ಡಿಸಿಸಿ ಬ್ಯಾಂಕ್ ಮೂಲಕ ರೈತರ ಜೊತೆ ನಿರಂತರ ಸಂಪರ್ಕ

| Published : Jul 05 2024, 12:56 AM IST

ಸಾರಾಂಶ

ಡಿಸಿಸಿ ಬ್ಯಾಂಕಿನ ಸಾಗರ ಶಾಖೆ ಸುಸಜ್ಜಿತ ಕಟ್ಟಡ ಹೊಂದಬೇಕು. ಅದಕ್ಕಾಗಿ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ, ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು.

ಕನ್ನಡಪ್ರಭವಾರ್ತೆ ಸಾಗರ ಡಿಸಿಸಿ ಬ್ಯಾಂಕಿನ ಸಾಗರ ಶಾಖೆ ಸುಸಜ್ಜಿತ ಕಟ್ಟಡ ಹೊಂದಬೇಕು. ಅದಕ್ಕಾಗಿ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ, ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು. ಇಲ್ಲಿನ ಡಿಸಿಸಿ ಬ್ಯಾಂಕ್ ಶಾಖೆಗೆ ಗುರುವಾರ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಮೂಲಕ ರೈತರ ಜೊತೆ ನಿರಂತರ ಸಂಪರ್ಕ ಹೊಂದುವುದು, ರೈತರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುವುದು ನನ್ನ ಪ್ರಮುಖ ಉದ್ದೇಶ ಎಂದು ಹೇಳಿದರು. ಸಾಗರ ಡಿಸಿಸಿ ಬ್ಯಾಂಕ್ ಶೇ.೯೯ ರಷ್ಟು ಸಾಲ ವಸೂಲಾತಿ ನಡೆಸುತ್ತಿದೆ. ಒಟ್ಟು ೨೮೦ ಕೋಟಿ ರು. ವಾರ್ಷಿಕ ವಹಿವಾಟು ಹೊಂದಿದ್ದು ೨೦೦ ಕೋಟಿ ರು.ಗಳಿಗೂ ಹೆಚ್ಚು ಠೇವಣಿ ಹೊಂದಿದೆ. ಈ ತನಕ ೧೧೯ ಕೋಟಿ ರು. ಕೃಷಿ ಸಾಲ, ಸ್ವಸಹಾಯ ಸಂಘಗಳಿಗೆ ೧೫ ಕೋಟಿ ರು., ೪೦ ಕೋಟಿ ರು. ಕೃಷಿಯೇತರ ಚಟುವಟಿಕೆಗಳಿಗೆ ಸಾಲ ನೀಡಲಾಗಿದೆ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ಶಾಸಕರು, ಸಚಿವರು ಸ್ಥಳೀಯ ಜಿಲ್ಲಾ ಬ್ಯಾಂಕಿನ ನಿರ್ದೇಶಕರಾಗಿದ್ದಾರೆ. ಸಾಗರದಲ್ಲಿ ಮೊದಲ ಬಾರಿಗೆ ನಾನು ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ. ಚುನಾವಣೆಯಲ್ಲಿ ಇಷ್ಟೊಂದು ಪೈಪೋಟಿ ಇರುತ್ತದೆ ಎಂದು ಭಾವಿಸಿರಲಿಲ್ಲ. ಸಂಸದರು, ಮಾಜಿ ಶಾಸಕರು ಸಹ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಸಹಕಾರಿ ಕ್ಷೇತ್ರದಲ್ಲಿ ನನಗೆ ಸೇವೆ ಸಲ್ಲಿಸುವ ಅವಕಾಶ ಇದ್ದುದರಿಂದ ಗೆದ್ದು ಬಂದಿದ್ದೇನೆ ಎಂದರು. ಗ್ರಾಮೀಣ ಸೊಸೈಟಿಗಳಲ್ಲಿ ಗೊಬ್ಬರ ಮಾರಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಕೃಷಿ ವಿಶ್ವವಿದ್ಯಾಲಯದಿಂದ ತಾಲೂಕಿನ ಸೊಸೈಟಿಯ ಒಬ್ಬರಿಗೆ ತರಬೇತಿ ಕೊಡಿಸಲಾಗುತ್ತದೆ. ಕೃಷಿ ಇಲಾಖೆಯ ಉಪ ನಿರ್ದೇಶಕರು ಗೊಬ್ಬರ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ರಾಜ್ಯ ಸರ್ಕಾರದ ಸಹಕಾರ ಸಂಸ್ಥೆಗಳಿಗೆ ಬಿಡುಗಡೆಯಾಗಬೇಕಾಗಿರುವ ಅನುದಾನ ಬಿಡುಗಡೆಗೆ ಸಹಕಾರ ಸಚಿವ ರಾಜಣ್ಣ ಮೇಲೆ ಒತ್ತಡ ತರುವುದಾಗಿ ಹೇಳಿದರು. ಡಿಸಿಸಿ ಬ್ಯಾಂಕಿನ ಉಮೇಶ್, ಸ್ವಾಮಿ, ಲೋಕೇಶ್, ಪ್ರಭಾಕರ್, ವೆಂಕಟರಮಣ, ಪ್ರಮುಖರಾದ ಪ್ರಭಾಕರ್, ಚೇತನರಾಜ್ ಕಣ್ಣೂರು, ಸೋಮಶೇಖರ ಲ್ಯಾವಿಗೆರೆ, ಸುರೇಶಬಾಬು, ಗಣಪತಿ ಮಂಡಗಳಲೆ, ಕೆ.ಹೊಳೆಯಪ್ಪ, ಕಲಸೆ ಚಂದ್ರಪ್ಪ ಇನ್ನಿತರರು ಹಾಜರಿದ್ದರು.