ನರೇಗಾ ಯೋಜನೆಯಡಿ ಗ್ರಾಮೀಣರಿಗೆ ನಿರಂತರ ಕೆಲಸ

| Published : Mar 28 2024, 12:48 AM IST

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ತಾಲೂಕಿನ ಮಕರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಗುಬ್ಬಿ, ಯಡಗೋಡ ಗ್ರಾಮದಲ್ಲಿ ವಲಸೆ ಯಾಕ್ರೀ? ನಿಮ್ಮೂರಲ್ಲೆ ಉದ್ಯೋಗ ಖಾತ್ರಿ, ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಅಭಿಯಾನ ನಡೆಯಿತು.

ರಟ್ಟೀಹಳ್ಳಿ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ಒದಗಿಸಿ, ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲಾಗುತ್ತಿದೆ. ಕಾರಣ ಯಾರೊಬ್ಬರು ವಲಸೆ ಹೋಗದೆ ಸ್ಥಳೀಯವಾಗಿ ಉದ್ಯೋಗ ದೊರೆಯಲಿದೆ ಎಂದು ತಾಲೂಕು ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ ಹೇಳಿದರು.

ತಾಲೂಕಿನ ಮಕರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಗುಬ್ಬಿ, ಯಡಗೋಡ ಗ್ರಾಮದಲ್ಲಿ ಹಾವೇರಿ ಜಿಪಂ, ರಟ್ಟೀಹಳ್ಳಿ ತಾಪಂ, ಮಕರಿ ಗ್ರಾಪಂ ಸಹಯೋಗದಲ್ಲಿ ಕೈಗೊಂಡ ''''ವಲಸೆ ಯಾಕ್ರೀ? ನಿಮ್ಮೂರಲ್ಲೆ ಉದ್ಯೋಗ ಖಾತ್ರಿ, ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ'''' ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ಏಪ್ರಿಲ್ ಒಂದರಿಂದ ಮೇ ಅಂತ್ಯದ ವರೆಗೆ ಎರಡು ತಿಂಗಳ ಕಾಲ ಈ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದ ಉದ್ದೇಶ ಕೂಲಿ ಆಧಾರಿತ ಕಾಮಗಾರಿಗಳನ್ನು ಸೃಜಿಸಿ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವುದು. ವಿಶೇಷಚೇತನರು, ಮಹಿಳೆಯರು, ಹಿರಿಯ ನಾಗರಿಕರು, ಲಿಂಗತ್ವ ಅಲ್ಪಸಂಖ್ಯಾತರು ಹೀಗೆ ದುರ್ಬಲ ವರ್ಗಗಳಿಗೆ ಆದ್ಯತೆಯ ಮೇರೆಗೆ ಉದ್ಯೋಗ ಚೀಟಿ ಮತ್ತು ಕೆಲಸ ಒದಗಿಸುವುದು. ಬರಗಾಲ ಮತ್ತು ಬೇಸಿಗೆಯ ಈ ಹೊತ್ತಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಲಸೆ ಪ್ರಮಾಣವನ್ನು ತಗ್ಗಿಸುವುದಾಗಿದೆ ಎಂದರು. ಈಗಾಗಲೇ ಅಭಿಯಾನದಡಿ ಮನೆ ಮನೆಗೆ ಭೇಟಿ ನೀಡಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗೆ ನಮೂನೆ ಆರರಲ್ಲಿ ಬೇಡಿಕೆ ಪಡೆಯಲಾಗುತ್ತಿದೆ. ಏ. ೧ರಿಂದ ೨೦೨೪-೨೫ನೇ ಸಾಲಿನ ಆರ್ಥಿಕ ವರ್ಷದ ನೂರು ಮಾನವ ದಿನಗಳು ಪ್ರತಿ ಕುಟುಂಬಕ್ಕೆ ಸಿಗಲಿವೆ. ಹೀಗಾಗಿ ಅರ್ಹ ಕಾರ್ಮಿಕರು ಉದ್ಯೋಗ ಖಾತ್ರಿ ಕೆಲಸದಲ್ಲಿ ಪಾಲ್ಗೊಳ್ಳಬೇಕು, ವಿಶೇಷವಾಗಿ ಮಹಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.ಬೇಸಿಗೆಯ ಈ ಅವಧಿಯಲ್ಲಿ ಕೃಷಿ ಹೊಂಡ, ಬದುವು ನಿರ್ಮಾಣ, ಕೊಳವೆಬಾವಿ ಮರುಪೂರಣ ಘಟಕ ನಿರ್ಮಾಣ ಸೇರಿದಂತೆ ಹತ್ತು ಹಲವು ಕಾಮಗಾರಿ ಕೈಗೊಳ್ಳಲು ರೈತರಿಗೆ ಅವಕಾಶವಿದೆ. ಈ ಕಾಮಗಾರಿಗಳ ಪ್ರಯೋಜನ ಪಡೆದರೆ ಬರುವ ದಿನಗಳಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಹೀಗಾಗಿ ಇಂದಿನಿಂದಲೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಯೋಜನೆಯ ಸೌಲಭ್ಯ ಪಡೆಯಿರಿ, ಯೋಜನೆಯ ಸೌಲಭ್ಯ ನೀಡಲು ವಿಳಂಬ ಧೋರಣೆ ಅನುಸರಿಸಿದರೆ ಮೇಲಧಿಕಾರಿಗಳು ಅಥವಾ ಜಾಬ್ ಕಾರ್ಡ್‌ನಲ್ಲಿರುವ ನರೇಗಾ ಉಚಿತ ಸಹಾಯವಾಣಿಗೆ ಕರೆ ಮಾಡಿ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಎಪ್ಟಿ ಹೂವಪ್ಪ ಹಿರೇಕೊಣತಿ, ಗೀತಾ ಎಲದಹಳ್ಳಿ, ಕಾಯಕ ಬಂಧು ಮಹೇಶ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.