ಪರಿಸರದ ಮೇಲೆ ಮಾನವನಿಂದ ನಿರಂತರ ದಾಳಿ: ಬಿ.ಕೆ. ಸುರೇಖಾ

| Published : Aug 25 2025, 01:00 AM IST

ಪರಿಸರದ ಮೇಲೆ ಮಾನವನಿಂದ ನಿರಂತರ ದಾಳಿ: ಬಿ.ಕೆ. ಸುರೇಖಾ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರ ಸ್ನೇಹಿಬಳಗದ ವತಿಯಿಂದ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಕನಕದಾಸ ಉದ್ಯಾನದಲ್ಲಿ ಬಲು ಅಪರೂಪದ ಆಫ್ರಿಕನ್ ಬ್ಯಾವೋಬ್ ತಳಿಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಬ್ರಹ್ಮಕುಮಾರಿ ಬಿ.ಕೆ. ಸುರೇಖಾ ಚಾಲನೆ ನೀಡಿದರು.

ಬ್ಯಾಡಗಿ: ಪರಿಸರವೆಂದರೆ ಭೂಮಿಯನ್ನು ನಿಯಂತ್ರಿಸುವ ಮೂಲಕ ಜೀವಸಂಕುಲ ಉಳಿಸಿಕೊಳ್ಳುವಂತಹ ಗಾಳಿ, ನೀರು, ಭೂಮಿ, ಅರಣ್ಯ ಸಂವಹನ ಕ್ರಮಗಳಾಗಿವೆ. ಆದರೆ ಸ್ವಾರ್ಥ ಮನಸ್ಥಿತಿಯ ಮನುಷ್ಯ ಮುಂದಿನ ಪೀಳಿಗೆಯ ಭವಿಷ್ಯವನ್ನೂ ಲೆಕ್ಕಿಸದೇ ಅವುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವುದು ದುರ್ದೈವದ ಸಂಗತಿ ಎಂದು ಬ್ರಹ್ಮಕುಮಾರಿ ಬಿ.ಕೆ. ಸುರೇಖಾ ಖೇದ ವ್ಯಕ್ತಪಡಿಸಿದರು.

ಪರಿಸರ ಸ್ನೇಹಿಬಳಗದ ವತಿಯಿಂದ ಕಾಗಿನೆಲೆಯ ಕನಕದಾಸ ಉದ್ಯಾನದಲ್ಲಿ ಬಲು ಅಪರೂಪದ ಆಫ್ರಿಕನ್ ಬ್ಯಾವೋಬ್ ತಳಿಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೈಸರ್ಗಿಕ ಸಂಪನ್ಮೂಲಗಳಿಲ್ಲದೇ ಬದುಕು ದುಸ್ತರವಾಗಲಿದೆ. ಅರಣ್ಯನಾಶದಿಂದ ನಮ್ಮನ್ನೂ ಸೇರಿದಂತೆ ಜೀವ ಸಂಕುಲಗಳು ಹಾಗೂ ಪ್ರಾಣಿ, ಪಕ್ಷಿ ಜೀವ ವೈವಿಧ್ಯತೆಗೆ ಧಕ್ಕೆಯಾಗಲಿದೆ. ನಾವು ಉಸಿರಾಡುವ ಗಾಳಿ ವಾತಾವರಣ ನಿಯಂತ್ರಿಸದಿದ್ದರೆ, ಮಳೆ, ನದಿ, ಸರೋವರ ಮತ್ತು ಸಾಗರಗಳು ಅಂತರ್ಜಲ ನಿಯಂತ್ರಿಸಲಿವೆ ಎಂದರು.

