ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಲಾರಿ ಮಾಲೀಕರು ಕರೆ ನೀಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಶಿರಾ ತಾಲೂಕು ಗೂಡ್ಸ್ ಕ್ಯಾರಿಯರ್ ಅಸೋಷಿಯೇಷನ್ ಬೆಂಬಲ ವ್ಯಕ್ತಪಡಿಸಿದ್ದು, ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ನಗರಸಭೆ ಸದಸ್ಯ ಆರ್.ರಾಮು, ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಮಾಲೀಕರು ಹಾಗೂ ಏಜೆಂಟ್ಸ್ ಅಸೋಸಿಯೇಷನ್ ಕರೆ ನೀಡಿದಂತೆ ಏ. ೧೪ರ ಮಧ್ಯರಾತ್ರಿಯಿಂದ ಸಾರಿಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ದೃಷ್ಟಿಯಿಂದ ಕರ್ನಾಟಕ ಸಾರಿಗೆಯನ್ನು ಬೆಂಬಲಿಸಲು ಶಿರಾ ತಾಲೂಕು ಮಾಲೀಕರ ಸಂಘವು ತೀರ್ಮಾನಿಸಿದೆ. ಶಿರಾದಲ್ಲೂ ತಾತ್ಕಾಲಿಕವಾಗಿ ಗೂಡ್ಸ್ ಮತ್ತು ಕ್ಯಾರಿಯರ್ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸರಕಾರ ಡಿಸೇಲ್ ದರ ಏರಿಸಿದ್ದು, ಇದರಿಂದ ಗೂಡ್ಸ್ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ರಾಜ್ಯ ರಸ್ತೆ ಟೋಲ್ ಗೇಟ್‌ಳಲ್ಲಿ ಮುಂದುವರೆದ ಸುಲಿಗೆ ಮತ್ತು ಕಿರುಕುಳ ಹೆಚ್ಚಿದೆ. ಹಳೇ ವಾಹನ ಫಿಟ್ನೆಸ್ ನವೀಕರಣ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾವನೆ ಇದ್ದು, ಇದು ಸಣ್ಣ ನಿರ್ವಾಹಕರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಎನ್.ಬಿ.ಎಫ್.ಸಿ. ಗಳು ಮತ್ತು ಮೈಕ್ರೋ ಫೈನಾನ್ಸ್ ಗಳ ಕಿರುಕುಳ ವಾಹನ ಮಾಲೀಕರ ಮಲೆ ಮಾನಸಿಕ ಒತ್ತಡ ಹೆಚ್ಚಿದೆ. ಈ ಎಲ್ಲಾ ಸಮಸ್ಯೆಗಳನ್ನು ಸರಕಾರ ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಿರಾ ತಾಲೂಕು ಗೂಡ್ಸ್ ಕ್ಯಾರಿಯರ್ ಅಸೋಷಿಯೇಷನ್ ಅಧ್ಯಕ್ಷ ಹೇಮಂತ್ ಕುಮಾರ್.ಟಿ.ಐ ಉಪಾಧ್ಯಕ್ಷ ದೇವರಾಜು.ವೈ.ಡಿ., ಭಾನುಪ್ರಕಾಶ್, ಪ್ರಧಾನ ಕಾರ್ಯದರ್ಶಿ ಜನಾರ್ಧನ್.ಬಿ.ಆರ್, ಖಜಾಂಚಿ ವೆಂಕಟೇಶ್.ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.