ಬಂಟ್ವಾಳದಲ್ಲಿ ಮುಂದುವರಿದ ಬಿರುಗಾಳಿ - ಮುಂಗಾರು ಮಳೆ ಆರ್ಭಟ: ಅಪಾರ ಪ್ರಮಾಣದ ಹಾನಿ

| Published : Jul 26 2024, 01:46 AM IST / Updated: Jul 26 2024, 11:47 AM IST

ಬಂಟ್ವಾಳದಲ್ಲಿ ಮುಂದುವರಿದ ಬಿರುಗಾಳಿ - ಮುಂಗಾರು ಮಳೆ ಆರ್ಭಟ: ಅಪಾರ ಪ್ರಮಾಣದ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಣಿ, ನೇರಳಕಟ್ಟೆ, ಅನಂತಾಡಿ. ಕಡೇಶ್ವಾಲ್ಯದಲ್ಲಿ ಬುಧವಾರ ರಾತ್ರಿ ಬೀಸಿದ ಬಿರುಗಾಳಿಗೆ ಮರಗಳು ಬಿದ್ದು, ಹಲವು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.

 ಬಂಟ್ವಾಳ : ತಾಲೂಕಿನಾದ್ಯಂತ ಗಾಳಿ ಮಳೆಯ ಆರ್ಭಟ ಬುಧವಾರ ರಾತ್ರಿಯಿಂದ ಜೋರಾಗಿದ್ದು ಹಲವೆಡೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.

ಮಾಣಿ, ನೇರಳಕಟ್ಟೆ, ಅನಂತಾಡಿ. ಕಡೇಶ್ವಾಲ್ಯದಲ್ಲಿ ಬುಧವಾರ ರಾತ್ರಿ ಬೀಸಿದ ಬಿರುಗಾಳಿಗೆ ಮರಗಳು ಬಿದ್ದು, ಹಲವು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ನೇತ್ರಾವತಿ ನದಿಯಲ್ಲಿಯೂ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು ೭.೫ ಮೀಟರ್‌ಗೆ ಏರಿಕೆಯಾಗಿದೆ.

ತಾಲೂಕಿನ ನೇರಳಕಟ್ಟೆ ಹಾಗೂ ಮಿತ್ತೂರಿನಲ್ಲಿ ಬೃಹತ್‌ ಮರಗಳು ನೆಲಕಚ್ಚಿದ್ದು, ಗುರುವಾರ ಮುಂಜಾನೆ ಈ ಮರಗಳ ತೆರವು ಕಾರ್ಯಾಚರಣೆ ನಡೆಯಿತು. ಹಲವು ಕಡೆಗಳಲ್ಲಿ ವಿದುತ್‌ ಕಂಬಗಳೂ ಧರಶಾಹಿಯಾಗಿದ್ದು, ವಿದ್ಯುತ ವ್ಯವಸ್ಥೆ ಸರಿಪಡಿಸಲು ಮೆಸ್ಕಾಂ ನೌಕಕರು ಹರಸಾಹಸಪಡಬೇಕಾಯಿತು.

ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಇಸ್ಮಾಯಿಲ್‌ ಮದನಿ ಎಂಬವರ ಮನೆಗೆ ಬೃಹತ್‌ ಗಾತ್ರದ ಮರವೊಂದು ಬಿದ್ದು, ನಷ್ಟ ಸಂಭವಿಸಿದೆ. ಘಟನೆವೇಳೆ ಮನೆಮಂದಿ ಮನೆಯೊಳಗೆ ಇದ್ದರೂ ಅಪಾಯದಿಂದ ಪಾರಾಗಿದ್ದಾರೆ. ಕಡೇಶಿವಾಲಯ ಗ್ರಾಮದ ವನೀತ ಬಿ. ರೈ ಮತ್ತು ಎನ್. ವೀರಪ್ಪ ನಾಯ್ಕರ ತೋಟಕ್ಕೆ ಗಾಳಿ ಮಳೆಯಿಂದ ಹಾನಿಯಾಗಿದ್ದು, ಸುಮಾರು 600 ಫಲಬರುವ ಅಡಕೆ ಮರ ಹಾಗೂ ತೆಂಗಿನ ಮರಗಳು ಬಿದ್ದು ನಷ್ಟವಾಗಿದೆ.

ಮಾಣಿಲ ಗ್ರಾಮದ ದಂಡೆಪ್ಪಾಡಿ ಎಂಬಲ್ಲಿ, ರಾಮ ಮೂಲ್ಯ ಎಂಬವರ ಮನೆ, ಕೊಟ್ಟಿಗೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ. ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಜಾನಕಿ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿರುತ್ತದೆ. ಈ ಮನೆಯಲ್ಲಿ ಯಾರೂ ವಾಸ ಇಲ್ಲ.

ಇಡ್ಕಿದು ಗ್ರಾಮದ ಅಬ್ದುಲ್ ರಹಿಮಾನ್‌ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಮನೆಮಂದಿಯನ್ನು ಮಗನ ಮನೆಗೆ ಸ್ಥಳಾಂತರಿಸಲಾಗಿದೆ. ಬಿ ಮೂಡ ಗ್ರಾಮದ ಮೊಡಂಕಾಪು ಎಂಬಲ್ಲಿ ವಾಸದ ಮನೆಯ ಗೋಡೆ ಕುಸಿದಿದೆ ಎಂದು ಕಂದಾಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.