ಮುಂದುವರಿದ ಮಳೆ: ಗುಡ್ಡ, ಮನೆ ಕುಸಿತ

| Published : Jun 28 2024, 12:50 AM IST

ಸಾರಾಂಶ

ಸಿದ್ದಾಪುರ ತಾಲೂಕಿನ ಹಸ್ವಿಗುಳಿಯ ವೆಂಕಟ್ರಮಣ ನಾಯ್ಕ, ಸದಾನಂದ ನಾಯ್ಕ ಹಾಗೂ ಪಾರ್ವತಿ ನಾಯ್ಕ ಅವರ ಮನೆಗೆ ಹೊಂದಿಕೊಂಡು ಇರುವ ಗುಡ್ಡ ಕುಸಿದು ಆತಂಕಕ್ಕೆ ಕಾರಣವಾಗಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಬಿರುಗಾಳಿ ಮಳೆ ಮುಂದುವರಿದಿದೆ. ಶಿರಸಿಯಲ್ಲಿ ಮನೆ ಮೇಲೆ ಮರ ಉರುಳಿದೆ. ಸಿದ್ದಾಪುರದಲ್ಲಿ ಮನೆಗೆ ಹೊಂದಿಕೊಂಡು ಗುಡ್ಡ ಕುಸಿದಿದೆ. ಕಾರವಾರ ತಾಲೂಕಿನ ದೇವಬಾಗದ ಜಂಗಲ್ ಲಾಡ್ಜಸ್‌ನ ನಾಲ್ಕು ಕಾಟೇಜ್‌ಗಳು ಸಮುದ್ರಕ್ಕೆ ಕೊರೆತಕ್ಕೆ ತುತ್ತಾಗಿ ಉರುಳಿದೆ. ಮಳೆಯಿಂದಾಗಿ ಜನಜೀವನದಲ್ಲೂ ವ್ಯತ್ಯಯ ಉಂಟಾಗಿದೆ.

ತಾಲೂಕಿನ ದೇವಬಾಗದಲ್ಲಿ ಸಮುದ್ರ ಕೊರೆತಕ್ಕೆ ಜಂಗಲ್ ಲಾಡ್ಜಸ್‌ನ ನಾಲ್ಕು ಕೊಠಡಿಗಳು ಸಮುದ್ರ ಪಾಲಾಗಿವೆ. ಭಾರಿ ಗಾತ್ರದ ಅಲೆಗಳು ಏಳುತ್ತಿರುವ ಹಿನ್ನೆಲೆಯಲ್ಲಿ ಆ ಕಾಟೇಜ್‌ಗಳನ್ನು ಪ್ರವಾಸಿಗರಿಗೆ ನೀಡದೆ ಖಾಲಿ ಇಡಲಾಗಿತ್ತು. ಬುಧವಾರವೇ ಅಲೆಗಳು ಕಾಟೇಜ್‌ ಬಳಿ ಅಪ್ಪಳಿಸುತ್ತಿತ್ತು.

ಸಿದ್ದಾಪುರ ತಾಲೂಕಿನ ಹಸ್ವಿಗುಳಿಯ ವೆಂಕಟ್ರಮಣ ನಾಯ್ಕ, ಸದಾನಂದ ನಾಯ್ಕ ಹಾಗೂ ಪಾರ್ವತಿ ನಾಯ್ಕ ಅವರ ಮನೆಗೆ ಹೊಂದಿಕೊಂಡು ಇರುವ ಗುಡ್ಡ ಕುಸಿದು ಆತಂಕಕ್ಕೆ ಕಾರಣವಾಗಿದೆ.

ಶಿರಸಿಯ ಟಿಪ್ಪು ನಗರದಲ್ಲಿ ಮನೆಯೊಂದರ ಮೇಲೆ ಬೃಹತ್ ಮರ ಉರುಳಿ ಮನೆ ಹಾಗೂ ಬೈಕ್‌ಗೆ ಹಾನಿ ಉಂಟಾಗಿದೆ. 8 ವಿದ್ಯುತ್ ಕಂಬಗಳು ಧರೆಗುರುಳಿವೆ.

ಬಿರುಗಾಳಿ, ಮಳೆಯಿಂದಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೆಲವೆಡೆ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಮರ ಹಾಗೂ ಟೊಂಗೆಗಳು ಬಿದ್ದು ವಿದ್ಯುತ್ ತಂತಿಗಳು ಕತ್ತರಿಸಿಹೋಗಿವೆ. ಪರಿಣಾಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರಗಳಲ್ಲಿ ಮಳೆ ಬುಧವಾರಕ್ಕಿಂತ ಇಳಿಮುಖಗೊಂಡಿದೆ. ಎರಡು ದಿನಗಳಿಂದ ಬಿಟ್ಟೂ ಬಿಡಡೆ ಮಳೆ ಸುರಿದಿದ್ದ ಭಟ್ಕಳದಲ್ಲಿ ಬೆಳಗ್ಗೆ ಬಿಸಿಲಿನ ದರ್ಶನವಾಯಿತು. ಯಲ್ಲಾಪುರ, ಶಿರಸಿ, ಸಿದ್ದಾಪುರಗಳಲ್ಲಿ ಮಳೆಯ ಅಬ್ಬರ ಹೆಚ್ಚಿದೆ. ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಉಂಟಾಗಿದೆ.

ಮಳೆ ಇಳಿಕೆ ಕಂಡರೂ ಮುಂದುವರಿದ ಅವಾಂತರ

ಭಟ್ಕಳ: ತಾಲೂಕಿನಲ್ಲಿ ಗುರುವಾರ ಬೆಳಗ್ಗೆಯವರೆಗೆ ಮಳೆ ಜೋರಾಗಿ ಸುರಿದರೂ ನಂತರ ಮಳೆ ವಿರಾಮ ಪಡೆದಿತ್ತು. ಆದರೂ ಗುರುವಾರ ಬೆಳಗ್ಗೆ ತನಕ ಸುರಿದ ಮಳೆ ತಗ್ಗು ಪ್ರದೇಶ ಜಲಾವೃತಗೊಳ್ಳುವಂತೆ ಮಾಡಿತ್ತು. ಕೆಲವು ಮನೆಗಳ ಮೇಲೂ ಮರ ಬಿದ್ದು ಹಾನಿ ಉಂಟಾಗಿತ್ತು. ಭಾರೀ ಮಳೆಗೆ ಸಂಶುದ್ದೀನ ವೃತ್ತದ ಸಾಗರ ರಸ್ತೆಯ ಇಕ್ಕೆಲದಲ್ಲಿ ಗಟಾರ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರು ನಿಂತು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ, ವಾಹನ ಓಡಾಟಕ್ಕೆ ತೊಂದರೆ ಉಂಟಾಯಿತು.

ಸಂಶುದ್ದೀನ ವೃತ್ತದ ಬಲಭಾಗದಲ್ಲಿ ನೀರು ಶೇಖರಣೆಯಾಗಿ ಅಂಗಡಿಗಳಿಗೆ ಹೋಗಲು ಜನರು ಪರದಾಡುವಂತಾಯಿತು. ಸಂಜೆಯವರೆಗೂ ಮಳೆ ನೀರು ರಸ್ತೆ ಇಕ್ಕೆಲದಲ್ಲಿ ನಿಂತಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು. ವರ್ಷಂಪ್ರತಿ ಸಂಶುದ್ದೀನ ವೃತ್ತದಲ್ಲಿ ಮಳೆ ನೀರು ನಿಂತು ತೊಂದರೆ ಆಗುತ್ತಿದ್ದರೂ ಪುರಸಭೆಯಾಗಲಿ, ಐಆರ್‌ಬಿಯೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಸಂಶುದ್ದೀನ ವೃತ್ತದಲ್ಲಿ ಒಳಚರಂಡಿ ಮ್ಯಾನ್‌ಹೋಲ್ ಮತ್ತು ಇದಕ್ಕೆ ಪೈಪ್‌ಲೈನ್‌ಗಾಗಿ ತೋಡಿದ ಜಾಗದಲ್ಲಿ ಮಣ್ಣು ಕುಸಿದಿದ್ದು, ವಾಹನ ಸಂಚಾರಕ್ಕೆ ತೀರಾ ತೊಂದರೆಯಾಗಿದೆ.

ವೃತ್ತದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಯೂ ಆಗಿಲ್ಲ. ಗಟಾರ್ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಮಳೆಗಾಲದಲ್ಲಿ ಗುಡ್ಡದ ನೀರು ಇಲ್ಲಿಗೆ ಬರುವುದರಿಂದ ಸಮರ್ಪಕ ಗಟಾರ್‌ ಇಲ್ಲದೇ ನೀರು ಶೇಖರಣೆ ಆಗುತ್ತಿದೆ. ಗುರುವಾರ ಮುಂಜಾಗ್ರತಾ ಕ್ರಮವಾಗಿ ವೃತ್ತದ ಬಲಭಾಗದ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಿರುಗಾಡದಂತೆ ನಿರ್ಬಂಧಿಸಲಾಗಿತ್ತು. ತಾಲೂಕಿನಲ್ಲಿ ಗುರುವಾರ ಬೆಳಗ್ಗೆ ವರೆಗೆ ಒಟ್ಟೂ 129.6 ಮಿಮೀ ಮಳೆಯಾಗಿದೆ. ಬುಧವಾರ ರಾತ್ರಿ ಸುರಿದ ಮಳೆಗೆ ಬೈಲೂರು ಗ್ರಾಮದ ಬಸ್ತಿಮಕ್ಕಿಯ ರಾಮ ತಿಮ್ಮಪ್ಪ ಮೊಗೇರ ಅವರ ಮನೆಯ ಚಾವಣಿಗೆ ಹಾನಿಯಾಗಿದೆ. ಅದೇ ಗ್ರಾಮದ ಸುಬ್ರಾಯ ಮೊಗೇರ ಅವರ ಮನೆಯ ಚಾವಣಿ ಮಳೆಯಿಂದ ಹಾನಿಯಾಗಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.