ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರನ್ನು ಒಗ್ಗೂಡಿಸುವ ಪ್ರಮುಖ ಸಾಂಸ್ಕೃತಿಕ ಸಂಸ್ಥೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆಡಳಿತಾತ್ಮಕ ಗೊಂದಲ, ಬೈಲಾ ತಿದ್ದುಪಡಿ, ಅಧಿಕಾರವಧಿ ವಿಸ್ತರಣೆ ಹಾಗೂ ಹಣಕಾಸಿನ ನಿರ್ವಹಣೆ ಕುರಿತು ಆಕ್ಷೇಪಗಳು ವ್ಯಕ್ತವಾಗಿವೆ.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಳೆದೊಂದು ದಶಕದಿಂದ ಉಂಟಾಗಿರುವ ಗೊಂದಲ ಸರಿಪಡಿಸಿ ಸಂಸ್ಥೆ ಘನತೆ, ಸ್ವಾಯತ್ತತೆ ಮತ್ತು ಮೂಲ ಆಶಯ ಮರುಸ್ಥಾಪಿಸುವ ಸವಾಲಿನೊಂದಿಗೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸುತ್ತಿದ್ದೇನೆ ಎಂದು ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರನ್ನು ಒಗ್ಗೂಡಿಸುವ ಪ್ರಮುಖ ಸಾಂಸ್ಕೃತಿಕ ಸಂಸ್ಥೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆಡಳಿತಾತ್ಮಕ ಗೊಂದಲ, ಬೈಲಾ ತಿದ್ದುಪಡಿ, ಅಧಿಕಾರವಧಿ ವಿಸ್ತರಣೆ ಹಾಗೂ ಹಣಕಾಸಿನ ನಿರ್ವಹಣೆ ಕುರಿತು ಆಕ್ಷೇಪಗಳು ವ್ಯಕ್ತವಾಗಿವೆ. ಪರಿಷತ್ ಮತ್ತೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪರಿಣಾಮಕಾರಿ ವೇದಿಕೆಯಾಗಬೇಕು ಎಂಬುದು ತಮ್ಮ ಉದ್ದೇಶ. ಎಲ್ಲ ಕನ್ನಡ ಅಭಿಮಾನಿಗಳು, ಸಾಹಿತ್ಯಾಸಕ್ತರು, ಕಸಾಪ ಸದಸ್ಯರು ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಜಾತಿ, ಧರ್ಮಗಳ ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆಯಾಗಬೇಕು. ಕೆಲವೇ ಸಮುದಾಯಗಳ ಪ್ರಭಾವಕ್ಕೆ ಒಳಗಾಗಬಾರದು. ಭಿನ್ನಾಭಿಪ್ರಾಯಗಳಿಗೆ ಅವಕಾಶ ಇರಬಾರದು. ಪ್ರತಿ ಜಿಲ್ಲೆಯಿಂದ ಆಯ್ಕೆ ಮಾಡಿದ ಗೌರವ ಸಲಹಾ ಸಮಿತಿ ರಚನೆ, ಕನ್ನಡ-ಕನ್ನಡ ನಿಘಂಟು ಕ್ರಿಯಾಯೋಜನೆ ಮರು ಆರಂಭ, ಕಸಾಪ ಮುಖವಾಣಿ ಪತ್ರಿಕೆ ಮರು ಆರಂಭ, ಕಸಾಪ ಅಧ್ಯಕ್ಷರಾಗಲು ಮಹಿಳೆಯರಿಗೆ ಮೀಸಲಾತಿ, ಕನ್ನಡ ಜಾಗೃತಗೊಳಿಸಲು ಯುವ ಲೇಖಕರಿಗೆ ತರಬೇತಿ, ಅಧಿಕಾರ ಹಂಚಿಕೆ ಅಂತಹ ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಹಿರಿಯ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕಳೆದ ಎರಡು ಅವಧಿ ಕಾಲ ಆಡಳಿತಶಾಹಿ ವರ್ಗದ ಕೈಗೆ ಸಿಕ್ಕು ಮೂಲ ಆಶಯಗಳನ್ನು ಮರೆತು ಕಾರ್ಯ ನಿರ್ವಹಿಸಿದೆ. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಬೆಂಬಲಿಸಲಾಗುತ್ತಿದೆ ಎಂದು ತಿಳಿಸಿದರು.ಮಹೇಶ ಜೋಶಿ ಅವರ ಅವಧಿಯಲ್ಲಿ ರಾಜಕೀಯ ಹಸ್ತಕ್ಷೇಪವಾಗಿದೆ. ಕನ್ನಡ ವಿರೋಧಿ ಹಾಗೂ ಸರ್ವಾಧಿಕಾರಿ ಆಡಳಿತ ನಡೆದಿದೆ. ಅವರ ಮೇಲೆ ನ್ಯಾಯಾಲಯಕ್ಕೆ ನೀಡಿದ ೧೭ ದೂರುಗಳ ಪೈಕಿ ೧೬ ಸಾಬೀತಾಗಿದ್ದು ೮ ಕೋಟಿ ಭ್ರಷ್ಟಚಾರವೂ ಸಹ ಸಾಬೀತಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರುದ್ರಪ್ಪ ಅನಗವಾಡಿ, ಪ್ರೊ. ಸುಕನ್ಯ, ಕೆ.ವೆಂಕಟರಾಜು, ಶಿವಸ್ವಾಮಿ ದೊಡಿಂದುವಾಡಿ ಸಿದ್ಧರಾಜು ಇದ್ದರು.