ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರಾಜ್ಯದಲ್ಲಿ ಪಕ್ಷ ಉಳಿಸಲು, ಒಂದೇ ಕುಟುಂಬದ ಹಿಡಿತದಿಂದ ಪಕ್ಷ ರಕ್ಷಿಸಲು, ಹಿಂದುತ್ವ ಉಳಿಸಲು, ರಾಜ್ಯಾದ್ಯಂತ ನೊಂದ ಕಾರ್ಯಕರ್ತರ ಧ್ವನಿಯಾಗಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಘೋಷಣೆ ಮಾಡಿದರು.
ನಗರದ ಬಾಲರಾಜ ಅರಸ್ ರಸ್ತೆಯ ಬಂಜಾರ ಸಮುದಾಯ ಭವನಲ್ಲಿ ಶುಕ್ರವಾರ ಸಂಜೆ ಕರೆದಿದ್ದ ತಮ್ಮ ಬೆಂಬಲಿಗರ, ಹಿತೈಷಿಗಳ ಸಭೆಯಲ್ಲಿ ಅಭಿಪ್ರಾಯ ಸಂಗ್ರಹದ ಬಳಿಕ ಅವರು ಮಾತನಾಡಿದರು.ನಾನು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಇಲ್ಲ. ನನ್ನ ಪ್ರಾಣ ಇರುವ ತನಕ ಮೋದಿ ಮತ್ತು ಹಿಂದುತ್ವ ನನ್ನ ಉಸಿರಾಗಿರುತ್ತದೆ. ಬಿಜೆಪಿ ಈಗಲೂ ನನ್ನ ತಾಯಿಯ ಹಾಗೆಯೇ. ಆದರೆ ಕೆಲವರು ನನ್ನ ತಾಯಿಯ ಕುತ್ತಿಗೆ ಹಿಸುಕುವುದನ್ನು ಹೇಗೆ ನೋಡುತ್ತಾ ಕುಳಿತಿರಲಿ? ರಾಜ್ಯಾದ್ಯಂತ ಲಕ್ಷಾಂತರ ಕಾರ್ಯಕರ್ತರು ಕೂಡ ಇದೇ ಮಾತನ್ನು ಆಡುತ್ತಿದ್ದಾರೆ. ಅವರೆಲ್ಲರ ಧ್ವನಿಯಾಗಿ ನಾನು ಇಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆಯೇ, ವಿನಃ ಕೇವಲ ಅಧಿಕಾರಕ್ಕಾಗಿಯಾಗಲೀ, ನನ್ನ ಪುತ್ರ ಕಾಂತೇಶನಿಗೆ ಟಿಕೆಟ್ ಸಿಗಲಿಲ್ಲ ಎಂಬುದಾಗಲಿ ಕಾರಣವಲ್ಲ ಎಂದು ಸ್ಪಷ್ಟನೆ ನೀಡಿದರು.
ನನಗೆ ಈ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿಯೇ ಇರಲಿಲ್ಲ. ನಾನು ಏಕೆ ಸ್ಪರ್ಧಿಸುತ್ತಿದ್ದೇನೆ ಎಂಬುದು ಕೇಂದ್ರ ನಾಯಕರು ಕೂಡ ಗಮನಿಸಿ, ರಾಜ್ಯ ಬಿಜೆಪಿ ಪರಿಸ್ಥಿತಿಯನ್ನು ಗಮನಿಸಿ ಸರಿಪಡಿಸುವ ಯತ್ನ ನಡೆಸಲಿ ಎಂದರು.೪೦ ವರ್ಷದ ರಾಜಕಾರಣದಲ್ಲಿ ಪಕ್ಷದ, ಸಂಘ ಪರಿವಾರದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಪಕ್ಷ ಹೇಳಿದ್ದನ್ನು ಪ್ರಶ್ನೆ ಮಾಡದೇ ತಲೆ ಮೇಲೆ ಹೊತ್ತು ಕಾರ್ಯನಿರ್ವಹಿಸಿದ್ದೇನೆ. ಆದರೆ ರಾಜ್ಯದಲ್ಲಿ ಹಿಂದುತ್ವದ ಪ್ರಖರ ಪ್ರತಿಪಾದಕರಾದ ನಳಿನ್‌ಕುಮಾರ್ ಕಟೀಲ್, ಸದಾನಂದಗೌಡ, ಸಿ.ಟಿ. ರವಿ, ಪ್ರತಾಪ್ ಸಿಂಹ ಮತ್ತು ನಾನು ಸೇರಿದಂತೆ ಅನೇಕ ನಾಯಕರಿಗೆ, ಕಾರ್ಯಕರ್ತರಿಗೆ ಅನ್ಯಾಯ ಮಾಡಲಾಗುತ್ತಿದೆ. ಹಿಂದುತ್ವ ಪ್ರತಿಪಾದಕರನ್ನು ಬದಿಗೆ ಸರಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದೇ ಕುಟುಂಬ ರಾಜ್ಯದಲ್ಲಿ ಇಡೀ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಇದನ್ನು ನೋಡುತ್ತಾ ಹೇಗೆ ಸುಮ್ಮನೆ ಕುಳಿತುಕೊಳ್ಳಲಿ ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ವಾಜೆಗೆ ಅಲ್ಲಿನ ಕಾರ್ಯಕರ್ತರು ಗೋಬ್ಯಾಕ್ ಎಂಬ ಚಳವಳಿ ಮಾಡಿದರು. ಆದರೆ, ಅಲ್ಲಿಗೆ ಹೋದ ಯಡಿಯೂರಪ್ಪ ಶೋಭಾಗೆ ಟಿಕೆಟ್ ಖಚಿತ, ಗೆಲ್ಲಿಸಿ ಎಂದು ಆದೇಶ ಕೊಟ್ಟರು. ಕೇಂದ್ರದ ಹೈಕಮಾಂಡ್ ಟಿಕೆಟ್ ಕುರಿತು ಯಾವುದೇ ನಿರ್ಧಾರ ಪ್ರಕಟಿಸುವ ಮೊದಲೇ ಯಡಿಯೂರಪ್ಪ ಹೇಗೆ ಟಿಕೆಟ್ ಘೋಷಿಸಿದರು? ಬಳಿಕ ಬೆಂಗಳೂರು ಉತ್ತರಕ್ಕೆ ಹೇಗೆ ಟಿಕೆಟ್ ಕೊಡಿಸಿದರು? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಆದೇಶ ಉಲ್ಲಂಘಿಸಿ ಕಾಂಗ್ರೆಸ್ ಸೇರಿ ಸ್ಪರ್ಧಿಸಿ, ಪಕ್ಷದಿಂದ ಉಚ್ಚಾಟನೆಗೊಂಡ ಜಗದೀಶ್ ಶೆಟ್ಟರ್ ಅವರನ್ನು ಪುನಃ ಪಕ್ಷಕ್ಕೆ ಕರೆ ತಂದು ಟಿಕೆಟ್ ಕೊಡಿಸಲು ಯತ್ನಿಸಿದರು. ಹಾವೇರಿ, ಧಾರವಾಡದಿಂದ ಸಾಧ್ಯವಾಗದಾಗ ಬೆಳಗಾವಿಯಿಂದ ಟಿಕೆಟ್ ಎಂದು ಯಡಿಯೂರಪ್ಪ ಪ್ರಕಟಿಸಿದರು. ಕೇಂದ್ರ ಚುನಾವಣಾ ಸಮಿತಿ ಪ್ರಕಟಿಸುವ ಮುನ್ನವೇ ಯಡಿಯೂರಪ್ಪ ಹೇಗೆ ಪ್ರಟಿಸುತ್ತಾರೆ. ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್ ಕೊಡಿಸಿ, ಗೆಲ್ಲಿಸುವ ಭರವಸೆ ನೀಡಿದ್ದ ಯಡಿಯೂರಪ್ಪ ಬಳಿಕ ಯಾಕೆ ಕೊಡಿಸಲಿಲ್ಲ. ಉಳಿದವರಿಗೆ ಟಿಕೆಟ್ ಕೊಡಿಸುವ ಸಾಮರ್ಥ್ಯ ಪ್ರದರ್ಶಿಸುವ ಅವರು ನಮ್ಮ ವಿಚಾರದಲ್ಲಿ ಮಾತ್ರ ಯಾಕೆ ಈ ತಾರತಮ್ಯ ಮಾಡಿದರು ಎಂದು ಪ್ರಶ್ನಿಸಿದರು.ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮಗೆ ಸ್ಫರ್ಧಿಸುವ ಇಚ್ಛೆಯಿಲ್ಲ ಎಂದು ಹೇಳಿದ್ದರಲ್ಲದೇ, ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಕಾಂತೇಶ್ ಹೆಸರನ್ನೇ ಹೇಳಿದ್ದರು. ಆದರೆ ಅವರನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಚುನಾವಣಾ ಸಮಿತಿ ಸಮೀಕ್ಷೆ ಆದರಿಸಿ ಟಿಕೆಟ್ ನೀಡುತ್ತಾರೆ ಎಂದು ನಾವೆಲ್ಲ ಭಾವಿಸಿದ್ದೆವು. ಆದರೆ, ಈಗಿನ ಪರಿಸ್ಥಿತಿ ನೋಡಿದಾಗ ಇದೆಲ್ಲ ಆಗಿಲ್ಲ. ಒಂದು ಕುಟುಂಬದ ಆಸಕ್ತಿಯನ್ನು ಆಧರಿಸಿ, ಟಿಕೆಟ್ ಹಂಚಿಕೆಯಾಗಿದೆ. ಹೀಗಾಗಿ, ರಾಜ್ಯದಲ್ಲಿ ಎಷ್ಟು ಜನ ಗೆಲ್ಲುತ್ತಾರೋ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳಿದರು.ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣವಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧಿಸಿದ್ದರು. ಕುಟುಂಬ ರಾಜಕಾರಣದ ಕುರಿತು ಪ್ರಶ್ನಿಸಿದ್ದರು. ಮೋದಿ ಅವರ ಆಶಯದಂತೆ ನಾನು ಕೂಡ ಕುಟುಂಬ ರಾಜಕಾರಣ ವಿರೋಧಿಸುತ್ತಿದ್ದೇನೆ. ಯಡಿಯೂರಪ್ಪ ತಮ್ಮ ಒಬ್ಬ ಪುತ್ರನನ್ನು ಎಂ.