಸದ ಚಕ್ರ ಹಿಂದಕ್ಕೆ ಚಲಿಸುತ್ತಿರುವ ಆತಂಕಕಾರಿ ಬೆಳವಣಿಗೆಯಾಗಿದೆ. ಎಂಎಂ ಕಲಬುರ್ಗಿ, ಗೌರಿ ಲಂಕೇಶ್‌ ಅವರಂತಹವರ ಹತ್ಯೆಯ ನಂತರ ಈಗ ಬಸವಣ್ಣನವರ ತತ್ವದ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದ್ದು, ಸಮಾಜದ ಪ್ರಜ್ಞಾವಂತರು ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು. ಇತ್ತೀಚಿಗೆ ಕೆಟ್ಟ ಮನಸ್ಥಿತಿಯ ಲೇಖಕನೊಬ್ಬ ಬಸವಣ್ಣನವರ ಬಗ್ಗೆ ಅತ್ಯಂತ ಹೇಯವಾಗಿ ಪುಸ್ತಕ ಬರದಿದ್ದರೆ ಅದನ್ನು ಖಂಡಿಸಿದ್ದು ಲಿಂಗಾಯತರೇ ಹೆಚ್ಚು. ಆದರೆ ಬಸವಣ್ಣ ಮಾನವಕುಲದ ಜ್ಯೋತಿಯಾಗಿದ್ದಾರೆ ಅವರ ತತ್ವಗಳು ಇಡೀ ಮಾನವ ಕುಲಕ್ಕೇ ಮಾದರಿ. ಎಲ್ಲ ಜಾತಿ ಸಮುದಾಯದವರು ಸೇರಿ ಅಂಥ ಕೆಟ್ಟ ಮನಸ್ಥಿತಿಯಲೇಖಕನನ್ನು ಖಂಡಿಸಲೇಬೇಕು ಎಂದು ದಿನೇಶ ಅಮೀನ್‌ ಮಟ್ಟು ಅಭಿಪ್ರಾಯ ವ್ಯಕ್ತಪಡಿಸಿದರು.

----