ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರಿಗೆ ನೀಡಿದ್ದ ಸಂಪುಟ ದರ್ಜೆಯ ಸ್ಥಾನಮಾನವನ್ನು ಹಿಂತೆಗೆದುಕೊಂಡಿರುವುದು ಸರಿಯಲ್ಲ. ರಾಜ್ಯ ಸರ್ಕಾರ ತಕ್ಷಣ ಮತ್ತೆ ಎಲ್ಲ ಸೌಲಭ್ಯಗಳನ್ನು ಮುಂದುವರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಆಗ್ರಹಿಸಿದರು.ನಗರದ ಕಸಾಪ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಮಹೇಶ ಜೋಶಿ ಅವರ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಪರ ಚಿಂತನೆ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ 2022 ಆಗಸ್ಟ್ 3ರಂದು ರಾಜ್ಯ ಸಚಿವ ಸಂಪುಟ ದರ್ಜೆಯ ಸಮನಾದ ಸ್ಥಾನಮಾನ ನೀಡಲಾಗಿತ್ತು. ಆದರೆ ಇಂದಿನ ಸರ್ಕಾರ 2025 ಮೇ 31ರಂದು ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ರದ್ದುಗೊಳಿಸುವ ಆದೇಶ ಮಾಡಿದೆ. ರಾಜ್ಯ ಸಚಿವ ಸಂಪುಟದ ಸ್ಥಾನಮಾನ ಅನ್ವಯಿಸುವ ಸೌಲಭ್ಯಗಳನ್ನು ಹಿಂಪಡೆಯಲಾಗಿದ್ದು, ಅತ್ಯಂತ ಖಂಡನೀಯ ಹಾಗೂ ಕನ್ನಡ ಭಾಷೆಗೆ ಹಾಗೂ ಕನ್ನಡಿಗರಿಗೆ ಮಾಡಿದ ಘೋರ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಕನಿಷ್ಠ ₹ 40 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಕಸಾಪ ರಾಜ್ಯಾಧ್ಯಕ್ಷರು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಸಮ್ಮೇಳನದ ದಿಕ್ಕು ತಪ್ಪಿಸಿ ಅಕ್ಷರ ಜಾತ್ರೆಯನ್ನು ಹಾಳು ಮಾಡಲು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹಾಗೂ ಅವರ ಬಳಗ ಸಂಚು ರೂಪಿಸುತ್ತಿದೆ. ಇದನ್ನು ಸರ್ಕಾರ ಪರಿಗಣಿಸಬಾರದು ಎಂದು ಅವರು ಒತ್ತಾಯಿಸಿದರು. ಅಲ್ಲದೇ, ಸರ್ಕಾರ ಸಮ್ಮೇಳನಗಳಿಗೆ ಅನುದಾನ ನೀಡುವುದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ. ಹೀಗಾಗಿ ಪರಿಷತ್ತು ಈ ಹಣದಲ್ಲಿ ಅವ್ಯವಹಾರ ಮಾಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸಮರ್ಥಿಸಿದರು.ಜಿಲ್ಲೆಯಲ್ಲಿ ಕಸಾಪ ಭವನ:
ವಿಜಯಪುರ ಕನ್ನಡ ಸಾಹಿತ್ಯ ಭವನದ 8ಕೋಟಿ 40ಲಕ್ಷದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ ಪಾಟೀಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲೆಯ ಲೋಕಸಭಾ ಸದಸ್ಯರು, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರ ಸಹಾಯ ಸಹಕಾರದಿಂದ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣವಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಮಾತನಾಡಿ, ಈ ಮೊದಲಿನ ಸರ್ಕಾರ ಎಲ್ಲವನ್ನು ವಿಚಾರ ಮಾಡಿಯೇ ಕಸಾಪ ರಾಜ್ಯಾಧ್ಯಕ್ಷರಿಗೆ ಸೂಕ್ತ ಸ್ಥಾನಮಾನ ಕೊಟ್ಟಿತ್ತು. ಆದರೆ ಈ ಸರ್ಕಾರ ಏಕಾಏಕಿ ಅದೆಲ್ಲವನ್ನೂ ಹಿಂತಗೆದುಕೊಂಡಿದ್ದು, ಕನ್ನಡದ ಏಳಿಗೆಗೆ ಕೊಡಲಿ ಪೆಟ್ಟು ಬಿದ್ದಂತಾಗುತ್ತದೆ. ಹೀಗೆ ಸೌಲಭ್ಯವನ್ನು ಕೊಟ್ಟು ಕಿತ್ತುಕೊಳ್ಳುವುದು ಒಂದು ರೀತಿಯ ಅವಮಾನ ಮಾಡಿದಂತಾಗಿದೆ ಎಂದು ಕಿಡಿ ಕಾರಿದರು.
ಈ ವೇಳೆ ಕಸಾಪ ಪದಾಧಿಕಾರಿಗಳಾದ ರವಿ ಕಿತ್ತೂರ, ಸಿದ್ರಾಮಯ್ಯ ಲಕ್ಕುಂಡಿಮಠ, ಡಾ.ಆನಂದ ಕುಲಕರ್ಣಿ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ, ಆಶಾ ಬಿರಾದಾರ, ಅರ್ಜುನ ಶಿರೂರ, ವಿಜಯಲಕ್ಷ್ಮೀ ಹಳಕಟ್ಟಿ, ಬಸವರಾಜ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.----------
ಕೋಟ್ಡಾ.ಮಹೇಶ ಜೋಶಿ ಯಾವತ್ತು ಸರ್ವಾಧಿಕಾರಿಯಂತೆ ವರ್ತಿಸಿಲ್ಲ. ಅತೃಪ್ತರು ವಿನಾಕಾರಣ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಆತಂಕದ ವಿಷಯ. ಬಳ್ಳಾರಿ ಜಿಲ್ಲೆಯಲ್ಲಿ ಜರುಗುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹ 40 ಕೋಟಿ ಅನುದಾನ ಬೇಡ ₹ 10 ಕೋಟಿಗೆ ಸೀಮಿತಗೊಳಿಸಿ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದು ಕನ್ನಡ ಸಾಹಿತ್ಯ ಪರಿಷತ್‌ಗೆ ಅವಮಾನ ಎಸಗುತ್ತಿದ್ದಾರೆ. ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಜಿಲ್ಲಾಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಅವರ ಅವಿವೇಕತನವನ್ನು ಎತ್ತಿ ತೋರಿಸುತ್ತದೆ.
ಹಾಸಿಂಪೀರ ವಾಲೀಕಾರ, ಕಸಾಪ ಜಿಲ್ಲಾಧ್ಯಕ್ಷರು---------------