ಪಿ.ಯಾಗಿ, ಒಬ್ಬ ಪುತ್ರನನ್ನು ಶಾಸಕರಾಗಿ ಮತ್ತು ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದರು. ಇದಕ್ಕಾಗಿ ಆರು ತಿಂಗಳು ಆ ಸ್ಥಾನವನ್ನು ಖಾಲಿ ಬಿಡಲಾಯಿತು ಎಂದು ಹೇಳಿದ ಈಶ್ವರಪ್ಪ, ನಾನು ಇಲ್ಲಿಂದ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಬಿಜೆಪಿ ಹೆಚ್ಚೆಂದರೆ ನೋಟೀಸ್ ನೀಡಬಹುದು ಅಥವಾ ಕೊನೆಗೆ ಉಚ್ಚಾಟಿಸಬಹುದು. ಆದರೆ, ನಾನು ಗೆದ್ದ ಬಳಿಕ ಎರಡು ತಿಂಗಳಲ್ಲಿ ನನ್ನುನ್ನು ಬಿಜೆಪಿ ಪಾದಕ್ಕೆ ಕರೆ ತಂದು ಕೂರಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಚುನಾವಣಾ ಸಮಿತಿ ಸಮೀಕ್ಷೆ ಆದರಿಸಿ ಟಿಕೆಟ್ ನೀಡುತ್ತಾರೆ ಎಂದು ನಾವೆಲ್ಲ ಭಾವಿಸಿದ್ದೆವು. ಆದರೆ ಈಗಿನ ಪರಿಸ್ಥಿತಿ ನೋಡಿದಾಗ ಇದೆಲ್ಲ ಆಗಿಲ್ಲ. ಒಂದು ಕುಟುಂಬದ ಆಸಕ್ತಿಯನ್ನು ಆಧರಿಸಿ ಟಿಕೆಟ್ ಹಂಚಿಕೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಎಷ್ಟು ಜನ ಗೆಲ್ಲುತ್ತಾರೋ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳಿದರು.ನನ್ನ ಜೊತೆಗೆ ನಿಲ್ಲುತ್ತೇನೆ ಎಂದು ನನ್ನ ನಿರೀಕ್ಷೆ ಮೀರಿ ಸೇರಿದ್ದ ಸಭೆಯಲ್ಲಿ ನೀವು ಹೇಳಿದ್ದೀರಿ. ಇಲ್ಲಿ ಘೋಷಣೆ ಕೂಗಿದರೆ ಸಾಲದು. ನಾಳೆಯಿಂದ ಮುಂದಿನ ಒಂದೂವರೆ ತಿಂಗಳ ಕಾಲ ನೀವೆಲ್ಲ ನಿಮ್ಮ ಸ್ನೇಹಿತರು, ಬಂಧುಗಳ ಜೊತೆಗೆ ಸೇರಿ, ರಾಜ್ಯದಲ್ಲಿ ಸಿದ್ದಾಂತ ಉಳಿಸಲು, ಹಿಂದುತ್ವ ಉಳಿಸಲು, ಬಿಜೆಪಿಯಲ್ಲಿ ಕುಟುಂಬ ರಾಜಕಾರಣದಿಂದ ಪಕ್ಷ ಉಳಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕೆ.ಇ. ಕಾಂತೇಶ್, ಮಾಜಿ ಮೇಯರ್ ಸುನೀತಾ ಅಣ್ಣಪ್ಪ ಮತ್ತು ಮಾಜಿ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಸದಸ್ಯರಾದ ಈಶ್ವಾಸ್, ಶಂಕರ್ ಗನ್ನಿ, ಮಂಜುನಾಥ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ನಟರಾಜ್ ಭಾಗವತ್, ಮಾಜಿ ನಗರಸಭೆ ಸದಸ್ಯ ಹೊನ್ನಪ್ಪ, ಶಿಕ್ಷಣ ತಜ್ಞ ರಾಮಚಂದ್ರ ಎ.ಜೆ., ರಮೇಶ ಬಾಬು, ಮಹಾಲಿಂಗ ಶಾಸ್ತ್ರಿ, ಶೇಷಾಚಲ, ಶಿವರಾಮ ಭಟ್, ಅಶ್ವತ್ಥನಾರಾಯಣ ಶೆಟ್ಟಿ, ಗಾಜನೂರು ಗಣೇಶ್, ಕುಬೇರಪ್ಪ ಹಿಂದುಳಿದ ವರ್ಗಗಳ ನಾಯಕರು, ಈಡಿಗ ಸಮುದಾಯದ ನಾಯಕರಾದ ಸುರೇಶ ಬಾಳೆಗುಂಡಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಭಾಗಿಯಾಗಿದ್ದರು.ಗಾಜನೂರು ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ಇ. ಕಾಂತೇಶ್ ಸ್ವಾಗತಿಸಿದರು.