ಕಾರ್ಖಾನೆಗಳಿಂದ ವಿಷಯುಕ್ತ ಅನಿಲ ಹೊರಬಿಡಲಾಗುತ್ತಿದ್ದು, ಇದರಿಂದ ಹವಾಮಾನ ಬದಲಾವಣೆಯಾಗುತ್ತಿದೆ. ಕಲುಷಿತ ಗಾಳಿ, ನೀರು, ಮಣ್ಣು, ಪ್ಲಾಸ್ಟಿಕ್, ಶಬ್ದ ಇವುಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ. ಹಿಮನದಿಗಳ ಕರಗುವಿಕೆಯಿಂದ ಜಾಗತಿಕವಾಗಿ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಪರಿಸರವನ್ನು ರಕ್ಷಿಸುವ ಮಾರ್ಗಗಗಳನ್ನು ನಾವೇ ಕಂಡುಕೊಳ್ಳಬೇಕಾಗಿದೆ. ಹೆಚ್ಚು ಮರಗಳನ್ನು ನೆಡುವುದು ಸೇರಿದಂತೆ ಕಾಡುಗಳನ್ನು ಸಂರಕ್ಷಿಸುವುದು, ತ್ಯಾಜ್ಯ ಮರು ಬಳಕೆ ಮಾಡುವುದು ಅಥವಾ ಕಡಿಮೆ ಮಾಡುವುದು, ಶುದ್ಧಗಾಳಿಯನ್ನು ಹೆಚ್ಚಿಸಿ ಮಾಲಿನ್ಯ ಕಡಿಮೆ ಮಾಡಿಕೊಳ್ಳಬೇಕಾಗಿದೆ ಎಂದರು.

ಅಪರೂಪದ ಆಫ್ರಿಕನ್ ಬ್ಯಾವೋಬ್: ಅಧ್ಯಕ್ಷ ಸಿ.ಎಚ್. ಮೋಹನಕುಮಾರ ಮಾತನಾಡಿ, ಆಫ್ರಿಕನ್ ಬ್ಯಾವೋಬ್‌ ಮರವನ್ನು ಸಾಮಾನ್ಯವಾಗಿ ಜೀವಮಾನದ ಮರ (ಲೈಫ್ ಟೈಮ್ ಟ್ರೀ ) ಎಂದು ಕರೆಯಲಾಗುತ್ತದೆ. ಮೂಲತಃ ಆಫ್ರಿಕ ದೇಶದ ಸಸ್ಯವಾಗಿದ್ದು, ಈ ಮರಗಳನ್ನು ಪೂಜಿಸಲಾಗುತ್ತದೆ. ಮೂಲದ ಪ್ರಕಾರ ಸಾವಿರ ವರ್ಷಗಳಷ್ಟು ಕಾಲ ಬದುಕಬಲ್ಲದು. ಸುಮಾರು 100 ಅಡಿಯ ವರೆಗೂ ಎತ್ತರ 33 ಅಡಿ ಅಗಲವಾಗಿ ಬೆಳೆಯುತ್ತದೆ. ಬೇರು ಮತ್ತು ಕಾಂಡಗಳಲ್ಲಿ ಸಾವಿರಾರು ಲೀಟರ್ ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಬರಗಾಲದಲ್ಲಿ ಕೂಡ ನೀರಿಲ್ಲದೇ ಬದುಕಬಲ್ಲುದು. ಬೇಸಿಗೆಯಲ್ಲಿ ಎಲೆಗಳು ಉದುರಲಿದ್ದು, ನೆರಳಿನ ಜತೆಗೆ ಹೂವು ಮತ್ತು ಹಣ್ಣು ನೀಡಲಿದೆ. ರಾತ್ರಿ ವೇಳೆಯಲ್ಲಿ ಬಿಳಿ ಬಣ್ಣದ ಹೂವುಗಳು ಅರಳುವುದು ಇದರ ಮತ್ತೊಂದು ವಿಶೇಷ. ಇದರ ಎಲೆಗಳನ್ನು ತರಕಾರಿಯಾಗಿ ಬೇಯಿಸಿಕೊಂಡು ಔಷಧೀಯ ಉಪಚಾರಕ್ಕೆ ಬಳಸಬಹುದಾಗಿದೆ. ತೊಗಟೆಯಿಂದ ಹಗ್ಗ, ಬುಟ್ಟಿಗಳನ್ನು ತಯಾರಿಸಿಕೊಳ್ಳಬಹುದಾಗಿದೆ ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಶಾಂತಮ್ಮ, ರತ್ನಕ್ಕ, ಕನಕ ನಿಸರ್ಗ ಮನೆಯ ಡಾ. ಜೈನು ಹಾಗೂ ಸಿಬ್ಬಂದಿ, ಬಸನಗೌಡ ತೋಟದ, ಶಂಭು ಬಣಕಾರ, ಹನುಮಂತಪ್ಪ ಹುಲಗಣ್ಣನವರ, ಶರೀಫಸಾಬ‌ ಅಗಡಿ, ಚಮನ್‌ಸಾಬ್‌, ಗುರು, ಅಮಿತ ಗರಸಂಗಿ ಇದ್ದರು.