ಸಾರಾಂಶ
ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ದೊಡ್ಡ ಮಳೆ ಸುರಿದರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗುವ ಮೂಲಕ ಶಾಲಾ ಆವರಣವು ಚರಂಡಿಯ ದುರ್ನಾತದಿಂದ ತುಂಬಿ ಹೋಗುತ್ತದೆ
ಲಕ್ಷ್ಮೇಶ್ವರ: ತಾಲೂಕಿನಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಮೀಪದ ಬಾಲೆಹೊಸೂರ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ಸರ್ಕಾರಿ ಪ್ರಾಥಮಿಕ ಶಾಲೆಗೆ ನೀರು ನುಗ್ಗಿ ಶಾಲಾ ಆವರಣ ಸಂಪೂರ್ಣ ಕೆಸರುಮಯವಾಗಿ ಮಾರ್ಪಟ್ಟ ಘಟನೆ ನಡೆದಿದೆ.
ತಾಲೂಕಿನಾದ್ಯಂತ ಕಳೆದ 2 ದಿನಗಳಿಂದ ಸುರಿಯುತ್ತಿರುವ ಮಳೆಯು ಸಾಕಷ್ಟು ಅವಾಂತರ ಸೃಷ್ಟಿಸಿದೆ. ಆದರಳ್ಳಿ, ಸೂರಣಗಿ, ಹುಲ್ಲೂರ, ಬಾಲೆಹೊಸೂರ, ನೆಲೂಗಲ್ಲ, ದೊಡ್ಡೂರ, ಬೂದಿಹಾಳ ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯು ಸುರಿಯುವ ಮೂಲಕ ರೈತರಲ್ಲಿ ಸಂತಸ ಮೂಡಿಸುವ ಜತೆಯಲ್ಲಿ ರೈತರ ಹೊಲದಲ್ಲಿನ ಬದುವುಗಳು ಕಿತ್ತು ಹೋಗಿ ಅಪಾರ ಪ್ರಮಾಣದ ಫಲವತ್ತಾದ ಮಣ್ಣು ಕೊಚ್ಚಿ ಹೋಗಿರುವುದು ರೈತರಿಗೆ ತಲೆ ನೋವಿನ ಸಂಗತಿಯಾಗಿದೆ.ಗುರುವಾರ ಸಂಜೆ ಸಮೀಪದ ಬಾಲೆಹೊಸೂರ ಗ್ರಾಮದಲ್ಲಿ ಸುರಿದ ಮಳೆಗೆ ದಿಂಗಾಲೇಶ್ವರ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ಹಾಗೂ ಚರಂಡಿ ನೀರು ನುಗ್ಗುವ ಮೂಲಕ ಶಾಲಾ ಆವರಣವು ಕೆಸರುಮಯವಾಗಿದ್ದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಈ ಕುರಿತು ತಾಪಂ ಮಾಜಿ ಸದಸ್ಯ ದೇವಣ್ಣ ಮತ್ತೂರ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ದೊಡ್ಡ ಮಳೆ ಸುರಿದರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗುವ ಮೂಲಕ ಶಾಲಾ ಆವರಣವು ಚರಂಡಿಯ ದುರ್ನಾತದಿಂದ ತುಂಬಿ ಹೋಗುತ್ತದೆ, ಪ್ರತಿ ವರ್ಷವು ಈ ಸಮಸ್ಯೆ ಉದ್ಭವವಾಗುತ್ತಿದ್ದರೂ ಗ್ರಾಪಂ ಆಡಳಿತ ಮಂಡಳಿಯು ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ ಎಂಬುದು ನೋವಿನ ಸಂಗತಿಯಾಗಿದೆ,ಆದ್ದರಿಂದ ಶೀಘ್ರದಲ್ಲಿ ಶಾಲೆಯೊಳಗೆ ನೀರು ನುಗ್ಗದಂತೆ ತಡೆಯುವ ಬಗ್ಗೆ ಕ್ರಮ ಕೈಗೊಳ್ಳುವ ಮೂಲಕ ಗ್ರಾಮದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.ಲಕ್ಷ್ಮೇಶ್ವರ ಪಟ್ಟಣದ ಸುತ್ತು ಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸುರಿಯಲು ಆರಂಭಿಸಿದ ಮಳೆಯು ರೈತರಲ್ಲಿ ನೆಮ್ಮದಿ ಮೂಡಿಸಿದೆ. ಪಟ್ಟಣದಲ್ಲಿ ಶುಕ್ರವಾರ ನಡೆಯುವ ವಾರದ ಸಂತೆಗೆ ಆಗಮಿಸಿದ್ದ ಜನರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಿದ್ದು ಕಂಡು ಬಂದಿತು. ತರಕಾರಿ ಹಾಗೂ ಹಣ್ಣಿನ ವ್ಯಾಪಾರಸ್ಥರು ಮಳೆಯಲ್ಲಿಯೇ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿತು.
ತಾಲೂಕಿನ ಹಲವಾರು ಕೆರೆಗಳಿಗೆ ನೀರು ಹರಿದು ಬರುವ ಮೂಲಕ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿದಂತೆ ಮಾಡಿದೆ ಹಾಗೂ ರೈತರು ಬಿತ್ತನೆ ಮಾಡಲು ಸೂಕ್ತವಾದ ಮಳೆಯು ಸುರಿಯುವ ಮೂಲಕ ಅನ್ನದಾತರ ನೆಮ್ಮದಿಗೆ ಕಾರಣವಾಗಿದೆ ಎನ್ನುತ್ತಾರೆ ಪಟ್ಟಣದ ಪ್ರಗತಿಪರ ರೈತ ಮಂಜುನಾಥ ಬಟ್ಟೂರ.