ಸಾರಾಂಶ
ಪಟ್ಟಣದ ವ್ಯಾಪ್ತಿಯಲ್ಲಿ 29 ಫಲಾನುಭವಿಗಳಿಗೆ 94 ಸಿ ಸಿ ಹಕ್ಕು ಪತ್ರ ವಿತರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವಿರೋಧ ಪಕ್ಷಗಳು ಪದೇ, ಪದೇ ಅಡ್ಡಿ ಪಡಿಸಿದ್ದರಿಂದ ಬಡವರಿಗೆ ಹಕ್ಕುಪತ್ರ ನೀಡಲು ವಿಳಂಬವಾಗಿದೆ ಎಂದು ಶಾಸಕ ಹಾಗೂ ರಾಜ್ಯ ನವೀಕರಿಸ ಬಹುದಾದ ಇಂದನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಆರೋಪಿಸಿದರು.
ಶನಿವಾರ ಪ್ರವಾಸಿ ಮಂದಿರದಲ್ಲಿ ಪಟ್ಟಣದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ 29 ಫಲಾನುಭವಿಗಳಿಗೆ 94 ಸಿಸಿ ಅಡಿ ಹಕ್ಕು ವಿತರಿಸಿ ಮಾತನಾಡಿದರು. ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೆ ಹಕ್ಕುಪತ್ರ ನೀಡಬಾರದು ಎಂದು ಅಧಿಕಾರಿಗಳಿಗೂ ಬೆದರಿಕೆ ಹಾಕಲಾಗಿತ್ತು. ಹಕ್ಕುಪತ್ರ ನೀಡಬೇಕು ಎಂದು ಹಲವು ಬಾರಿ ದಿನಾಂಕ ನಿಗದಿ ಮಾಡಿದ್ದರೂ ಕೆಲವರು ಅಡ್ಡಿ ಪಡಿಸಿದ್ದರಿಂದ ವಿಳಂಬವಾಯಿತು. ಇದೇ ಮೊದಲ ಬಾರಿಗೆ 94 ಸಿಸಿ ಅಡಿ ಪಟ್ಟಣದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದೇವೆ. ಹಿಂದೆ ಜನತಾ ದರ್ಶನದಲ್ಲಿ 49 ಹಕ್ಕುಪತ್ರ, ನಿನ್ನೆ ತಾಲೂಕಿನ ವಿವಿಧ ಗ್ರಾಮ ಗಳ ಫಲಾನುಭವಿಗಳಿಗೆ 94 ಸಿ ಅಡಿ 32 ಹಕ್ಕುಪತ್ರಗಳನ್ನು ಕಾನೂನು ಚೌಕಟ್ಟಿನಲ್ಲಿ ನೀಡಿದ್ದೇವೆ. ಕಾನೂನು ಮೀರಿ ಹಕ್ಕುಪತ್ರ ನೀಡಿದರೆ ಮುಂದೆ ಫಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು. ಆದ್ದರಿಂದ ಕಾನೂನಿನ ಎಲ್ಲಾ ಸಮಸ್ಯೆ ಬಗೆಹರಿಸಿಕೊಂಡು ಇಂದು ಪಟ್ಟಣದ ವ್ಯಾಪ್ತಿಯಲ್ಲಿ ಹಕ್ಕುಪತ್ರ ನೀಡಿದ್ದೇವೆ ಎಂದು ವಿವರಿಸಿದರು.ಮುಖ್ಯ ಅತಿಥಿಯಾಗಿದ್ದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, ಪ್ರತಿಯೊಬ್ಬರಲ್ಲೂ ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ಕನಸು ಇರುತ್ತದೆ. ಕಳೆದ 60 ವರ್ಷದಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದ 29 ಕುಟುಂಬದವರಿಗೆ ಇಂದು 94 ಸಿಸಿ ಅಡಿ ಹಕ್ಕುಪತ್ರ ನೀಡಲಾಗಿದೆ. ಈಗ ಮನೆ ಜಾಗ ನಿಮ್ಮ ಸ್ವಂತ ಆಸ್ತಿಯಾಗಿದೆ. ಒಳ್ಳೆಯ ಕೆಲಸ ಮಾಡಲು ಹೋದಾಗ ನೂರಾರು ಅಡ್ಡಿ, ಆತಂಕ ಎದುರಾಗುತ್ತದೆ. ಕೆಲವು ಸಂದರ್ಭದಲ್ಲಿ ಶತ್ರುಗಳು ಕಾಲ ಸರಿದಂತೆ ಮಿತ್ರರಾಗುತ್ತಾರೆ. ನಾನು ನನ್ನ ಹುಟ್ಟೂರಿನ ಋಣ ತೀರಿಸಲು ನರಸಿಂಹರಾಜಪುರಕ್ಕೆ ಹೆಚ್ಚು ಅನುದಾನ ತರುತ್ತಿದ್ದೇನೆ. ಈಗಾಗಲೇ ರಸ್ತೆ ಅಗಲೀಕರಣಕ್ಕೆ ಸರ್ಕಾರದ ಮುಂದೆ ₹ 60 ಕೋಟಿ ಪ್ರಸ್ತಾವನೆ ಇಟ್ಟಿದ್ದೇನೆ. ನರಸಿಂಹರಾಜಪುರದಲ್ಲಿ ಎಲ್ಲರೂ ಅಣ್ಣತಮ್ಮಂದಿರಂತೆ ಒಳ್ಳೆಯ ರೀತಿ ಬದುಕೋಣ ಎಂದು ಕರೆ ನೀಡಿದರು.
