ಸಾರಾಂಶ
ಬಾಳೆಹೊನ್ನೂರಿನಿಂದ ಮೇಲ್ಪಾಲ್ ಮೂಲಕ ಕೊಪ್ಪ ಸಂಪರ್ಕಿಸುವ ಅರಳೀಕೊಪ್ಪದ ಬಳಿ ಬೃಹತ್ ಗಾತ್ರದ ಗರಿಗೆ ಮರ ಬಿದ್ದು ರಸ್ತೆ ಸಂಚಾರ ಬಂದ್ ಆಗಿರುವುದು.
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಬಾಳೆಹೊನ್ನೂರು ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಪುನರ್ವಸು ಮಳೆ ಅಬ್ಬರ ಸೋಮವಾರವೂ ಮುಂದುವರೆದಿದೆ.ಬಾಳೆಹೊನ್ನೂರಿನಿಂದ ಮೇಲ್ಪಾಲ್ ಮೂಲಕ ಕೊಪ್ಪ ಸಂಪರ್ಕಿಸುವ ಅರಳೀಕೊಪ್ಪ ಬಳಿ ಭಾನುವಾರ ರಾತ್ರಿ 11.30ರ ವೇಳೆಗೆ ಬೃಹತ್ ಗಾತ್ರದ ಒಣಗಿದ ಗರಿಗೆ ಮರವೊಂದು ಮುಖ್ಯರಸ್ತೆಗೆ ಉರುಳಿ ಬಿದ್ದಿದ್ದು, ಸೋಮವಾರ ಬೆಳಗ್ಗೆ 12ಗಂಟೆ ವೇಳೆಗೆ ಮರವನ್ನು ತೆರವುಗೊಳಿಸಲಾಯಿತು. ಮುಖ್ಯರಸ್ತೆಗೆ ಮರ ಬಿದ್ದ ಪರಿಣಾಮ ಕೊಪ್ಪ-ಬಾಳೆಹೊನ್ನೂರು ನಡುವಿನ ಸಂಪರ್ಕ ಅರ್ಧ ದಿನಗಳ ಕಾಲ ಕಡಿತಗೊಂಡಿದ್ದು, ದಿನನಿತ್ಯ ಸಂಚರಿಸುವ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್ ಇಲ್ಲದೇ ಪರದಾಡಿದರು.
ಬಾರೀ ಮಳೆ ಗಾಳಿಗೆ ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಕಬ್ಬಿನಮನೆ ಸುಜಾತ ಎಂಬುವರ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿ ಹಾನಿಯಾಗಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಮೇಲೆ ಬಿದ್ದ ಮರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕದ ಸದಸ್ಯರು ತೆರವುಗೊಳಿಸಿ ಸಹಕರಿಸಿದರು. ಸ್ಥಳಕ್ಕೆ ಡಿಆರ್‌ಎಫ್‌ಒ ಪರಶುರಾಮ್, ಬನ್ನೂರು ಗ್ರಾಪಂ ಪಿಡಿಒ ರಾಘವೇಂದ್ರ, ಸದಸ್ಯರಾದ ಪವಿತ್ರ, ಗೋಪಾಲ್, ಶೌರ್ಯ ವಿಪತ್ತು ಸಂಯೋಜಕ ಫೆಲ್ಸಿ ಪಿಂಟೋ, ಕವಿತಾ, ಪ್ರದೀಪ್ ಭೇಟಿ ನೀಡಿ ಪರಿಶೀಲಿಸಿದರು.ಸೋಮವಾರ ಇಡೀ ದಿನ ಎಡೆಬಿಡದೆ ಮಳೆ ಸುರಿಯುತ್ತಲೇ ಇತ್ತು, ಭದ್ರಾನದಿಯಲ್ಲಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಮಳೆ ಇದೇ ರೀತಿ ಮುಂದುವರೆದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ನಿರಂತರ ಮಳೆ ಕಾರಣ ಹಲವು ತೋಟಗಳ ಕಾರ್ಮಿಕರಿಗೆ ರಜೆ ನೀಡಲಾಗಿತ್ತು. ಕೃಷಿ ಚಟುವಟಿಕೆಗೆ ಮಳೆ ಅಡ್ಡಿಯನ್ನುಂಟು ಮಾಡಿದೆ. ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಪಟ್ಟಣದಲ್ಲಿ ಜನರ ಓಡಾಟ ವಿರಳವಾಗಿತ್ತು.