ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿಯೊಬ್ಬರೂ ಒಂದೊಂದು ಗುರಿ ಇಟ್ಟುಕೊಂಡು ಸತತ ಪ್ರಯತ್ನದಿಂದ ಸಾಧನೆ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಎಸ್‌ಬಿಇಟಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಸಲಹೆ ನೀಡಿದರು.ಮಾಂಡವ್ಯ ಇಂಟಿಗ್ರೇಟೆಡ್ ಪದವಿಪೂರ್ವ ಕಾಲೇಜು ವತಿಯಿಂದ ಕಾಲೇಜಿನ ಆವರಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ವಿಫುಲ ಅವಕಾಶಗಳಿವೆ. ಆದರೆ, ಸಾಧನೆಯ ಹಾದಿಯನ್ನು ಬಿಟ್ಟು ಬೇರೆ ಕಡೆಗೆ ಗಮನಹರಿಸಿದರೆ ವಿದ್ಯಾರ್ಥಿ ಜೀವನವನ್ನೇ ಹಾಳುಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೋಷಕರು ತಮ್ಮ ಮಕ್ಕಳ ಭವಿಷ್ಯಉಜ್ವಲವಾಗಿರಬೇಕೆಂಬ ನಿಟ್ಟಿನಲ್ಲಿ ಒಳ್ಳೆಯ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗುತ್ತಾರೆ. ಆದರೆ ಅವರ ಆಸೆ, ಕನಸುಗಳನ್ನು ಸಾಕಾರಗೊಳಿಸುವುದು ವಿದ್ಯಾರ್ಥಿಗಳ ಕರ್ತವ್ಯವೂ ಆಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಎಲ್ಲವನ್ನೂ ತ್ಯೆಜಿಸಿ ಕೇವಲ ಜ್ಞಾನಾರ್ಜನೆಗೆ ಕಡೆಗೆ ಮಾತ್ರ ಗಮನ ಹರಿಸಬೇಕು ಎಂದರು.ಎಸ್‌ಬಿಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದೊಂದಿಗೆ ಶಾಲೆ-ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವುದರ ಜೊತೆಗೆ ಉಪನ್ಯಾಸಕರಿಗೆ ಒಳ್ಳೆಯ ಹೆಸರನ್ನು ತರಬೇಕು. ಪಠ್ಯದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆಯೂ ಗಮನ ಹರಿಸಬೇಕು. ಇದರೊಂದಿಗೆ ಸಂಸ್ಕೃತಿಯನ್ನು ಬೆಳೆಸುವುದು ನಿಮ್ಮ ಕರ್ತವ್ಯವಾಗಿದೆ ಎಂದರು.
ನಳಂದ ವಿದ್ಯಾಸಂಸ್ಥೆ ಅಧ್ಯಕ್ಷ ರಾಮಕೃಷ್ಣ, ಕೊತ್ತತ್ತಿ ವಿದ್ಯಾಗಣಪತಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಸಿ.ರಾಜು, ನಿವೃತ್ತ ಪ್ರಾಂಶುಪಾಲ ರಮೇಶ್, ಮಾಂಡವ್ಯ ಕಾಲೇಜಿನ ಪ್ರಾಧ್ಯಾಪಕ ಎಂ.ಅವಿನಾಶ್, ಡಾ.ಎಂ.ಪಿ.ಮೋಹನ್, ಡಿ.ಎಸ್.ರಾಘವೇಂದ್ರ, ಮುಖ್ಯಶಿಕ್ಷಕ ಕೆ.ಕೆ.ಚಂದ್ರಶೇಖರ್, ಕಾಲೇಜಿನ ಶೈಕ್ಷಣಿಕ ಪಾಲುದಾರರಾದ ಎಂ.ಎಸ್.ಅರ್ಜುನ್, ಸಿ.ಚನ್ನೇಶ್ ಇತರರಿದ್ದರು.ಬಳಿಕ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪರಿಶಿಷ್ಟರಿಗೆ ಕಾಂಗ್ರೆಸ್‌ನಿಂದ ನಿರಂತರ ಅನ್ಯಾಯ: ಆರೋಪಕನ್ನಡಪ್ರಭ ವಾರ್ತೆ ಮಂಡ್ಯ
ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗುತ್ತಿದ್ದು, ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಅಂಬೇಡ್ಕರ್ ವಾರಿಯರ್ಸ್ ರಾಜ್ಯಾಧ್ಯಕ್ಷ ಎಚ್.ಜಿ.ಗಂಗರಾಜ್ ಒತ್ತಾಯಿಸಿದರು.ಪರಿಶಿಷ್ಟರ ಮತಗಳಿಂದಲೇ ೧೩೪ ಕಾಂಗ್ರೆಸ್ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದು, ಇದುವರೆಗೂ ಸಮುದಾಯಕ್ಕೆ ಯಾವುದೇ ಹಕ್ಕು ಅವಕಾಶಗಳನ್ನು ಒದಗಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ ನೋಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪರಿಶಿಷ್ಟ ಸಮುದಾಯ ಕಾರಣರಾಗಿದ್ದಾರೆ. ಆದರೆ, ಸಮುದಾಯಕ್ಕೆ ಹಾಲಿ ಇರುವ ವಿವಿಧ ಯೋಜನೆಗಳನ್ನು ಮೊಟಕುಗೊಳಿಸಿ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಸಮುದಾಯಕ್ಕೆ ನ್ಯಾಯ ಒದಗಿಸುವ ದೃಷ್ಟಿಯಿಂದ ಕೂಡಲೇ ರಾಜ್ಯದಲ್ಲಿ ಪರಿಶಿಷ್ಟ ಮುಖ್ಯಮಂತ್ರಿ ನೇಮಕ ಮಾಡಬೇಕು, ಪರಿಶಿಷ್ಟ ಜಾತಿ, ವರ್ಗದ ಆಯೋಗಕ್ಕೆ ಕೂಡಲೇ ಅಧ್ಯಕ್ಷರನ್ನು ನೇಮಿಸಬೇಕು, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಮೀಸಲು ಹಣವನ್ನು ಇತರೆ ಯೋಜನೆಗೆ ಬಳಸದೆ, ವರ್ಗಾಯಿಸಿಕೊಂಡ ಹಣವನ್ನು ಮತ್ತೆ ಅದೇ ಯೋಜನೆಗೆ ತುಂಬಬೇಕು, ಯೋಜನೆಯ ಲೆಕ್ಕ ಪರಿಶೋಧನೆ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಮಯ್ಯ, ಎಂ.ಸಿ.ಚನ್ನಕೇಶವ, ವೇಣುಗೋಪಾಲ್, ಅರುಣ ಇತರರಿದ್ದರು.