ತೃಪ್ತಿ, ಮಾನವೀಯತೆ ಮೌಲ್ಯದಿಂದ ಶಾಂತಿ: ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ

| Published : Jan 15 2025, 12:48 AM IST

ತೃಪ್ತಿ, ಮಾನವೀಯತೆ ಮೌಲ್ಯದಿಂದ ಶಾಂತಿ: ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ತೃಪ್ತಿ ಮತ್ತು ಮಾನವೀಯತೆ ಎಂಬ ಎರಡು ಮೌಲ್ಯಗಳನ್ನು ಬದುಕಿನಲ್ಲಿ ಅನುಸರಿಸಿದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಮೂಡುತ್ತದೆ ಎಂದು ಕರ್ನಾಟಕ ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು. ಚಿಕ್ಕಮಗಳೂರಿನಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದರು.

ವಿವೇಕಾನಂದ ವಿದ್ಯಾಸಂಸ್ಥೆ ಸುವರ್ಣ ಮಹೋತ್ಸವ । ಸ್ಮರಣ ಸಂಚಿಕೆ ಬಿಡುಗಡೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ತೃಪ್ತಿ ಮತ್ತು ಮಾನವೀಯತೆ ಎಂಬ ಎರಡು ಮೌಲ್ಯಗಳನ್ನು ಬದುಕಿನಲ್ಲಿ ಅನುಸರಿಸಿದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಮೂಡುತ್ತದೆ ಎಂದು ಕರ್ನಾಟಕ ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.

ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ಬಹುತೇಕ ಅವ್ಯವಸ್ಥೆಗಳಿಗೆ ಲಂಚ ಮತ್ತು ಸ್ವಾರ್ಥತತೆ ಕಾರಣವೆಂದರು.

ಜೀವನ ಪಥದಲ್ಲಿ ಮಾನವೀಯತೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಲಂಚ ತೆಗೆದುಕೊಳ್ಳುವುದರ ಜತೆಗೆ ಲಂಚ ಕೊಡುವುದು ಅಪರಾಧ ಎಂಬುದನ್ನು ಅರಿಯಬೇಕು. ಸರಿ ದಾರಿಯಲ್ಲಿ ನಡೆಯುವ ಸಂಕಲ್ಪವನ್ನು ವಿದ್ಯಾರ್ಥಿ ಯುವ ಜನತೆ ಮಾಡಿದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ ಎಂದರು.

ಹಲವಾರು ಹುದ್ದೆಗಳಲ್ಲಿ ಕಾರ್‍ಯನಿರ್ವಹಿಸಿದರೂ ಸಮಾಜದ ಆಗುಹೋಗುಗಳ ಬಗ್ಗೆ ಗೊತ್ತಿರದ ಕೂಪ ಮಂಡೂಕದಂತೆ ಇದ್ದ ತಾವು ಲೋಕಾಯುಕ್ತಕ್ಕೆ ಬಂದ ಮೇಲೆ ಸಮಾಜದಲ್ಲಿ ನಡೆಯುವ ಅನ್ಯಾಯ ಗೊತ್ತಾಯಿತು. ಸಂವಿಧಾನದ ಸಂಸ್ಥೆಗಳಿಂದಲೂ ವಂಚನೆ ನೋಡುವಂತಾಯಿತು ಎಂದು ಹೇಳಿದರು.

ಒಳ್ಳೆಯ ಕೆಲಸ ಮಾಡಿದವನ್ನು ಗೌರವಿಸಿ ಕೆಟ್ಟ ಕೆಲಸ ಮಾಡಿದವರನ್ನು ದೂರವಿಡುವ ಸಮಾಜ ಹಿಂದೆ ಇತ್ತು. ಜೈಲಿಗೆ ಹೋಗಿ ಬಂದವರ ಕುಟುಂಬದಿಂದಲೇ ಅಂತರ ಕಾಪಾಡುವ ವ್ಯವಸ್ಥೆ ಇತ್ತು. ತಪ್ಪು ಮಾಡಿದವರಿಗೆ ಶಿಕ್ಷೆಯ ಜೊತೆಗೆ ಕುಟುಂಬವೂ ತೊಂದರೆಗೊಳಗಾಗುತ್ತಿತ್ತು. ಆದ್ದರಿಂದ ತಪ್ಪು ಮಾಡಲು ಜನ ಹಿಂಜರಿಯುತ್ತಿದ್ದರು. ಆದರೆ ಈಗ ಅಧಿಕಾರ ಮತ್ತು ಶ್ರೀಮಂತಿಕೆಯ ಓಲೈಕೆ ಹೆಚ್ಚಾಗಿದೆ ಎಂದರು.

