ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಮಲೆನಾಡಿನಲ್ಲಿ ಬುಧವಾರವೂ ಮಳೆ ಮುಂದುವರಿದರೂ ಅಬ್ಬರ ಮಾತ್ರ ತಗ್ಗಿತ್ತು. ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗಿತ್ತು. ಹಾಗಾಗಿ ಜಲಾವೃತವಾಗಿದ್ದ ರಸ್ತೆಗಳು ಸಹಜ ಸ್ಥಿತಿಗೆ ಮರಳಿವೆ.ಸತತ ಮಳೆಯಿಂದಾಗಿ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಕೆಲವೆಡೆ ಜಾನುವಾರು ಕೊಟ್ಟಿಗೆ, ವಾಸದ ಮನೆಗಳಿಗೆ ಹಾನಿ ಸಂಭವಿಸಿದೆ. ಕೆಲವೆಡೆ ಧರೆ ಕುಸಿದಿದೆ.
ಶೃಂಗೇರಿ ತಾಲೂಕಿನಾದ್ಯಂತ ಮಳೆ ಮುಂದವರಿದಿದೆ. ಆದರೆ, ಅಬ್ಬರ ಕಡಿಮೆಯಾಗಿದ್ದರಿಂದ ತುಂಗಾ ನದಿ ನೀರಿನ ಮಟ್ಟವೂ ಕುಗ್ಗಿದೆ. ಶೃಂಗೇರಿ- ಕಿಗ್ಗಾ, ಮಂಗಳೂರು ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದ್ದವು. ಆದರೆ, ಜಲ ದಿಗ್ಬಂಧನ ವಾಗಿದ್ದ ಶೃಂಗೇರಿ ಕೆಲವೆಡೆ ನದಿ ನೀರು ಕಡಿಮೆಯಾಗಿದೆ. ಅದ್ದರಿಂದ ಇಲ್ಲಿನ ಕುರುಬಗೇರಿಯಲ್ಲೂ ಪ್ರವಾಹ ಕಡಿಮೆ ಯಾಗಿತ್ತು. ಗಾಂಧಿ ಮೈದಾನದಲ್ಲೂ ನೀರು ಇಳಿಮುಖವಾಗಿದೆ. ಆದರೆ, ವಿದ್ಯಾರಣ್ಯಪುರ, ಭಾರತೀ ಬೀದಿಯಲ್ಲಿ ಪ್ರವಾಹ ಮುಂದುವರಿದಿತ್ತು. ಶೃಂಗೇರಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ತ್ಯಾವಣ ಬಳಿ ಕೆಲವೆಡೆ ಧರೆ ಕುಸಿದಿದೆ.ಕಳಸ ತಾಲೂಕಿನಲ್ಲಿ ಮಳೆ ಮುಂದುವರಿದಿದೆ. ಭದ್ರಾ ನದಿ ಆಸುಪಾಸಿನಲ್ಲಿ ಜಲಾವೃತವಾಗಿದ್ದ ಕೆಲವು ಪ್ರದೇಶಗಳಲ್ಲಿ ನೀರು ಇಳಿಮುಖವಾಗಿದೆ. ಬಾಳೆಹೊನ್ನೂರಿನಲ್ಲಿ ಪ್ರವಾಹ ಕಡಿಮೆಯಾಗಿತ್ತು. ಮೂಡಿಗೆರೆ ತಾಲೂಕಿನಲ್ಲಿ ಮಳೆ ತೀವ್ರವಾಗಿದೆ. ಇಲ್ಲಿನ ಗೋಣಿಬೀಡು ತಾಲೂಕಿನ ಹಾರ್ಮಕ್ಕಿ ಗ್ರಾಮದ ಲಕ್ಷ್ಮಣಗೌಡ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆ ಸಂಪೂರ್ಣವಾಗಿ ಹಾನಿಯಾಗಿದೆ. ಜಾನುವಾರುಗಳು ಪಾರಾಗಿವೆ. ಬಾಳೆ ಗ್ರಾಮದ ಕುಡ್ನಲ್ಲಿ ವಾಸಿ ಮಧು ಎಂಬುವವರಿಗೆ ಸೇರಿದ ಹಸು ಮೇಲೆ ಮರ ಬಿದ್ದು ಮೃತಪಟ್ಟಿದೆ. ಎನ್.ಆರ್.ಪುರ ತಾಲೂಕಿನಲ್ಲೂ ಮಳೆ ಮುಂದುವರಿದಿದೆ. ಕಳೆದ 24 ಗಂಟೆಗೆ ಹೋಲಿಕೆ ಮಾಡಿದರೆ ಮಳೆ ಪ್ರಮಾಣ ಹೆಚ್ಚಾಗಿತ್ತು.ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿ ಮಳೆ ನಿರಂತರವಾಗಿ ಬರುತ್ತಿತ್ತು. ಮಂಗಳವಾರ ಇಡೀ ರಾತ್ರಿ ಬಂದ ಮಳೆ ಬುಧವಾರ ಮಧ್ಯಾಹ್ನದ ನಂತರ ಸ್ವಲ್ಪ ಸಮಯ ಬಿಡುವು ನೀಡಿತಾದರೂ ತುಂತುರು ಮುಂದುವರಿದಿತ್ತು.
ತರೀಕೆರೆ ತಾಲೂಕಿನಲ್ಲೂ ಉತ್ತಮ ಮಳೆ ಬಂದಿದೆ. ಆದರೆ, ಕಡೂರು ತಾಲೂಕಿನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 3 ಗಂಟೆ ಯವರೆಗೆ ಬಿಸಿಲಿತ್ತು. ನಂತರ ತುಂತುರು ಮಳೆ ಆರಂಭವಾಯಿತು. ಅಜ್ಜಂಪುರ ತಾಲೂಕಿನ ಕೆಲವೆಡೆ ಸಾಧಾರಣ ಮಳೆ ಬಂದಿದೆ.ಮಳೆಯ ವಿವರ:ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದಿರುವ ಮಳೆ ವಿವರ.
ಎನ್.ಆರ್.ಪುರ - 63 ಮಿ.ಮೀ., ಬಾಳೆಹೊನ್ನೂರು- 60, ಮೆಗರಮಕ್ಕಿ- 74, ಮೂಡಿಗೆರೆ- 80, ಕೊಟ್ಟಿಗೆಹಾರ- 139, ಗೋಣಿಬೀಡು- 80, ಹೊಸಕೆರೆ- 149, ಕಳಸ- 113.4, ಶೃಂಗೇರಿ- 142.6, ಕಿಗ್ಗಾ- 225.8, ಚಿಕ್ಕಮಗಳೂರು- 17.3, ವಸ್ತಾರೆ- 47.6, ಆಲ್ದೂರು- 82, ಕೆ.ಆರ್.ಪೇಟೆ- 35, ಮಳಲೂರು- 55, ಅಜ್ಜಂಪುರ- 18.6, ಶಿವನಿ- 17 ಹಾಗೂ ಬುಕ್ಕಾಂಬೂದಿಯಲ್ಲಿ 25.1 ಮಿ.ಮೀ. ಮಳೆಯಾಗಿದೆ.