- - -ಬಾಕ್ಸ್-1ಇಬ್ಬರು ಪುತ್ರರು, ಶೋಭಾ ನನ್ನ ಹೃದಯ ಬಗೆದರೆ ಒಂದು ಕಡೆ ಶ್ರೀರಾಮ, ಇನ್ನೊಂದೆಡೆ ನರೇಂದ್ರ ಮೋದಿ ಕಾಣಿಸುತ್ತಾರೆ. ಯಡಿಯೂರಪ್ಪ ಎದೆ ಬಗೆದರೆ ಒಂದು ಕಡೆ ಇಬ್ಬರು ಪುತ್ರರು ಮತ್ತು ಇನ್ನೊಂದೆಡೆ ಶೋಭಾ ಕಾಣಿಸುತ್ತಾರೆ ಎಂದು ಈಶ್ವರಪ್ಪ ಸಭೆಯಲ್ಲಿ ಹೇಳಿದರು.
- - -ಟಾಪ್ ಕೋಟ್ ನರೇಂದ್ರ ಮೋದಿ ಆಶಯ ಉಳಿಸಲು, ಸಿದ್ಧಾಂತ ಉಳಿಸಲು, ರಾಜ್ಯ ಬಿಜೆಪಿಯನ್ನು ಕುಟುಂಬದ ಹಿಡಿತದಿಂದ ರಕ್ಷಿಸಲು, ಕಾರ್ಯಕರ್ತರ ಧ್ವನಿಯಾಗಲು ಸ್ವತಂತ್ರ ಅಭ್ಯರ್ಥಿ ಸ್ಪರ್ಧೆ ನಿರ್ಧಾರ
- ಈಶ್ವರಪ್ಪ, ಮಾಜಿ ಸಚಿವ- - -
ಕೋಟ್ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಭಾರತ, ಅದೇ ನನ್ನ ಪರಿವಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರೆ, ರಾಜ್ಯದಲ್ಲಿ ನನ್ನ ಪಕ್ಷ, ನನ್ನ ಕುಟುಂಬ ಎಂಬ ಮಾತನ್ನು ಯಡಿಯೂರಪ್ಪ ಹೇಳುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ನಡೆದ ಘಟನೆಯನ್ನೆಲ್ಲಾ ನಾನು ವಿವರಿಸಿದ್ದೇನೆ. ನಾನು ಹೇಳಿದ್ದರಲ್ಲಿ ಯಾವುದಾದರೂ ಸುಳ್ಳಿದ್ದರೆ ನನ್ನ ಮಗ ಹಾಳಾಗಿ ಹೋಗಲಿ
- ಕೆ. ಎಸ್. ಈಶ್ವರಪ್ಪ, ಬಂಡಾಯ ಅಭ್ಯರ್ಥಿ, ಬಿಜೆಪಿ- - - -೧೫ಕೆಪಿಎಸ್ಎಂಜಿ ೧೧:
ಶಿವಮೊಗ್ಗದಲ್ಲಿ ತಮ್ಮ ಬೆಂಬಲಿಗರ ಸಭೆಯನ್ನು ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕೆ. ಎಸ್ ಈಶ್ವರಪ್ಪ ಉದ್ಘಾಟಿಸಿದರು.-೧೫ಕೆಪಿಎಸ್ಎಂಜಿ೧೨:
ಶಿವಮೊಗ್ಗದಲ್ಲಿ ತಮ್ಮ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡ ಜನಸ್ತೋಮ.