ಅತಿಥಿಯಾಗಿದ್ದ ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಿ.ಕೆ.ಪಿ.ಅಂಶುಮಂತ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರಿಗೆ, ಜನ ಸಾಮಾನ್ಯರಿಗೆ ಮನೆ, ನಿವೇಶನ ನೀಡುತ್ತಾ ಬಂದಿದೆ. ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಕಾಗೋಡು ತಿಮ್ಮಪ್ಪ ಕಂದಾಯ ಮಂತ್ರಿಯಾಗಿದ್ದಾಗ ಬಡವರಿಗೆ ಹಕ್ಕುಪತ್ರ ನೀಡುವ ಕೆಲಸ ಪ್ರಾರಂಭವಾಯಿತು. ನಾವು ನಡೆದು ಬಂದ ದಾರಿಯನ್ನು ನೆನಪಿಸಿಕೊಳ್ಳಬೇಕು. ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಕಿಕೊಟ್ಟ ದಾರಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ, ಎಸ್.ಎಂ.ಕೃಷ್ಣ ಅವರು ಫಾರಂ ನಂ. 50,52,53 ರಲ್ಲಿ ಉಳುವವನಿಗೆ ಭೂಮಿ ನೀಡಿದ್ದರು. ಸಿದ್ದರಾಮಯ್ಯ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದರು.ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ 800 ಜನರಿಗೆ ನಿವೇಶನ ಅಗತ್ಯವಿದೆ. ಬಡವರಿಗೆ ನಿವೇಶನ ನೀಡಲು ಲೇಔಟ್ ಮಾಡಲಾಗಿದ್ದು ಇದಕ್ಕಾಗಿ ₹ 3.71 ಕೋಟಿ ಅನುದಾನ ಬಿಡುಗಡೆಯಾಗಿದೆ. ಇಂದಿರಾಗಾಂಧಿ ಬಡಾವಣೆ ಎಂದು ಹೆಸರಿಡಲಾಗಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ. ಪಟ್ಟಣದ ವಿವಿಧ ವಾರ್ಡುಗಳಲ್ಲಿ ಗೋಮಾಳ ಜಾಗವಿದೆ. ಇದನ್ನು ನಿವೇಶನ ಮಾಡಬಹುದು.24 ಗಂಟೆ ನೀರು ನೀಡುವ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುತ್ತೇವೆ ಎಂದರು.
ಪಪಂ ಸದಸ್ಯೆ ಜುಬೇದ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಸೇರಿದ ಹಿಳುವಳ್ಳಿಯ ಸ.ನಂ 200 ರಲ್ಲಿ 58 ಜನ ಬಡವರು 50 ರಿಂದ 60 ವರ್ಷ ದಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಅವರಿಗೆ ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರು ಮಾಡಲು ಜಿಲ್ಲಾಧಿಕಾರಿ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಪಪಂ ಅಧ್ಯಕ್ಷೆ ಸುರೈಯಾಬಾನು,ಪಟ್ಟಣ ಪಂಚಾಯಿತಿ ಸದಸ್ಯರಾದ ಮುನಾವರ್ ಪಾಷಾ, ಮಹಮ್ಮದ್ ವಸೀಂ, ಪಪಂ ಮಾಜಿ ಉಪಾಧ್ಯಕ್ಷ ಸುಬಾನ್, ಕಾಂಗ್ರೆಸ್ ನಗರ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಕೆಡಿಪಿ ಸದಸ್ಯರಾದ ಅಂಜುಂ, ಕೆ.ವಿ.ಸಾಜು, ಬಗರ್ ಹುಂಕ ಸಮಿತಿ ಸದಸ್ಯ ಇ.ಸಿ.ಜೋಯಿ, ತಹಸೀಲ್ದಾರ್ ತನುಜಾ, ನಾಮ ನಿರ್ದೇಶನ ಸದಸ್ಯ ರಜೀ, ರೆವಿನ್ಯೂ ಇನ್ಸ್ ಪೆಕ್ಟರ್ ಮಂಜುನಾಥ್ ಇದ್ದರು.
-- ಬಾಕ್ಸ್ --ನನ್ನ ವಿರುದ್ಧ ಅಪಪ್ರಚಾರ:
ಸಾಮಾಜಿಕ ಜಾಲ ತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಅಸಮಧಾನ ವ್ಯಕ್ತಪಡಿಸಿದರು.ನಾನು ಅರಣ್ಯ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಮಾತನಾಡುವಾಗ ಭದ್ರಾ ಎಸ್ಟೇಟ್ ಸೇರಿದಂತೆ ದೊಡ್ಡ, ದೊಡ್ಡ ಎಸ್ಟೇಟ್ ಮಾಲೀಕ ರೊಂದಿಗೆ ಚರ್ಚೆ ಮಾಡಿ ಒತ್ತುವರಿ ಮಾಡಿದ ಅರಣ್ಯ ಭೂಮಿ ಬಿಟ್ಟುಕೊಡಬೇಕು ಎಂದು ಮನ ಒಲಿಸಿದ್ದೇನೆ ಎಂದು ಹೇಳಿದ್ದೆ. ಅದನ್ನು ಕೆಲವರು ತಿರುಚಿ ಅಪಪ್ರಚಾರ ಮಾಡುತ್ತಾ ನಾನು ಬಡವರ ಭೂಮಿ ತೆರವುಗೊಳಿಸುತ್ತೇನೆ ಎಂದು ವಾಟ್ಸಾಪ್, ಫೇಸ್ ಬುಕ್ ನಲ್ಲಿ ಹಾಕುತ್ತಿದ್ದಾರೆ. ಜನರು ಅಪಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳಬಾರದು. ನಾನು ಬಡ ರೈತರ ಪರವಾಗಿದ್ದೇನೆ ಎಂದರು.