ನೂರಾರು ಹಗರಣಗಳ ಕೋಟಿ ಕೋಟಿ ಹಣದ ಲೂಟಿ ನಿರಂತರವಾಗಿ ನಡೆದಿದೆ. 50ರ ದಶಕದಲ್ಲಿ 52 ಲಕ್ಷ ರು. ಜೀಪ್ ಹಗರಣ ಗಮನ ಸೆಳೆದಿತ್ತು. ನಂತರ 64 ಕೋಟಿ ರು. ಬೋಪೋರ್ಸ್ ಹಗರಣ, ತದನಂತರ 70,000 ಕೋಟಿ ರು. ಕಾಮನ್‌ವೆಲ್ತ್ ಹಗರಣ, 1.76 ಲಕ್ಷ ಕೋಟಿ ರು. 2ಜಿ ಹಗರಣ, ರಫೆಲ್ ಹಗರಣದಲ್ಲಿ 2 ಲಕ್ಷ ಕೋಟಿ ರು. ಲೂಟಿ ನಡೆದಿದೆ. ಹಿಂದೆ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಮೈಸೂರಿನ ಸಮಾರಂಭವೊಂದರಲ್ಲಿ ಅಭಿವೃದ್ಧಿ ಕಾರ್‍ಯಕ್ಕಾಗಿ ಸರ್ಕಾರ ಒಂದು ರು.ವ್ಯಯಿಸಿದರೆ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದಿದ್ದರು. ದುರಾಸೆಗೆ ಮದ್ದಿಲ್ಲ ಎಂದು ವಿಷಾದಿಸಿದರು.

ರಾಜ್ಯಸಭಾ ಸದಸ್ಯ ಜಯರಾಂ ರಮೇಶ್ ಅವರು ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ಲೋಕಾರ್ಪಣೆ ಗೊಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಂ.ಭೋಜೇಗೌಡ 50 ವರ್ಷ ಶಾಲೆ ಕ್ರಮಿಸಿದ ಹಾದಿ ಪರಿಚಯಿಸಿದರು.

ಶಿರಿವಾಸೆ ಮಂಡಲ ಪಂಚಾಯಿತಿ ಪ್ರಥಮ ಅಧ್ಯಕ್ಷರಾಗಿದ್ದ ಎಂ.ಎಲ್.ಮೂರ್ತಿ ಮಾತನಾಡಿದರು. ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ.ಭೀಮೇಶ್ವರ ಜೋಷಿ ಅವರು ಎಸ್.ಬಿ.ಮುಳ್ಳೇಗೌಡರ ಕಂಚಿನ ಪುತ್ಥಳಿಯನ್ನು ಅನಾವರಣಗಳಿಸಿದರು.

ಸಾಧಕರಾದ ಶಾರದಮ್ಮ ಮುಳ್ಳೇಗೌಡ, ಮಹಾಚಂದ್ರ ಪ್ರತಿಷ್ಠಾನದ ರವಿಶಂಕರ್ ದಂಪತಿ, ಕೆ.ವಿ.ಬಸವನಗೌಡ, ಸಂಸ್ಥೆಯ ನಿರ್ದೇಶಕ ಅಣ್ಣೆಗೌಡ, ವೈಶ್ಯಾ ಹಾಸ್ಟೆಲ್ ಮುಖ್ಯಸ್ಥ ಕೆ.ಎಸ್.ರಮೇಶ್, ಬಿ.ಎಂ.ಭೋಜೇಗೌಡ, ನಿಕಟಪೂರ್ವ ಮುಖ್ಯ ಶಿಕ್ಷಕಿ ಅನುಸೂಯ ವಿಶ್ವನಾಥ್‌ರನ್ನು ಸನ್ಮಾನಿಸಲಾಯಿತು.

ಎಸ್.ಎಂ.ಪ್ರಸನ್ನಕುಮಾರ್ ಸ್ವಾಗತಿಸಿ, ಬಸವರಾಜು ವಂದಿಸಿದರು. ನಿರ್ದೇಶಕ ಬಿ.ಎ.ಶಿವಶಂಕರ್ ಕಾರ್‍ಯಕ್ರಮ ನಿರೂಪಿಸಿದರು. ಖ್ಯಾತ ಹಿನ್ನಲೆ ಗಾಯಕ ರಾಜೇಶ್‌ ಕೃಷ್ಣನ್, ಡಾ.ಶಮಿತಾ ಮಲೆನಾಡು, ಗಿಚ್ಚಿ ಗಿಲಿಗಿಲಿಯ ರಾಘವೇಂದ್ರ ತಂಡದಿಂದ ಸಂಗೀತ ಸಂಜೆ ಆಕರ್ಷಕವಾಗಿತ್ತು. ಸ್ವಾಗತ ಸಮಿತಿ ಸಂಚಾಲಕ ಬಿ.ನೀ.ವಿಶ್ವನಾಥ್ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಿರೂಪಿಸಿದರು.